AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ 8 ಗಂಟೆಗಳ ಕಾಲ ಮೈಸೂರು ಕೆಡಿಪಿ ಸಭೆ ಮಾಡಿದ ಸಿದ್ದರಾಮಯ್ಯ: ಏನೆಲ್ಲಾ ನಡೆಯಿತು? ಇಲ್ಲಿದೆ ಸಭೆಯ ಮುಖ್ಯಾಂಶಗಳು

Mysuru KDP Meeting highlights: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ಮೂರು ದಿನ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಇಂದು(ಆಗಸ್ಟ್ 28) ಮೊದಲ ದಿನವೇ ಮೈಸೂರ ಜಿಲ್ಲಾ ಕೆಡಿಪಿ ಸಭೆ ನಡೆಸಿದ್ದಾರೆ. ಸತತ 8 ಗಂಟೆಗಳ ಕಾಲ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಹಿರಿಯ ಅಧಿಕಾರಿಗಳಿಂದ ಇಲಾಖೆವಾರರು ಮಾಹಿತಿ ಪಡೆದುಕೊಂಡು ಕೆಲ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಹಾಗಾದ್ರೆ, ಎಂಟೆ ಗಂಟೆಗಳ ಕಾಲ ಏನೆಲ್ಲಾ ಚರ್ಚೆ ಆಯ್ತು ಎನ್ನುವ ಸಭೆಯ ಮುಖ್ಯಾಂಶಗಳು ಇಲ್ಲಿವೆ.

ಸತತ 8 ಗಂಟೆಗಳ ಕಾಲ ಮೈಸೂರು ಕೆಡಿಪಿ ಸಭೆ ಮಾಡಿದ ಸಿದ್ದರಾಮಯ್ಯ:  ಏನೆಲ್ಲಾ ನಡೆಯಿತು? ಇಲ್ಲಿದೆ ಸಭೆಯ ಮುಖ್ಯಾಂಶಗಳು
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೈಸೂರು ಕೆಡಿಪಿ ಸಭೆ
ರಾಮ್​, ಮೈಸೂರು
| Edited By: |

Updated on: Aug 28, 2023 | 8:37 PM

Share

ಮೈಸೂರು, (ಆಗಸ್ಟ್ 28): ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಅಧ್ಯಕ್ಷತೆಯಲ್ಲಿ ಇಂದು (ಆಗಸ್ಟ್ 28) ನಡೆದ ಮೈಸೂರು ಕೆಡಿಪಿ ಸಭೆ(Mysuru KDP Meeting) ಅಂತ್ಯವಾಗಿದೆ. ಸತತ 8 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿದರು. ಕಂದಾಯ, ಕೃಷಿ, ನೀರಾವರಿ, ಶಿಕ್ಷಣ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೇ ಇದೇ ವೇಳೆ ಕರ್ತವ್ಯಲೋಪವೆಸಗಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಹಾಗಾದ್ರೆ, ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎಂಟು ಗಂಟೆಗಳ ಕಾಲ ನಡೆ ಕೆಡಿಪಿ ಸಭೆಯಲ್ಲಿ ಏನೆಲ್ಲಾ ಆಯ್ತು? ಯಾವೆಲ್ಲ ಅಧಿಕಾರಿಗಳಿಗೆ ಏನೆಲ್ಲಾ ಸೂಚನೆಗಳು ನೀಡಿದ್ದಾರೆ ಎನ್ನುವ ಕೆಡಿಪಿ ಸಭೆಯ ಹೈಲೈಟ್ಸ್ ಈ ಕೆಳಗಿನಂತಿದೆ ನೋಡಿ.

