ದಿಲ್ಲಿಯಿಂದ ನೇರವಾಗಿ ಮೈಸೂರಿನ ಸುತ್ತೂರು ಜಾತ್ರೆಗೆ ಬಂದು ಸಿದ್ದರಾಮಯ್ಯ ಹೇಳಿದ್ದಿಷ್ಟು
Suttur Jatra Mahotsava: ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ವಾಮೀಜಿಗೆ ಮಾತುಕೊಟ್ಟಿದ್ದೆ, ಹೀಗಾಗಿ ನೇರವಾಗಿ ಇಲ್ಲಿಗೆ ಬಂದೆ. ಪ್ರತಿವರ್ಷ ಸುತ್ತೂರು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದೇನೆ. ಸುತ್ತೂರು ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಎಲ್ಲಾ ಜಾತಿ, ಭಾಷೆಯವರು ಸೇರಿ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಈ ಜಾತ್ರೆ ಬಹಳ ವಿಶೇಷವಾಗಿ ನಡೆಯುತ್ತೆ ಎಂದು ಹೇಳಿದ್ದಾರೆ.
ಮೈಸೂರು, ಫೆಬ್ರವರಿ 7: ಮನುಷ್ಯರು ಮನುಷ್ಯರನ್ನ ದ್ವೇಷ ಮಾಡಬಾರದು. ದೇಷ ಮಾಡಿದರೆ ಸಹೋದರತ್ವದಿಂದ ಇರಲು ಸಾಧ್ಯವಿಲ್ಲ. ಕೆಲವರು ಬೆಂಕಿ ಹಚ್ಚಿ, ಜಾತಿ ಧರ್ಮವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದೆಲ್ಲವನ್ನು ಮೀರಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಈ ಜಾತ್ರೆಯಿಂದ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯ ಸುತ್ತೂರು ಜಾತ್ರೆ (Suttur Jatra Mahotsava) ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಹುಟ್ಟುವಾಗ ವಿಶ್ವಮಾನರಾಗಿ ಹುಟ್ಟುತ್ತೇವೆ. ಬೆಳೆಯುತ್ತ ಅಲ್ಪಮಾನವಾರುತ್ತೇವೆ ಎಂದು ಕುವೆಂಪುರವರು ಹೇಳಿದ್ದಾರೆ. ಇವನ್ಯಾರವ ಎನ್ನುವ ಸಮಾಜ ಇರಬಾರದು. ಇವ ನಮ್ಮವ ಎಂಬ ಸಮಾಜ ಇರಬೇಕು ಎಂದು ಹೇಳಿದ್ದಾರೆ.
ಜಾತಿಗೆ ನೇತು ಹಾಕಿಕೊಂಡು ಇರಬಾರದು. ಕೆಲವರು ಜ್ಞಾನ ಇವರದ್ದೆ ಸ್ವತ್ತು ಎಂದು ಕೊಂಡಿದ್ದರು. ಜ್ಞಾನ ಎಲ್ಲರ ಸ್ವತ್ತು. ಮನುಷ್ಯರಾಗಿ ನಡಕೊಂಡರೆ ಶ್ರೇಷ್ಠತೆ. ಯಾವುದೋ ಜಾತಿಯಲ್ಲಿ ಹುಟ್ಟುವುದು ಶ್ರೇಷ್ಠತೆಯಲ್ಲ. ಇಂದಿಗೂ ಮೇಲ್ವರ್ಗ ಕೆಳವರ್ಗ ಅಂತ ಇದೆ. ಇಂದಿಗೂ ಸಮಾನತೆ ಬಂದಿಲ್ಲ. ಇದರಿಂದ ಎಲ್ಲರಿಗೂ ಅವಕಾಶ ಸಿಗಬೇಕು. ಎಲ್ಲರಿಗೂ ಮತ ಹಾಕುವ ಸ್ವತಂತ್ರದ ಸಾರ್ಥಕವಲ್ಲ. ಎಲ್ಲರಿಗೂ ಆರ್ಥಿಕ ಸಾಮಾಜಿಕ ಶಕ್ತಿ ಬಂದಾಗ ಸ್ವತಂತ್ರ ಬಂದಿದ್ದು ಸಾರ್ಥಕ ಎಂದರು.
