Mysuru: ತವರಿಗೆ ಬಂದ್ರೂ ತಪ್ಪಲಿಲ್ಲ ಪತಿ ಕಾಟ; ಬಡಿದು ಪತ್ನಿಯನ್ನೇ ಕೊಂದ ಕುಡುಕ ಗಂಡ!
ಪತಿಯೇ ಪತ್ನಿಯ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಕಳಲೆ ಗ್ರಾಮದಲ್ಲಿ ನಡೆದಿದೆ. ತವರಿಗೆ ಬಂದಿದ್ದ ಮಹಿಳೆಯನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಮದ್ಯವ್ಯಸನಿ ಪತಿಯ ಹಿಂಸೆಯಿಂದ ದೂರವಾಗಿದ್ದ ಪತ್ನಿ, ಮನೆಗೆ ಹಿಂದಿರುಗಲು ನಿರಾಕರಿಸಿದ್ದೇ ಘಟನೆಗೆ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ತನಿಖೆ ಮುಂದುವರಿದಿದೆ.

ಮೈಸೂರು, ಜನವರಿ 09: ತನ್ನಿಂದ ದೂರವಾಗಿ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ. ಸುಧಾ ಮೃತ ಮಹಿಳೆಯಾಗಿದ್ದು, ಮರದ ತುಂಡಿನಿಂದ ಹೊಡೆದು ಮರ್ಡರ್ ಮಾಡಿರುವ ಆರೋಪಿ ಮಹೆಶ್ನನ್ನು ಪೊಲೀಸರು ಬಂಧಿಸಿದ್ದಾರೆ. ತಾಳಿ ಕಟ್ಟಿದ ಪತಿಯೇ ಪತ್ನಿಯನ್ನು ಕೊಲೆ ಮಾಡಿರೋದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಘಟನೆ ಏನು?
13 ವರ್ಷಗಳ ಹಿಂದೆ ಮಲ್ಲಹಳ್ಳಿ ಗ್ರಾಮದ ಮಹೇಶ್ ಜೊತೆ ವಿವಾಹವಾಗಿದ್ದ ಸುಧಾ ಎರಡು ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದು, ತನ್ನ ತವರಿಗೆ ಬಂದಿದ್ದಳು. ಕಳಲೆ ಗ್ರಾಮದ ದೊಡ್ಡ ಬೀದಿಯಲ್ಲಿ ತಾಯಿ ಮತ್ತು ಮಕ್ಕಳ ಜೊತೆ ಜೀವನ ನಡೆಸಿಕೊಂಡಿದ್ದಳು. ಆದ್ರೆ , ಮನೆಗೆ ಬಾ ಎಂದು ಸುಧಾಳನ್ನು ಮಹೇಶ ಹಲವು ಬಾರಿ ಒತ್ತಾಯಿಸಿದ್ದ. ಕಳೆದ ವಾರವೂ ಮನೆಗೆ ಹಿಂದಿರುಗಿ ಬಾ ಎಂದು ಕೇಳಿಕೊಂಡಿದ್ದ. ಆದರೆ ಸುಧಾ ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಕೋಪಗೊಂಡ ಮಹೇಶ ಪತ್ನಿ ಜೊತೆ ಜಗಳ ಆರಂಭಿಸಿದ್ದಾನೆ. ಗಲಾಟೆ ವಿಕೋಪಕ್ಕೆ ಹೋಗಿ ಮರದ ತುಂಡಿನಿಂದ ಸುಧಾಳ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಗಂಡ ಹೊಡೆದ ಏಟಿಗೆ ಸುಧಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಕುಟುಂಬಗಳ ನಡುವೆ ಆಸ್ತಿ ವಿವಾದ; ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್ ಫೈಟ್
ಮದ್ಯವ್ಯಸನಿಯಾಗಿದ್ದ ಮಹೇಶ್
ಆರೋಪಿ ಮಹೇಶ್ ಮದ್ಯಕ್ಕೆ ದಾಸನಾಗಿದ್ದ. ಜೊತೆಗೆ ಇತರ ದುಶ್ಚಟಗಳಿಗೆ ಬಲಿಯಾಗಿ ಹೆಂಡತಿಗೆ ಹಿಂಸೆ ಕೊಡುತ್ತಿದ್ದ. ಇಸ್ಪೀಟ್ ಆಡಿ ವಿಪರೀತವಾಗಿ ಸಾಲ ಕೂಡ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಸುಧಾ ಗಂಡನ ಮನೆ ಬಿಟ್ಟು ತನ್ನಿಬ್ಬರ ಮಕ್ಕಳ ಜೊತೆ ತವರಿಗೆ ಬಂದಿದ್ದಳು ಎನ್ನಲಾಗಿದೆ. ಇನ್ನು ಘಟನೆ ಬಳಿಕ ಎಸ್ಕೇಪ್ ಆಗಿದ್ದ ಮಹೇಶ್ನನ್ನು ನಂಜನಗೂಡು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ನಿಖರ ಕಾರಣ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗದ ಕಾರಣ, ಆ ಬಗ್ಗೆ ತನಿಖೆ ನಡೆಯುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.