ಕೆಡಿಪಿ ಸಭೆಯ ಮುಖ್ಯಾಂಶಗಳು

  • ಇಲಾಖೆಗಳ ನಡುವೆ ಹೊಂದಾಣಿಕೆ ಇರಬೇಕು ಬಹಳಷ್ಟು ಇಲಾಖೆಗಳ ನಡುವೆ ಅಂತರ ಸಂಬಂಧ ಇರುತ್ತದೆ. ಹೀಗಾಗಿ ಪರಸ್ಪರ ಹೊಂದಾಣಿಕೆಯಿಂದ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ತೀರ್ಮಾನ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು.
  •  ನಾನು ಕೆಡಿಪಿ ಸಭೆ ಕರೆದಾಗ ರಾಜ್ಯ ಮಟ್ಟದ ಅಧಿಕಾರಿಗಳೂ ಸಭೆಗೆ ಬರಬೇಕು. ಸಭೆಗೆ ಆಹ್ವಾನ ಹೋದರೂ ಬರದಿದ್ದರೆ ಅಂತಹ ಅಧಿಕಾರಿಗಳ ಮೇಳೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ.
  •  ಅಧಿಕಾರಿಗಳು ಪ್ರೋಟೋಕಾಲ್ ಪಾಲಿಸಬೇಕು. ಅಧಿಕಾರಿಗಳೇ ರಾಜಕೀಯ ಮಾಡಬಾರದು. ಚುನಾಯಿತ ಪ್ರತಿನಿಧಿಗಳು ಯಾವುದೇ ಪಕ್ಷದವರಾಗಿದ್ದರೂ ಸರ್ಕಾರದ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪ್ರೋಟೋಕಾಲ್ ಪಾಲಿಸಬೇಕು.

ಕೃಷಿ ಇಲಾಖೆಗೆ ನೀಡಿದ ಸೂಚನೆಗಳು:

  • ರೈತರಿಗೆ ಒಮ್ಮೆ ಬೀಜಗಳನ್ನು ಒದಗಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೃಷಿ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳಬಾರದು. ಯಾವುದೇ ಕಾರಣದಿಂದ ಬೆಳೆ ನಷ್ಟವಾದರೆ ಮತ್ತೊಂದು ಸುತ್ತು ಬೀಜ ವಿತರಣೆ ಮಾಡಬೇಕು. ಪರ್ಯಾಯ ಬೆಳೆ ಬೆಳೆಯಲು ಅಗತ್ಯವಾದ ತಿಳಿವಳಿಕೆ ಮತ್ತು ಸವಲತ್ತುಗಳನ್ನು ಒದಗಿಸಬೇಕು. ಇಡೀ ಜಿಲ್ಲೆಯಲ್ಲಿ ಎಲ್ಲೇ ಬೀಜ-ಗೊಬ್ಬರದ ಕೊರತೆ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ.
  •  ಹಳ್ಳಿಗಳಿಗೆ ಹೋಗಿ ರೈತರ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳಬೇಕು. ಬಳಿಕ ಸಮಸ್ಯೆ ಪರಿಹಾರ ಮಾಡಬೇಕು. ರೈತರ ಜತೆ ಗೌರವಯುತವಾಗಿ ನಡೆದುಕೊಳ್ಳಬೇಕು. ಕಚೇರಿಗೆ ಬರುವ ರೈತರ ಜತೆ ಆರೋಗ್ಯಕರವಾದ ನಡವಳಿಕೆ ಇಟ್ಟುಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳು ಇರುವುದೇ ರೈತರಿಗೆ ಮಾಹಿತಿ ಕೊಟ್ಟು ಸಹಕಾರ ಕೊಡುವುದಕ್ಕೆ. ರೈತರು ತಮ್ಮ ಅನುಭವದಿಂದಲೇ ಕೃಷಿಯಲ್ಲಿ ಪಳಗಿರುತ್ತಾರೆ. ಅಧಿಕಾರಿಗಳಿಗಿಂತ ಹೆಚ್ಚು ತಿಳಿವಳಿಕೆ ಹೊಂದಿದ್ದಾರೆ. ಆದ್ದರಿಂದ ರೈತರ ಮಾತು ಕೇಳಿಸಿಕೊಳ್ಳಬೇಕು, ಫೀಲ್ಡ್‌ ವಿಸಿಟ್‌ ಮಾಡಿ, ಡೈರಿ ಬರೆಯುವುದನ್ನು ರೂಢಿ ಮಾಡಿಕೊಳ್ಳಬೇಕು.
  • ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಅಧಿಕಾರಿಗಳು ಅವರಿಗೆ ಮಾನವೀಯವಾಗಿ ಸ್ಪಂದಿಸಬೇಕು ಎಂದು ಸ್ಪಷ್ಟ ಸೂಚನೆ.
  • ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉದಾರವಾಗಿ ವರ್ತಿಸಿ. ಸರ್ಕಾರ ಹಣ ಕೊಡತ್ತದೆ. ತಡ ಮಾಡದೆ ಪರಿಹಾರ ಅವರಿಗೆ ತಲುಪಬೇಕು. ಅನಗತ್ಯ ತಡ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ.
  • ಬೆಲೆ ನಷ್ಟ ಮತ್ತು ರೈತರ ಆತ್ಮಹತ್ಯೆಗಳ ಕುರಿತಾಗಿ ವಾಸ್ತವ ಸಂಗತಿಗಳು ಮತ್ತು ಕಾರಣಗಳನ್ನು ಪತ್ತೆ ಹಚ್ಚಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆತ್ಮಹತ್ಯೆಗಳಾಗಿದ್ದರೆ ಅದನ್ನೂ ನಮೂದಿಸಬೇಕು. ಆತ್ಮಹತ್ಯೆ ಹಿಂದಿನ ನೈಜ ಸಂಗತಿಯನ್ನು ಸ್ಪಷ್ಟವಾಗಿ ಗುರುತಿಸಿ, ದಾಖಲಿಸಬೇಕು ಎಂದು ಸೂಚನೆ

