ನಮಗೆ 2 ಬಾರಿ ಮೇಯರ್ ಸ್ಥಾನ ತಪ್ಪಿಹೋಗಿದೆ, ಜೆಡಿಎಸ್ ಜೊತೆ ಮಾತನಾಡಿದ್ದೇವೆ – ಸಚಿವ ಎಸ್.ಟಿ. ಸೋಮಶೇಖರ್
ಬಿಜೆಪಿಗೆ ಎರಡು ಬಾರಿ ಮೇಯರ್ ಅವಕಾಶ ತಪ್ಪಿ ಹೋಗಿದೆ. ಈ ಬಗ್ಗೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರಿಗೂ ಮನವಿ ಮಾಡಿದ್ದೇನೆ. ಅವರು ಹೈಕಮಾಂಡ್ ಜತೆ ಚರ್ಚಿಸಿ ಹೇಳುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಮಧ್ಯಾಹ್ನ 12ರವರೆಗೆ ಸಮಯವಿದೆ, ಕಾದು ನೋಡೋಣ: ಎಸ್.ಟಿ.ಸೋಮಶೇಖರ್
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ (Mysuru City Corporation Mayor Election) ಅತ್ತ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಗೊಂದಲ ಮುಂದುವರೆದಿದ್ದರೆ ಇತ್ತ ಹೇಗಾದರೂ ಮಾಡಿ ಮೇಯರ್ ಸ್ಥಾನವನ್ನು ಅಲಂಕರಿಸಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಎಸ್.ಟಿ.ಸೋಮಶೇಖರ್, ಈ ಬಾರಿ ಸೀರಿಯಸ್ಸಾಗಿ ಪ್ರಯತ್ನ ಮಾಡುತ್ತಿದ್ದೇವೆ. ಈಗ ಎಲ್ಲಾ ನಾಯಕರನ್ನು ಭೇಟಿ ಮಾಡುತ್ತೇನೆ. ನಮ್ಮ ಕಾರ್ಯಕರ್ತರಿಗೆ ಮೇಯರ್ ಸ್ಥಾನ ಸಿಗಬೇಕು ಎಂಬ ಆಸೆ ಇದೆ. ಈಗಾಗಲೇ 2 ಬಾರಿ ನಮಗೆ ಅವಕಾಶ ತಪ್ಪಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಎರಡು ಬಾರಿ ಮೇಯರ್ ಅವಕಾಶ ತಪ್ಪಿ ಹೋಗಿದೆ. ಈ ಬಗ್ಗೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರಿಗೂ ಮನವಿ ಮಾಡಿದ್ದೇನೆ. ಅವರು ಹೈಕಮಾಂಡ್ ಜತೆ ಚರ್ಚಿಸಿ ಹೇಳುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಮಧ್ಯಾಹ್ನ 12ರವರೆಗೆ ಸಮಯವಿದೆ, ಕಾದು ನೋಡೋಣ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ ಕೊನೇ ಕ್ಷಣದಲ್ಲಿ ಜೆಡಿಎಸ್ ಪಕ್ಷ ಮೈತ್ರಿಯ ಮಾತುಗಳನ್ನಾಡುವ ಮೂಲಕ ಕಾಂಗ್ರೆಸ್ಗೆ ಆಫರ್ ನೀಡಿದೆ. ಜೆಡಿಎಸ್‌ಗೆ ಮೇಯರ್ ಸ್ಥಾನ ಕೊಟ್ಟರೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತೇವೆ. ಮುಂದಿನ ಬಾರಿ ನೀವೇ ಮೇಯರ್ ಸ್ಥಾನ ತೆಗೆದುಕೊಳ್ಳಿ. ಈ ಬಾರಿ ಮಾತ್ರ ನಮಗೆ ಬಿಟ್ಟುಕೊಡಿ ಎಂದಿರುವ ಜೆಡಿಎಸ್ ಚುನಾವಣೆಗೆ ಕೆಲವೇ ಹೊತ್ತು ಬಾಕಿ ಇರುವಾಗ ಕುತೂಹಲ ಮೂಡಿಸಿದೆ. ಒಂದುವೇಳೆ, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆಗದೇ ಇದ್ದರೆ ಬಿಜೆಪಿಗೆ ಮೇಯರ್ ಸ್ಥಾನ ಸಿಗಲಿದ್ದು ಈಗ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಇದೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ನಮ್ಮ ನಾಯಕರಿಗೆ ವಾಸ್ತವ ಪರಿಸ್ಥಿತಿಯನ್ನು ತಿಳಿಸಿದ್ದೇನೆ. ಕಾಂಗ್ರೆಸ್ ಜತೆ ಜೆಡಿಎಸ್ ಕೈಜೋಡಿಸಲು ಸಿದ್ಧವಾಗಿದೆ. ಅಧಿಕಾರ ವಿಚಾರವಾಗಿ ಅಂತಿಮ ನಿರ್ಧಾರವಾಗಬೇಕಿದೆ. ನಮ್ಮ ನಾಯಕರ ನಿರ್ಧಾರ ತಿಳಿಸಿದ ಕೂಡಲೇ ಹೇಳುತ್ತೇನೆ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಮೈತ್ರಿ ಬಗ್ಗೆ ನಿರ್ಧಾರ ಅಂತಿಮವಾಗಲಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ಜೊತೆ ಮೈತ್ರಿ ಮುರಿದಿಲ್ಲ, ಆದರೆ ಮೇಯರ್ ಸ್ಥಾನ ಯಾರಿಗೆ ಎಂಬ ಗೊಂದಲ ಮುಂದುವರಿದಿದೆ. ನಮಗೆ ಮೇಯರ್ ಸ್ಥಾನ ಬಿಟ್ಟು ಕೊಡುವಂತೆ ಜೆಡಿಎಸ್‌ಗೆ ಕೇಳಿದ್ದೇವೆ. ಜೆಡಿಎಸ್ ಮೇಯರ್ ಸ್ಥಾನಕ್ಕೆ ಪಟ್ಟು ಮುಂದುವರಿಸಿದೆ. ಹೀಗಾಗಿ, ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು ಪಾಲಿಕೆಯಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರ ಸರ್ಕಸ್; ಮೇಯರ್ ಚುನಾವಣೆ ಬೆನ್ನಲ್ಲೇ ಸಾ.ರಾ.ಮಹೇಶ್ ಕಚೇರಿಗೆ ಭೇಟಿ
ಗರಿಗೆದರಿದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ; ಕೊನೆ ಕ್ಷಣದ ಲೆಕ್ಕಾಚಾರ ಹೇಗಿದೆ?
(BJP ST Somashekar on Mysuru City Corporation Mayor Election and Congress JDS Coalition)
Published On - 11:22 am, Wed, 25 August 21