ಮೈಸೂರು ಚಾಮುಂಡೇಶ್ವರಿ ದೇವಿ ಲಡ್ಡು ಪ್ರಸಾದಕ್ಕೂ ಗ್ಯಾಸ್ ಕೊರತೆ ಬಿಸಿ: ಲಡ್ಡು ತಯಾರಿಸಲು ನಿರ್ಮಾಣವಾಗ್ತಿದೆ ವಿಶೇಷ ಸೌದೆ ಒಲೆ!

ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇಗುಲದಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದೆ. ಇದರಿಂದಾಗಿ, ಪ್ರತಿದಿನ ಸಾವಿರಾರು ಲಡ್ಡುಗಳನ್ನು ತಯಾರಿಸಲು ದೇವಾಲಯ ಪ್ರಾಧಿಕಾರ ವಿಶೇಷ ಸೌದೆ ಒಲೆಯನ್ನು ನಿರ್ಮಿಸುತ್ತಿದೆ. ಗ್ಯಾಸ್ ಕೊರತೆಯಿಂದ ಪ್ರಸಾದ ವಿತರಣೆಗೆ ಯಾವುದೇ ಅಡಚಣೆಯಾಗದಂತೆ ಈ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ.

ಮೈಸೂರು ಚಾಮುಂಡೇಶ್ವರಿ ದೇವಿ ಲಡ್ಡು ಪ್ರಸಾದಕ್ಕೂ ಗ್ಯಾಸ್ ಕೊರತೆ ಬಿಸಿ: ಲಡ್ಡು ತಯಾರಿಸಲು ನಿರ್ಮಾಣವಾಗ್ತಿದೆ ವಿಶೇಷ ಸೌದೆ ಒಲೆ!
ಚಾಮುಂಡಿ ಬೆಟ್ಟ ಲಡ್ಡು ತಯಾರಿ
Image Credit source: tv9
Edited By:

Updated on: Mar 15, 2026 | 12:25 PM

ಮೈಸೂರು, ಮಾರ್ಚ್​ 15: ಕರ್ನಾಟಕದಾದ್ಯಂತ (Karnataka) ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗುತ್ತಿರುವ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಅದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಪ್ರಸಿದ್ಧ ಚಾಮುಂಡೇಶ್ವರಿ ದೇವಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಗೆ ಗ್ಯಾಸ್ ಕೊರತೆ ತಲೆದೋರಿರುವುದರಿಂದ ಇದೀಗ ಸೌದೆ ಒಲೆ ಬಳಸಿ ಲಡ್ಡು ತಯಾರಿಸಲು ದೇವಸ್ಥಾನ ಪ್ರಾಧಿಕಾರ ಮುಂದಾಗಿದೆ. ಅದಕ್ಕಾಗಿ ವಿಶೇಷ ರೀತಿಯ ಸೌದೆ ಒಲೆಯನ್ನೂ ಸಿದ್ಧಪಡಿಸಲಾಗುತ್ತಿದೆ.

ಸಾಮಾನ್ಯವಾಗಿ ಲಡ್ಡು ಪ್ರಸಾದವನ್ನು ಗ್ಯಾಸ್ ಒಲೆಯಲ್ಲಿ ತಯಾರಿಸಲಾಗುತ್ತದೆ. ಆದರೆ ಸದ್ಯ ಕಮರ್ಷಿಯಲ್ ಸಿಲಿಂಡರ್‌ಗಳು ಸಮರ್ಪಕವಾಗಿ ದೊರೆಯದ ಕಾರಣ ದೇವಸ್ಥಾನದಲ್ಲಿ ವಿಶೇಷವಾಗಿ ಸೌದೆ ಒಲೆ ನಿರ್ಮಿಸುವ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.

ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರತಿದಿನ ಸರಾಸರಿ 10 ಸಾವಿರ ಲಡ್ಡು ಪ್ರಸಾದ ತಯಾರಿಸಲಾಗುತ್ತದೆ. ಇದಕ್ಕಾಗಿ ಸುಮಾರು 5 ರಿಂದ 6 ವಾಣಿಜ್ಯ ಸಿಲಿಂಡರ್‌ಗಳ ಅಗತ್ಯ ಇರುತ್ತದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ ಸುಮಾರು 20 ಸಾವಿರ ಲಡ್ಡುಗಳು ತಯಾರಿಸಲಾಗುತ್ತವೆ. ಆ ಸಂದರ್ಭದಲ್ಲಿ 10 ರಿಂದ 12 ಸಿಲಿಂಡರ್‌ಗಳ ಅಗತ್ಯ ಉಂಟಾಗುತ್ತದೆ.

ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಸರಬರಾಜು ಸಮರ್ಪಕವಾಗಿ ಆಗದ ಕಾರಣ ದೇವಸ್ಥಾನ ಪ್ರಾಧಿಕಾರ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದು, ಸೌದೆ ಒಲೆಯಲ್ಲೇ ಲಡ್ಡು ಪ್ರಸಾದ ತಯಾರಿಸಲು ತೀರ್ಮಾನಿಸಿದೆ. ಈ ಕ್ರಮದಿಂದ ಭಕ್ತರಿಗೆ ಪ್ರಸಾದ ವಿತರಣೆ ಯಾವುದೇ ವ್ಯತ್ಯಯವಾಗದೆ ಈಗಿರುವ ರೀತಿಯಲ್ಲೇ ವ್ಯವಸ್ಥೆ ಮುಂದುವರಿಯಲಿದೆ ಎಂದು ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲೂ ಗ್ಯಾಸ್ ಕೊರತೆ ಸಮಸ್ಯೆ ಉಂಟುಮಾಡಿರುವ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಪ್ರಸಾದ ವಿತರಣೆಯಾಗುತ್ತಿದ್ದು, ದಿನವೊಂದಕ್ಕೆ 20 ಗ್ಯಾಸ್ ಸಿಲಿಂಡರ್ ಬೇಕು. ಆದರೆ, ಅಷ್ಟೊಂದು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಏಜೆನ್ಸಿಯವರು ಹೇಳಿದ್ದರಿಂದ ಊಟದ ಮೆನು‌ ಬದಲಾವಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿತ್ತು.

ಇದನ್ನೂ ಓದಿ: ಕರ್ನಾಟಕದಾದ್ಯಂತ ಸಿಲಿಂಡರ್ ಕೊರತೆ: ಕಾಳಸಂತೆಯಲ್ಲಿ ಗ್ಯಾಸ್ ದಂಧೆ, 1 ಸಿಲಿಂಡರ್ ದರ 7 ಸಾವಿರ ರೂ!

ಅಲ್ಲದೆ, ರಾಜ್ಯದ ಇತರ ಕೆಲವು ದೇಗುಲಗಳಲ್ಲಿಯೂ ಅನ್ನದಾನ ಹಾಗೂ ಇತರ ಸೇವೆಗಳ ಮೇಲೆ ಪರಿಣಾಮ ಬೀರಿರುವ ಬಗ್ಗೆ ವರದಿಯಾಗುತ್ತಿದೆ. ಇದೀಗ ಇತಿಹಾಸ ಪ್ರಸಿದ್ಧ ಮೈಸೂರಿನ ಚಾಮುಂಡೇಶ್ವರಿ ದೇವಿ ಲಡ್ಡು ಪ್ರಸಾದಕ್ಕೂ ಅಡಚಣೆಯಾಗಿರುವುದು ಗಮನ ಸೆಳೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 am, Sun, 15 March 26

Follow Us