ನೀರಾವರಿ ಇಲಾಖೆ:

  • ನಮ್ಮ ರೈತರಿಗೆ ಅನ್ಯಾಯ ಮಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಕೊಡಬೇಕು ಎನ್ನುವ ಸೂಚನೆ ಯಾವ ಆದೇಶದಲ್ಲೂ ಇಲ್ಲ. ನಮ್ಮ ಬೆಳೆ ಮತ್ತು ಕುಡಿಯುವ ನೀರಿನ ರಕ್ಷಣೆ ಮಾಡಿಕೊಳ್ಳಬೇಕು. ಸಂಕಷ್ಟ ಪರಿಹಾರ ಸೂತ್ರ ಇನ್ನೂ ಸಿದ್ದಗೊಳ್ಳಬೇಕಿದೆ.
  • ಕುಡಿಯುವ ನೀರಿಗೆ ಮತ್ತು ಕೃಷಿಗೆ ಅಗತ್ಯವಾದ ನೀರಿನ ಪ್ರಮಾಣ ಎಷ್ಟು? ನಮ್ಮಲ್ಲಿ ಸಂಗ್ರಹದಲ್ಲಿರುವ ನೀರಿನ ಪ್ರಮಾಣ ಎಷ್ಟು ಎನ್ನುವ ಕುರಿತಾಗಿ ವೈಜ್ಞಾನಿಕ ತಿಳಿವಳಿಕೆ ಮತ್ತು ಮಾಹಿತಿ ಸಿದ್ದವಿಟ್ಟುಕೊಂಡು ನಮ್ಮ ರೈತರ ಹಿತ ಕಾಪಾಡುವುದನ್ನೇ ಮೊದಲ ಆಧ್ಯತೆಯನ್ನಾಗಿ ಕ್ರಮ ವಹಿಸಲು ಸೂಚನೆ.
  • ಎಂಜಿನಿಯರ್‌ಗಳು ನಾಲೆ ಮೇಲೆ ತಿರುಗಾಡಿ ನೀರು ಟೈಲ್‌ ಎಂಡ್‌ ವರೆಗೂ ತಲುಪುತ್ತಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನಾಲೆಗೆ ನೀರು ಬಿಡುವ ಮೊದಲು ಹೂಳು ತೆಗೆಯಬೇಕು. ನೀರು ಬಿಟ್ಟ ಬಳಿಕ ಹೂಳು ತೆಗೆಯಲು ಹೋಗಬಾರದು.
  • ನಾಲೆಗಳಿಗೆ ನೀರು ಬಿಡುವ ಮೊದಲೇ ಮೋಟಾರು ಪಂಪ್‌ಗಳನ್ನು ರಿಪೇರಿ ಮಾಡಿಸಬೇಕು.

