ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಸಿದ್ಧ; ಜಿಲ್ಲೆಯಲ್ಲಿ ಹಲವೆಡೆ ವಾಹನ ಸಂಚಾರ ಬದಲಾವಣೆ
ಮೈಸೂರಿನ ನವರತ್ನ ಜ್ಯುವೆಲರ್ಸ್ ವತಿಯಿಂದ ಬಂಗಾರದ ಅಕ್ಷರಗಳನ್ನ ಕೆತ್ತನೆ ಮಾಡಲಾಗಿರುವ ಉಡುಗೊರೆಯನ್ನು ಜೂನ್ 21ಕ್ಕೆ ಪ್ರಧಾನಿಗೆ ನೆನಪಿನ ಕಾಣಿಕೆಯಾಗಿ ಕೊಡಲಾಗುತ್ತದೆ.
ಮೈಸೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಹಿನ್ನೆಲೆ ದೇಶದ ಪ್ರಧಾನಿ ನಾಳೆ (ಜೂನ್ 20) ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಭದ್ರತೆಗೆ ಸಂಬಂಧಿಸಿದ ತಯಾರಿಗಳು ನಡೆಯುತ್ತಿವೆ. ಈಗಾಗಲೇ ಹೋಟೆಲ್, ಊಟ, ತಿಂಡಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಜಿಲ್ಲೆಗೆ ಆಗಮಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೋದಿಗೆ ವಿಶೇಷ ಉಡುಗೊರೆ ನೀಡಲು ಉಡುಗೊರೆ ರೆಡಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಮೂಲಕ ಉಡುಗೊರೆಯನ್ನು ಮೋದಿಗೆ ನೀಡಲಾಗುತ್ತದೆ. ಮೈಸೂರಿನ ನವರತ್ನ ಜ್ಯುವೆಲರ್ಸ್ ವತಿಯಿಂದ ಬಂಗಾರದ ಅಕ್ಷರಗಳನ್ನ ಕೆತ್ತನೆ ಮಾಡಲಾಗಿರುವ ಉಡುಗೊರೆಯನ್ನು ಜೂನ್ 21ಕ್ಕೆ ಪ್ರಧಾನಿಗೆ ನೆನಪಿನ ಕಾಣಿಕೆಯಾಗಿ ಕೊಡಲಾಗುತ್ತದೆ.
ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಮೋದಿ ಅವರ ಭಾವಚಿತ್ರಗಳನ್ನೊಳಗೊಂಡ ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕಗಳನ್ನ ಅಳವಡಿಕೆ ಮಾಡಲಾಗಿದೆ. ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಮೋದಿಗೆ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತದೆ. ಮೋದಿಗಾಗಿ ಈ ನೆನಪಿನ ಕಾಣಿಕೆಯನ್ನು ಥೈಲ್ಯಾಂಡ್ನಲ್ಲಿ ಮಾಡಿಸಿದ್ದಾರೆ.
ಮೋದಿ ಜತೆ ಭಾಗಿಯಾಗುವ ರಾಜಮಾತೆ ಪ್ರಮೋದಾ ದೇವಿ: ಪ್ರಧಾನಿ ಜೊತೆ ರಾಜಮಾತೆ ಪ್ರಮೋದಾ ದೇವಿ ವೇದಿಕೆ ಹಂಚಿಕೊಳ್ಳುತ್ತಾರೆ. ಯೋಗ ಶಿಬಿರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಆಯುಷ್ ಮಂತ್ರಿ ಭಾಗಿಯಾಗಲು ಅವಕಾಶವಿದೆ.
ಇದನ್ನೂ ಓದಿ: ಹಳ್ಳದಲ್ಲಿ ಸಿಲುಕಿದ ಕೆಎಸ್ಆರ್ಟಿಸಿ ಬಸ್: 22 ಪ್ರಯಾಣಿಕರನ್ನು ರಕ್ಷಿಸಿದ ರೋಚಕ ಕಾರ್ಯಚರಣೆ ಹೇಗಿತ್ತು ಗೊತ್ತಾ?
ವಾಹನ ಸಂಚಾರ ಬದಲಾವಣೆ: ಜಿಲ್ಲೆಯಲ್ಲಿ ಹಲವೆಡೆ ವಾಹನ ಸಂಚಾರ ಬದಲಾವಣೆ ಮಾಡಿ ಮೈಸೂರು ನಗರ ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟ ಹೊಡಿಸಿದೆ. ಬಸ್, ನಾಲ್ಕು ಚಕ್ರ, ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಬರುವ ಬಸ್ಗಳು ಜೆ.ಕೆ.ಮೈದಾನದಲ್ಲಿ, ಹುಣಸೂರು, ಹಾಸನ ಮಾರ್ಗವಾಗಿ ಬರುವ ಬಸ್ಗಳಿಗೆ ವಿಲೇಜ್ ಹಾಸ್ಟೆಲ್ ಮೈದಾನದ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪಿರಿಯಾಪಟ್ಟಣ, ಕೆ.ಆರ್.ನಗರ ಮಾರ್ಗದ ಬಸ್ಗಳಿಗೆ ಮೈಸೂರು ವಿವಿಯ ಪಾರ್ಕಿಂಗ್ ಸ್ಥಳದಲ್ಲಿ, ನಂಜನಗೂಡು, ಚಾಮರಾಜನಗರ ಮಾರ್ಗದ ಬಸ್ಗಳಿಗೆ ಎನ್ಎಸ್ಎಸ್ ಕಚೇರಿ, ಸೊಮಾನಿ ಬಿಎಡ್ ಕಾಲೇಜ್ ಮೈದಾನದಲ್ಲಿ, ಹೆಚ್.ಡಿ.ಕೋಟೆ ಕಡೆಯಿಂದ ಬರುವ ಬಸ್ಗಳಿಗೆ ಮಹಾಬೋಧಿ ಹಾಸ್ಟೆಲ್ ಮೈದಾನದಲ್ಲಿ, ಟಿ.ನರಸೀಪುರ ಕಡೆಯಿಂದ ಬರುವ ಬಸ್ಗೆ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.
ಮೋದಿಗಾಗಿ ಸಿದ್ಧವಾಗಿದೆ ವಿಶೇಷ ಸ್ಟೇಜ್: ಪ್ರಧಾನಿ ನರೇಂದ್ರ ಮೋದಿಗೆ ಜಿಲ್ಲೆಯಲ್ಲಿ ವಿಶೇಷ ವೇದಿಕೆ ಸಿದ್ಧವಾಗಿದೆ. ಜೊತೆಗೆ ನಮೋ ಯೋಗ ಮಾಡುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಮೈಸೂರು ಪ್ಯಾಲೇಸ್ನ ಎದುರು ಮುಖ ಮಾಡಿ ಸ್ಟೇಜ್ ರೆಡಿಯಾಗಿದೆ. ಯೋಗ ಪಟುಗಳಿಗಾಗಿ 12 ಬ್ಯಾರೆಕ್ಗಳು ಸಿದ್ಧವಾಗಿದೆ. ಪ್ರತಿ ಬ್ಯಾರೆಕ್ನಲ್ಲಿ 100 ಮಂದಿ ಯೋಗ ಪಟುಗಳು ಯೋಗಭ್ಯಾಸ ಮಾಡುತ್ತಾರೆ. ಜಿಲ್ಲಾಡಳಿತ ಪ್ರತಿಯೊಬ್ಬ ಯೋಗ ಪಟುಗಳಿಗೆ ಗುರುತಿನ ಚೀಟಿ ನೀಡಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:47 am, Sun, 19 June 22