AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾದಲ್ಲಿ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕೇಕ್ ಕಲಾಕೃತಿ!

ಮೈಸೂರು ದಸರಾ 2026ರ ವಿಶೇಷ ಕೇಕ್ ಪ್ರದರ್ಶನದಲ್ಲಿ ಫ್ಲೈದುಬೈ ವಿಮಾನದಲ್ಲಿ ಪ್ರಯಾಣಿಕರ ಜೀವ ಉಳಿಸಿದ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ವಿನೂತನ ಗೌರವ ಸಲ್ಲಿಸಲಾಗಿದೆ. ಜಗನ್ಮೋಹನ ಅರಮನೆ ಹಾಗೂ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಕೊಡುಗೆಯನ್ನು ಬಿಂಬಿಸುವ ಸುಂದರ ಕೇಕ್‌ಗಳೊಂದಿಗೆ ಪೈಲಟ್ ಸ್ಮಿತ್ ಅವರ ಧೈರ್ಯವನ್ನು ಸ್ಮರಿಸಲಾಗಿದೆ.

ಮೈಸೂರು ದಸರಾದಲ್ಲಿ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕೇಕ್ ಕಲಾಕೃತಿ!
ಸ್ಮಿತ್ ಮಚ್ಚರ್ ಕೇಕ್Image Credit source: ANI
ಭಾವನಾ ಹೆಗಡೆ
|

Updated on: Oct 21, 2026 | 10:28 AM

Share

ಮುಖ್ಯಾಂಶಗಳು

  • ಮೈಸೂರು ದಸರಾದಲ್ಲಿ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ವಿಶೇಷ ಗೌರವ
  • ವಿಮಾನದೊಳಗೆ ಹಲ್ಲೆ ನಡೆದರೂ 180 ಪ್ರಯಾಣಿಕರ ಪ್ರಾಣ ಉಳಿಸಿದ ವೀರ ಪೈಲಟ್
  • ದಸರಾ ಕೇಕ್ ಪ್ರದರ್ಶನದಲ್ಲಿ ಐತಿಹಾಸಿಕ ಸ್ಮಾರಕಗಳೊಂದಿಗೆ ಸ್ಮಿತ್ ಸಾಹಸಗಾಥೆ ಅನಾವರಣಗೊಂಡಿತು

ಮೈಸೂರು, ಅಕ್ಟೋಬರ್ 21: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವವು ತನ್ನ ವೈವಿಧ್ಯಮಯ ಹಾಗೂ ಆಕರ್ಷಕ ಕಾರ್ಯಕ್ರಮಗಳ ಮೂಲಕ ಸದಾ ಸುದ್ದಿಯಲ್ಲಿರುತ್ತದೆ. ಈ ಬಾರಿಯ ದಸರಾ ಉತ್ಸವದಲ್ಲಿ ಕೇವಲ ಸಾಂಪ್ರದಾಯಿಕ ವೈಭವವಷ್ಟೇ ಅಲ್ಲದೆ, ಪ್ರಾಣಾಪಾಯದ ನಡುವೆಯೂ ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅತ್ಯಂತ ವಿನೂತನ ಹಾಗೂ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲಾಗಿದೆ. ಫ್ಲೈದುಬೈ ವಿಮಾನದಲ್ಲಿ ನಡೆದ ಆಘಾತಕಾರಿ ಹಲ್ಲೆಯ ಸಂದರ್ಭದಲ್ಲಿಯೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ನೂರಾರು ಪ್ರಯಾಣಿಕರ ಜೀವ ಉಳಿಸಿದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಗಾಥೆಯನ್ನು ಕೇಕ್ ಕಲಾಕೃತಿಯ ಮೂಲಕ ಬಿಂಬಿಸಿರುವುದು ಎಲ್ಲರ ಗಮನ ಸೆಳೆದಿದೆ.

ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆ

ಕಳೆದ ಸೆಪ್ಟೆಂಬರ್ 30ರಂದು ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್ ಒಳಗೆ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಹ್ಯಾಚೆಟ್‌ನಿಂದ ಅನಿರೀಕ್ಷಿತವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಲೆಗೆ ಗಂಭೀರ ಗಾಯಗೊಂಡು ರಕ್ತಸಿಕ್ತರಾಗಿದ್ದರೂ ಹಾಗೂ ಪದೇಪದೇ ಪ್ರಜ್ಞೆತಪ್ಪುತ್ತಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಧೃತಿಗೆಡಲಿಲ್ಲ. “ನಾನು ಹೀಗೆ ಸಾಯಲು ಸಾಧ್ಯವಿಲ್ಲ, ಪ್ರಯಾಣಿಕರನ್ನು ರಕ್ಷಿಸಬೇಕು” ಎಂಬ ದೃಢಸಂಕಲ್ಪದೊಂದಿಗೆ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಹೋರಾಡಿದರು. ಅಂತಿಮವಾಗಿ ಕಾಕ್‌ಪಿಟ್ ಬಾಗಿಲು ತೆರೆದು ಸಿಬ್ಬಂದಿ ಹಾಗೂ ಪ್ರಯಾಣಿಕರ ಸಹಾಯದಿಂದ ದಾಳಿಕೋರನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಸೌದಿ ಅರೇಬಿಯಾದ ತಬುಕ್‌ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸುವ ಮೂಲಕ ಅವರು ಬರೋಬ್ಬರಿ 180 ಪ್ರಯಾಣಿಕರ ಪ್ರಾಣವನ್ನು ಕಾಪಾಡಿದ್ದರು. ಈ ದಿಟ್ಟತನವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದಾದ್ಯಂತ ಹಲವರು ಕೊಂಡಾಡಿದ್ದರು.

ಇದನ್ನೂ ಓದಿ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ: ಅಂಬಾರಿ ಹೊತ್ತು ಸಾಗಲಿರುವ ಪ್ರಶಾಂತ, ಇಂದಿನ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ

ಮೈಸೂರು ದಸರಾ ಕೇಕ್ ಪ್ರದರ್ಶನದಲ್ಲಿ ವಿಶೇಷ ಟ್ರಿಬ್ಯೂಟ್

ಮೈಸೂರು ದಸರಾ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಕೇಕ್ ಪ್ರದರ್ಶನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಈ ಕೆಚ್ಚೆದೆಯ ಸಾಹಸಕ್ಕೆ ವಿಶೇಷ ಗೌರವಾರ್ಪಣೆ ಮಾಡಲಾಗಿದೆ. ಅವರ ಧೈರ್ಯವನ್ನು ಸ್ಮರಿಸುವ ಈ ಆಕರ್ಷಕ ಕೇಕ್ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಇದರೊಂದಿಗೆ ಜಗನ್ಮೋಹನ ಅರಮನೆಯ ಐತಿಹಾಸಿಕ ವೈಭವ, ಮಹಿಳಾ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಸ್ಮರಣೆ ಹಾಗೂ ವಿವಿಧ ಪಕ್ಷಿ-ಪ್ರಾಣಿಗಳ ಆಕೃತಿಗಳ ಥೀಮ್ ಆಧರಿಸಿದ ಸುಂದರ ಕೇಕ್‌ಗಳು ಪ್ರದರ್ಶನಗೊಂಡವು. ಇತಿಹಾಸದ ಹೆಗ್ಗುರುತುಗಳ ಜೊತೆಗೆ ಸಮಕಾಲೀನ ಕಾಲದ ನೈಜ ವೀರತ್ವದ ಕಥೆಯನ್ನು ದಸರಾ ವೇದಿಕೆಯಲ್ಲಿ ಪ್ರದರ್ಶಿಸಿರುವುದು ಈ ಬಾರಿಯ ಉತ್ಸವದ ಮತ್ತೊಂದು ವಿಶೇಷತೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More