ಸಂವಿಧಾನ ಬದಲಾಯಿಸುವ ಕೆಲಸ ನಡೆಯತ್ತಿದೆ
ಬಸವಣ್ಣರು ಅನುಭವ ಮಂಟಪ ಮಾಡಿದರು. ಅದೇ ರೀತಿ ಇಲ್ಲಿ ಕುಳಿತಿದ್ದೇವೆ. ಡಿಸಿ ಒಕ್ಕಲಿಗರಿದ್ದಾರೆ. ನಾನು ಕುರುಬ ಇಲ್ಲಿ ಕುಳಿತಿದ್ದೇನೆ. ದಲಿತರು, ಕ್ರಿಶ್ಚಿಯನ್ರು, ಲಿಂಗಾಯತರು ಎಲ್ಲಾ ಜಾತಿವರು ಒಟ್ಟಿಗೆ ಕೂರವ ಕೆಲಸವಾಗಬೇಕು. ಶಿಕ್ಷಣ ಸಿಗಲಿಲ್ಲ ಅಂದರೆ ನಾನು ಸಿಎಂ ಆಗುತ್ತಿರಲಿಲ್ಲ. ಸಂವಿಧಾನ ಹಾಗೂ ಶಿಕ್ಷಣದಿಂದ ನಾನು ಸಿಎಂ ಆದೆ. ಸಂವಿಧಾನ ಬದಲಾಯಿಸುವ ಕೆಲಸ ನಡೆಯತ್ತಿದೆ. ಕೆಲ ಪಟಭದ್ರ ಹಿತಾಸಕ್ತಿ ಈ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಹಲವು ಕಾರಣಗಳಿವೆ ಎಂದ ಬಿವೈ ವಿಜಯೇಂದ್ರ
ನಾನು ಸಿಎಂ ಆಗಲು ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಎಂದೆಂದಿಗೂ ಇರ್ತಾರೆ. ಹಿಂದೆಯೂ ಇದ್ದರೂ, ಈಗಲೂ ಇದ್ದಾರೆ, ಮುಂದೆಯೂ ಇದ್ದಾರೆ. ಎಲ್ಲರೂ ಕೂಡ ಇಂತಹವರ ವಿರುದ್ಧ ಎಚ್ಚರಿಕೆಯಿಂದಿರಿ. ಆರ್ಥಿಕ, ಸಮಾಜಿಕ ಸಮಾನತೆ ವಿದ್ಯೆಯಿಂದ ಮಾತ್ರ ಸಿಗಲು ಸಾಧ್ಯ. ಕೇವಲ ಭಾಷಣ ಮಾಡುವುದು ಆಗಬಾರದು. ಕೇವಲ ವಚನ ಹೇಳಿ ನಂತರ ಜಾತಿ ಕೇಳುತ್ತಾರೆ ಎಂದರು.
ಭಾಷಣ ಕೃತಿಯಾಗಬೇಕು. ಸಮ ಸಮಾಜ ನಿರ್ಮಾಣ ಆಗಬೇಕು. ಬಸವಣ್ಣ ವಚನ ಹೇಳಿ 800 ವರ್ಷ ಕಳೆದರೂ ಕೂಡ ಸಮಸಮಾಜ ನಿರ್ಮಾಣ ಆಗಿಲ್ಲ. ಬಹಳಷ್ಟು ಮಂದಿ ವಿದ್ಯಾವಂತರಾಗಿದ್ದಾರೆ. ಬಿಎ, ಎಂಎ, ಬಿಎಸ್ಸಿ, ಎಂಎಸ್ಸಿ ಓದಿರ್ತಾರೆ. ಹಣೆಬರಹ, ಹಿಂದಿನ ಜನ್ಮ ನಂಬುತ್ತಾರೆ. ಯಾರಿಗೆ ಯಾವ ಜನ್ಮ ಇರುವುದಿಲ್ಲ. ಅಯ್ಯಾ ಎಂದರೆ ಸ್ವರ್ಗ. ಎಲವೋ ಎಂದರೆ ನರಕ. ಮತ್ತೆ ಸ್ವರ್ಗ ಎಲ್ಲಿದೆ? ನರಕ ಎಲ್ಲಿದೆ? ಸತ್ಯವೇ ಸ್ವರ್ಗ. ಮಿತ್ಯವೇ ನರಕ.
