
ಬೆಂಗಳೂರು, ಸೆಪ್ಟೆಂಬರ್ 13: ಗಣಪತಿ ಕೂರಿಸುವ ಯುವಕರಿಗೆ ಟಿ.ನರಸೀಪುರ ಪಿಐ ಧಮ್ಕಿ ಆರೋಪ ವಿಚಾರ ಸಂಬಂಧ ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಠಾಣೆಗೆ ನುಗ್ಗಿದ ಬಳಿಕ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಗೃಹ ಸಚಿವರಿಗೇ ಖಡಕ್ ತಿರುಗೇಟು ನೀಡಿರುವ ಮಾಜಿ ಸಂಸದ, ನನ್ನ ಮೇಲೆ 21 FIR ಇದೆ, ಇನ್ನೊಂದು ಕೇಸ್ ಹಾಕಿದರೂ ನಾನು ತಲೆ ಕೆಡಿಸಿಕೊಳ್ಳಲ್ಲ. ವಿಜೃಂಭಣೆಯ ಗಣೇಶೋತ್ಸವಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದಿದ್ದಾರೆ.
ಇದೇ ವೇಳೆ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರತಾಪ್ ಸಿಂಹ, ಕುಮಾರಸ್ವಾಮಿ KPSC ಹಗರಣದ ಬಗ್ಗೆ ಮಾತಾಡಿದ್ಮೇಲೆ ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಸೇರುವ ಸ್ಥಿತಿಯಲ್ಲಿದ್ದಾರೆ. ಪ್ರಿಯಾಂಕ್ ಕನಸಿನಲ್ಲಿ ಬರೀ ಪರಪ್ಪನ ಅಗ್ರಹಾರವೇ ಬರ್ತಿದೆ ಎದು ವ್ಯಂಗ್ಯವಾಡಿದ್ದಾರೆ. ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಯುವಕರ ಮೇಲೆ ದರ್ಪದ ಮಾತಾಡಿ ಧಮ್ಕಿ ಹಾಕಿದ್ದಾರೆ. ಕೇಸ್ ಹಾಕುವ ಭಯ ಟಿ.ನರಸೀಪುರದ ಜನರಿಗಿದ್ದು, ಧನಂಜಯ್ಗೆ ಕ್ಲಾಸ್ ತೆಗೆದುಕೊಳ್ಳಲು ಟಿ.ನರಸೀಪುರಕ್ಕೆ ಅಶೋಕ್ ಬರ್ತಿದ್ದಾರೆ ಎಂದೂ ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: “ಹೇಳಲ್ಲ, ಮಾಡಿ ತೋರಿಸ್ತೀನಿ”: ಮಸೀದಿ ಬಳಿ ಗಣೇಶ ಮೆರವಣಿಗೆ, ಪಟಾಕಿ ಹೊಡೆಯುವಂತಿಲ್ಲ ಎಂದ ಇನ್ಸ್‌ಪೆಕ್ಟರ್ ಧನಂಜಯ್
ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂಬ ಪ್ರತಾಪ್ ಸಿಂಹ ಹೇಳಿಕೆ ಸಂಬಂಧ ಎಕ್ಸ್ ಪೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ, ಮೈಸೂರಿನ ಕಡೆಯ ಪೇಟೆ ರೌಡಿಯೊಬ್ಬ ಪೊಲೀಸರನ್ನ ಬೆದರಿಸುವ ಮಾತಾಡಿದ್ದಾನೆ. ಠಾಣೆಗೆ ನುಗ್ತೇನೆ ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ. ಠಾಣೆಗೆ ನುಗ್ಗಿದ ಬಳಿಕ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುತ್ತೆ. ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದ್ರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನಗಳನ್ನು ಸಹಿಸುವುದಿಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕಸಿಯುವುದಕ್ಕೆ ಬಿಡುವುದಿಲ್ಲ. ಅಸ್ತಿತ್ವ ಕಳೆದುಕೊಂಡ ಕತ್ತಲೆ ಜಗತ್ತಿನ ಆತ್ಮದಂತೆ ಪರಿತಪಿಸುತ್ತಿರುವ ಆ ವ್ಯಕ್ತಿ ವಾರಕ್ಕೊಮ್ಮೆ ಗೋಗರೆದು ಮಾಧ್ಯಮಗಳನ್ನ ಕರೆಸಿ ಅಸಂಬದ್ಧ ಹೇಳಿಕೆ ನೀಡುತ್ತಾ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಎಚ್ಚರಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Sun, 13 September 26