ಪಶುಪಾಲನಾ ಇಲಾಖೆಗೆ ಸಿದ್ದರಾಮಯ್ಯ ಕೊಟ್ಟ ಸೂಚನೆಗಳು

  • ಕುರಿ ಮತ್ತು ಹಸು ಹಾಗೂ ಎತ್ತುಗಳು ಮೃತಪಟ್ಟಾಗ ಪರಿಹಾರ ಒದಗಿಸಬೇಕು. ಅಗತ್ಯ ಹಣವನ್ನು ಸರ್ಕಾರಕ್ಕೆ ಕೇಳಿ.
  • ರಾಸುಗಳಿಗೆ ಅಗತ್ಯ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಸಂಭಾವ್ಯ ಕಾಯಿಲೆಗಳಿಗೆ ಔಷಧಿ ರೆಡಿ ಇಟ್ಟುಕೊಂಡಿರಬೇಕು.
  • ಪಶುಪಾಲಕರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ನಂದಿನಿ ಹಾಲಿನ ದರವನ್ನು 3 ರೂ ಹೆಚ್ಚಿಸಿದೆವು. ಈ 3 ರೂ ಪೂರ್ತಿಯಾಗಿ ನೇರ ರೈತರಿಗೆ ತಲುಪಬೇಕು.
  • ರೈತರಿಗೆ 3 ರೂ ಹೆಚ್ಚುವರಿವಾಗಿ ಸಿಕ್ಕ ಮೇಲೆ ನಂದಿನಿಗೆ ಬರುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ಈಗ ಹಾಲು ಒಕ್ಕೂಟಗಳು ಲಾಭ ಮಾಡಿಕೊಳ್ಳಬೇಕು. ಆ ಲಾಭ ರೈತರಿಗೆ ಸೇರಬೇಕು ಎಂದು ಸೂಚ‌ನೆ.
  • ಹಾಲು ಒಕ್ಕೂಟಗಳಿಗೆ ಮನಸೋ ಇಚ್ಚೆ ನೇಮಕ ಮಾಡಿಕೊಳ್ಳಬಾರದು. ಹೊರ ಗುತ್ತಿಗೆ ಎನ್ನುವುದನ್ನು ದಂಧೆ ಮಾಡಿಕೊಳ್ಳಬಾರದು. ಮೀಸಲಾತಿ ಮಾನದಂಡದಲ್ಲಿ ತೆಗೆದುಕೊಳ್ಳಬೇಕು ಎಂದು ವಾರ್ನಿಂಗ್.

ಸುಳ್ಳು ಸುದ್ದಿಗಳಿಗೆ ಬ್ರೇಕ್

  •  ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು, ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು.
  • ಸುಳ್ಳು ಸುದ್ದಿ ಹರಡುವವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಜೈಲಿಗೆ ತಳ್ಳಿ
  • ಡ್ರಗ್ಸ್ ವಿಚಾರದಲ್ಲಿ ಮೈಸೂರು ವಲಯದಲ್ಲಿ ಝೀರೋ ಟಾಲರೆನ್ಸ್ ಇರಬೇಕು.
  • ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಡ್ರಗ್ಸ್ ಮೇನಿಯಾ, ಮಾಫಿಯಾಗೆ ಅವಕಾಶ ಇರಬಾರದು.
  • ಆಗಸ್ಟ್ 30ರಂದು ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಸಿದ್ದರಾಮಯ್ಯ ಖಡಕ್ ಸೂಚನೆ.
  • ಆದಿವಾಸಿಗಳಿಗೆ 4 ತಿಂಗಳಿಂದ ಆಹಾರ ನೀಡುತ್ತಿಲ್ಲ ಎನ್ನುವ ವರದಿಗೆ ಸಂಬಂಧಪಟ್ಟಂತೆ ಗರಂ ಆದ ಸಿಎಂ ನಿಮಗೆ ಆರು ತಿಂಗಳು ಸಂಬಳ ನಿಲ್ಲಿಸಿದರೆ ಏನಾಗುತ್ತದೆ ? ಎನ್ನುವ ಪ್ರಜ್ಞೆ ಇದೆಯೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ.

ತೋಟಗಾರಿಕಾ ಇಲಾಖೆ

  • ತೆಂಗು, ರೇಷ್ಮೆ ಮತ್ತಿತರ ಬೆಳೆಗಳು ನಾಶ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಂಬಂಧಪಟ್ಟ ವಿಜ್ಷಾನಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಂಡು ಕಾಯಿಲೆ ವ್ಯಾಪಕವಾಗಿ ಆವರಿಸುವ ಮೊದಲೇ ರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು.

    ಆರೋಗ್ಯ ಇಲಾಖೆ:

  • ಜಿಲ್ಲಾ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಎಂಆರ್ಐ, ಎಕ್ಸ್ರೇ ಸೇರಿ ಎಲ್ಲಾ ತಪಾಸಣಾ ವ್ಯವಸ್ಥೆ ಇರಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಹಣ ಖರ್ಚೇ ಆಗುತ್ತಿಲ್ಲ. ಹಾಗೇ ಉಳಿದಿದೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಅಗತ್ಯ ಸಲಕರಣೆಗಳೇ ಇಲ್ಲ ಏಕೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದ ಸಿದ್ದರಾಮಯ್ಯ.
  • ಜಿಲ್ಲಾ ಆರೋಗ್ಯಾಧಿಕಾರಿಗಳು ತಾಲ್ಲೂಕಾ ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಭೇಟಿ ನೀಡಿದ ಬಗ್ಗೆ ಡೈರಿ ಬರೆಯಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು, ಗ್ರಾಮೀಣ ಭಾಗದಲ್ಲಿ ವೈದ್ಯರಿಗಾಗಿಯೇ ಕಟ್ಟಿಸಿರುವ ಕ್ವಾಟ್ರಸ್‌ಗಳಿವೆ. ಅಲ್ಲಿ ಏಕೆ ವೈದ್ಯರು ಉಳಿದುಕೊಳ್ಳುತ್ತಿಲ್ಲ ? ನೀವು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ.
  • ಜಿಲ್ಲಾ ಸರ್ಜನ್, ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಮೆಡಿಕಲ್ ಕಾಲೇಜಿನ ಡೀನ್‌ಗಳಿಗೆ ಪ್ರತ್ಯೇಕ ಜವಾಬ್ದಾರಿಗಳಿರುತ್ತವೆ. ನೀವುಗಳು ನಿಮ್ಮ ಜವಾಬ್ದಾರಿಯನ್ನು ಪರಸ್ಪರ ಹೊಂದಾಣಿಕೆಯಿಂದ ನಿರ್ವಹಿಸದೆ ಹೋದರೆ ಆರೋಗ್ಯ ವ್ಯವಸ್ಥೆ ಏರುಪೇರಾಗುತ್ತದೆ. ಹಾಗೇನಾದರೂ ಆದರೆ ನೀವುಗಳೇ ನೇರ ಹೊಣೆ. ಕ್ರಮ ಎದುರಿಸಲು ಸಿದ್ದರಿರಿ ಎಂದು ಎಚ್ಚರಿಕೆ.
  • ಕೆ.ಆರ್.ಆಸ್ಪತ್ರೆಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಉನ್ನತೀಕರಿಸುವುದು ಸೇರಿದಂತೆ ಇನ್ನಿತರೆ ಅಗತ್ಯತತೆಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಸೂಚಿಸಲಾಯಿತು

ನಗರಾಡಳಿತ:

  • ಸಿಎ ಸೈಟ್‌‌ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಯಾವ ಉದ್ದೇಶಕ್ಕೆ ಸಿಎ ಸೈಟ್ ಗಳನ್ನು ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಅದು ಬಳಕೆ ಆಗುತ್ತಿರಬೇಕು. ಇಲ್ಲದಿದ್ದರೆ ತಕ್ಷಣ ಅಂತಹ ಸೈಟ್ ಗಳನ್ನು ವಾಪಸ್ಸು ವಶಕ್ಕೆ ಪಡೆಯಬೇಕು ಎಂದು ಮುಡಾ ಆಯುಕ್ತರಿಗೆ ಸೂಚನೆ.
  • ಮೈಸೂರು ಕ್ಲೀನ್ ಸಿಟಿಯಾಗಿ ಇನ್ನಷ್ಟು ಉನ್ನತೀಕರಿಸುವ ನಿಟ್ಟಿನಲ್ಲಿ ಪಾಲಿಕೆ, ಮುಡಾ, ಅರಣ್ಯ, ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಬಸ್ ನಲ್ಲಿ ನಗರ ಪ್ರದಕ್ಷಿಣೆ ಮಾಡಿ ಪರಸ್ಪರ ಹೊಂದಾಣಿಕೆಯಿಂದ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲೇ ಇದು ನಡೆಯಬೇಕು ಎಂದು ಸೂಚನೆ.
  • ಹೊಸ ಬಡಾವಣೆಗಳಿಗೆ ಕಣ್ಣುಮುಚ್ಚಿಕೊಂಡು ಅನುಮತಿ ನೀಡಬಾರದು. ಮೈಸೂರಿನಲ್ಲೂ ಬೆಂಗಳೂರಿನಂತೆ ಅಕ್ರಮ ಬಡಾವಣೆಗಳು ಮತ್ತು ಅವೈಜ್ಞಾನಿಕ ಬಡಾವಣೆಗಳು, ಅಗತ್ಯ ಸೌಲತ್ತುಗಳಿಲ್ಲದ ಬಡಾವಣೆಗಳು ನಿರ್ಮಾಣವಾಗದಂತೆ ಕಟ್ಟುನಿಟ್ಟಾಗಿ ತಡೆಯಬೇಕು.