ಯಾವ ಹಣೆಬರಹವೂ ಇಲ್ಲ
ಕೆಲವರು ಬಡವರಾಗಿರ್ತಾರೆ. ಚಡ್ಡಿ ಹಾಕಿಕೊಂಡು ಓಡಾಡ್ತಾರೆ. ಅವರನ್ನ ಕೇಳಿದರೆ ಹಣೆಬರಹ ಅಂತಾರೆ. ಹಣೆಬರಹ ಯಾರು ಬರೀತಾರೆ? ನಾನು ಹಿಂದಿನ ಜನ್ಮದಲ್ಲಿ ಒಳ್ಳೆ ಕೆಲಸ ಮಾಡಿದ್ನಾ?. ನಾನು ಒಳ್ಳೆ ಕೆಲಸ ಮಾಡಿದ್ದಕ್ಕೆ ಸಿಎಂ ಆಗಿದ್ದಿನಾ? ನನ್ನ ತಮ್ಮಂದಿರು ಕೆಟ್ಟ ಕೆಲಸ ಮಾಡಿದ್ನಾ? ಅದಕ್ಕೆ ಅವರು ಅವಿದ್ಯಾವಂತರಾ? ನೀನು ಡಾಕ್ಟರ್ ಓದಿದ್ದಿಯಾ ? ಯಾವ ಹಣೆಬರಹವೂ ಇಲ್ಲ. ಹಿಂದಿನ ಜನ್ಮವೂ ಇಲ್ಲ. ಮುಂದಿನ ಜನ್ಮವೂ ಇಲ್ಲ. ಈ ಬದುಕನ್ನ ಸಂಪೂರ್ಣ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ರಾಜ್ಯ ಬಿಜೆಪಿ ಕಚೇರಿ ಎದುರು ಯುವ ಕಾಂಗ್ರೆಸ್ ಪ್ರತಿಭಟನೆ: ಧರಣಿನಿರತ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸ್
ಮನುಷ್ಯನಿಗೆ ಸಾವು- ಬದುಕು ಅನಿವಾರ್ಯ. ಸಾವು ಗ್ಯಾರಂಟಿ. ಎಲ್ಲರೂ ಸಾಯಲೇಬೇಕು. ಪ್ರತಿಯೊಬ್ಬರೂ ಕೂಡ ಸಾಯಲೇಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನ ಅವಿದ್ಯಾವಂತರಾಗಿ ಮಾಡಬೇಡಿ. ಕಂದಾಚಾರದಿಂದ ದೂರ ಇರಿಸಿ ಮನುಷ್ಯರನ್ನಾಗಿ ಮಾಡಿ. ಮಾನವೀಯ ಮೌಲ್ಯಗಳನ್ನ ಬೆಳೆಸು ಕೆಲಸ ಮಾಡಿ.
ಧರ್ಮ ಮನುಷ್ಯನಿಗೋಸ್ಕರ ಇರುವುದು. ನಾವು ಧರ್ಮಕ್ಕೋಸ್ಕರವಲ್ಲ. ಧರ್ಮ ಎಂದರೆ ವೇ ಆಫ್ ಲೈಫ್. ದಯಯೇ ಧರ್ಮದ ಮೂಲವಯ್ಯ. ದಯೇ ಇಲ್ಲದ ಧರ್ಮ ಯಾವುದಯ್ಯ. ಧರ್ಮ ಜಾಗೃತಿ ಎಂದರೆ ಮನುಷ್ಯತ್ವ ಬೆಳೆಸಿಕೊಳ್ಳುವುದು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.