ಶಿಕ್ಷಣ ಇಲಾಖೆ

  • ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಹಿಂದುಳಿದಿರುವುದಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಬಿಇಒ ಕಚೇರಿಗಳಿಗೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಮೊದಲ ವಿಶ್ವ ವಿದ್ಯಾಲಯ ಆರಂಭವಾಗಿದ್ದು ಮೈಸೂರಿನಲ್ಲಿ. ಇಂಥಾ ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ ಹಿಂದುಳಿಯಬಾರದು ಎಂದು ಸೂಚನೆ.
  • ಶೂನ್ಯ ದಾಖಲಾತಿ ಶಾಲೆಗಳ ವ್ಯಾಪ್ತಿಯ ಪೋಷಕರ ಸಭೆ ನಡೆಸಬೇಕು. ಪೋಷಕರ ಅಭಿಪ್ರಾಯವನ್ನು ಸಮಗ್ರವಾಗಿ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳಬೇಕು. ಕೇವಲ ಇಂಗ್ಲಿಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿಲ್ಲ ಎನ್ನುವ ವಾದ ವೈಜಾನಿಕವಲ್ಲ. ಶಿಕ್ಷಣದ ಗುಣಮಟ್ಟವೂ ಕಾರಣ ಆಗಿರುತ್ತದೆ. ಆದ್ದರಿಂದ ಗುಣಮಟ್ಟದ ಶೀಕ್ಷಣ ಹೆಚ್ಚಿಸಲು ಶಿಕ್ಷಕರಿಗೆ ತರಬೇತಿ ನೀಡುವುದೂ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ, ಮುಂದಿನ ವರ್ಷ ಶಿಕ್ಷಣ ಸೂಚ್ಯಂಕದಲ್ಲಿ ಮೊದಲ ಐದು ಸ್ಥಾನಗಳ ಒಳಗೆ ಬರಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ

ಇಂಧನ ಇಲಾಖೆ:

  • ಹಾಳಾದ ಟ್ರಾನ್ಸ್ಫಾರ್ಮರ್ ಗಳನ್ನು ನಿಗಧಿತ ಅವಧಿಯಲ್ಲಿ ಬದಲಾಯಿಸದೆ ರೈತರಿಗೆ ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಚೆಸ್ಕಾಂ ಎಂಡಿ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ, ನೀವು ರೈತರ ಮತ್ತು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಸತಾಯಿಸಬೇಡಿ ಎಂದು ತರಾಟೆ.
  • ಟ್ರಾನ್ಸ್ ಫಾರ್ಮರ್ ಸುಟ್ಟು ಹೋದರೆ ನಿಗಧಿತ ಅವಧಿ 72 ಗಂಟೆಯೊಳಗೆ ರಿಪೇರಿ ಮಾಡಬೇಕು ಎಂದು ಖಡಕ್ ಸೂಚನೆ.

ಕುಡಿಯುವ ನೀರು:

  • ಕುಡಿಯುವ ನೀರಿಗೆ ಕೊರತೆ ಆಗದಂತೆ ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಎಷ್ಟೇ ಹಣ ಖರ್ಚಾದರೂ ಕೊಡಲು ನಾವು ಸಿದ್ದರಿದ್ದೇವೆ. ಕುಡಿಯುವ ನೀರಿನ ವಿಚಾರದಲ್ಲಿ ಪರ್ಯಾಯ ನೀರಿನ ಮೂಲಗಳನ್ನು ಬಳಸಲು ಯಾವುದೇ ಅಡ್ಡಿ ಆಗಬಾರದು ಎಂದು ಸ್ಪಷ್ಟ ಸೂಚನೆ.

ಸಾರಿಗೆ ಇಲಾಖೆ:

  • ಕೊರೊನ ಅವಧಿಯಲ್ಲಿ ಬಂದ್ ಆಗಿರುವ ಬಸ್ ಮಾರ್ಗಗಳು ಪುನರ್ ಚಾಲನೆ ಆಗುವುದೂ ಸೇರಿದಂತೆ ಐದು ಜಿಲ್ಲೆಗಳ ಶಾಸಕರ ಸಭೆ ಕರೆದು ಹೊಸ ಬಸ್ ಮಾರ್ಗಗಳ ಅಗತ್ಯ ಎಲ್ಲೆಲ್ಲಿ ಇವೆ ಎನ್ನುವುದರ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ.

ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್