ಮೇಯರ್ ಸ್ಥಾನ ಕೊಟ್ಟರೆ ನಿಮ್ಮೊಂದಿಗೆ ಬರ್ತೀವಿ; ಕೊನೇ ಕ್ಷಣದಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾದ ಜೆಡಿಎಸ್, ಬಿಜೆಪಿ ಕತೆಯೇನು?
ಕೊನೇ ಕ್ಷಣದಲ್ಲಿ ಜೆಡಿಎಸ್ ಪಕ್ಷ ಮೈತ್ರಿಯ ಮಾತುಗಳನ್ನಾಡುವ ಮೂಲಕ ಕಾಂಗ್ರೆಸ್ಗೆ ಆಫರ್ ನೀಡಿದೆ. ಜೆಡಿಎಸ್‌ಗೆ ಮೇಯರ್ ಸ್ಥಾನ ಕೊಟ್ಟರೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತೇವೆ. ಮುಂದಿನ ಬಾರಿ ನೀವೇ ಮೇಯರ್ ಸ್ಥಾನ ತೆಗೆದುಕೊಳ್ಳಿ. ಈ ಬಾರಿ ಮಾತ್ರ ನಮಗೆ ಬಿಟ್ಟುಕೊಡಿ ಎಂದಿದೆ ಜೆಡಿಎಸ್.
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಕೊನೇ ಕ್ಷಣದಲ್ಲಿ ಜೆಡಿಎಸ್ ಪಕ್ಷ ಮೈತ್ರಿಯ ಮಾತುಗಳನ್ನಾಡುವ ಮೂಲಕ ಕಾಂಗ್ರೆಸ್ಗೆ ಆಫರ್ ನೀಡಿದೆ. ಜೆಡಿಎಸ್‌ಗೆ ಮೇಯರ್ ಸ್ಥಾನ ಕೊಟ್ಟರೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತೇವೆ. ಮುಂದಿನ ಬಾರಿ ನೀವೇ ಮೇಯರ್ ಸ್ಥಾನ ತೆಗೆದುಕೊಳ್ಳಿ. ಈ ಬಾರಿ ಮಾತ್ರ ನಮಗೆ ಬಿಟ್ಟುಕೊಡಿ ಎಂದಿರುವ ಜೆಡಿಎಸ್ ಚುನಾವಣೆಗೆ ಕೆಲವೇ ಹೊತ್ತು ಬಾಕಿ ಇರುವಾಗ ಕುತೂಹಲ ಮೂಡಿಸಿದೆ. ಒಂದುವೇಳೆ, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆಗದೇ ಇದ್ದರೆ ಬಿಜೆಪಿಗೆ ಮೇಯರ್ ಸ್ಥಾನ ಸಿಗಲಿದ್ದು ಈಗ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಇದೆ.
ಇತ್ತ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ನಮ್ಮ ನಾಯಕರಿಗೆ ವಾಸ್ತವ ಪರಿಸ್ಥಿತಿಯನ್ನು ತಿಳಿಸಿದ್ದೇನೆ. ಕಾಂಗ್ರೆಸ್ ಜತೆ ಜೆಡಿಎಸ್ ಕೈಜೋಡಿಸಲು ಸಿದ್ಧವಾಗಿದೆ. ಅಧಿಕಾರ ವಿಚಾರವಾಗಿ ಅಂತಿಮ ನಿರ್ಧಾರವಾಗಬೇಕಿದೆ. ನಮ್ಮ ನಾಯಕರ ನಿರ್ಧಾರ ತಿಳಿಸಿದ ಕೂಡಲೇ ಹೇಳುತ್ತೇನೆ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಮೈತ್ರಿ ಬಗ್ಗೆ ನಿರ್ಧಾರ ಅಂತಿಮವಾಗಲಿದೆ ಎಂದು ಹೇಳಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಮುರಿದಿಲ್ಲ, ಆದರೆ ಮೇಯರ್ ಸ್ಥಾನ ಯಾರಿಗೆ ಎಂಬ ಗೊಂದಲ ಮುಂದುವರಿದಿದೆ. ನಮಗೆ ಮೇಯರ್ ಸ್ಥಾನ ಬಿಟ್ಟು ಕೊಡುವಂತೆ ಜೆಡಿಎಸ್‌ಗೆ ಕೇಳಿದ್ದೇವೆ. ಜೆಡಿಎಸ್ ಮೇಯರ್ ಸ್ಥಾನಕ್ಕೆ ಪಟ್ಟು ಮುಂದುವರಿಸಿದೆ. ಹೀಗಾಗಿ, ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿಕೆ ನೀಡಿದ್ದಾರೆ.
ಒಟ್ಟು 65 ಪಾಲಿಕೆ ಸದಸ್ಯರ ಪೈಕಿ ಒಬ್ಬರ ಸದಸ್ಯತ್ವ ರದ್ದಾಗಿರುವುದರಿಂದ 64 ಸದಸ್ಯರು ಪ್ರಸ್ತುತ ಇದ್ದು, 72 ಜನ ಮತ ಚಲಾಯಿಸಲಿದ್ದಾರೆ. ಆ ಪೈಕಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ 8 ಮತ ಇರಲಿದೆ. ಪಾಲಿಕೆಯಲ್ಲಿ ಪಕ್ಷಗಳ ಸಂಖ್ಯಾ ಬಲ ಹೀಗಿದೆ: ಬಿಜೆಪಿ ಸದಸ್ಯರು 22, ಸಂಸದ 1, ಶಾಸಕರ ಸಂಖ್ಯೆ 2, ಕಾಂಗ್ರೆಸ್ ಸದಸ್ಯರು 19, ಶಾಸಕರ ಸಂಖ್ಯೆ 1, ಜೆಡಿಎಸ್ ಸದಸ್ಯರು 17, ಶಾಸಕ 1, ಎಂಎಲ್‌ಸಿ 3, ಪಕ್ಷೇತರ ಸದಸ್ಯರು 5, ಬಿಎಸ್‌ಪಿ ಸದಸ್ಯ 1. ಇನ್ನು ಈಗಾಗಲೇ ಇಬ್ಬರು ಪಕ್ಷೇತರರು ಜೆಡಿಎಸ್ ಸೇರ್ಪಡೆಗೊಂಡಿದ್ದು, ಒಬ್ಬ ಪಕ್ಷೇತರ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಒಂದೊಮ್ಮೆ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಾಗದೇ ಬಿಜೆಪಿಗೆ ಮೇಯರ್ ಸ್ಥಾನ ಸಿಕ್ಕಿದ್ದೇ ಆದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್ ಗದ್ದುಗೆ ಹಿಡಿದಂತಾಗುತ್ತದೆ. ಒಟ್ಟಾರೆಯಾಗಿ ಇಲ್ಲಿ ಯಾವುದೇ ಮ್ಯಾಜಿಕ್ ನಂಬರ್ ಅವಶ್ಯಕತೆ ಇಲ್ಲವಾದರೂ ಮೈತ್ರಿಯ ಕಾರಣದಿಂದ ಏನಾದರೂ ಲೆಕ್ಕಾಚಾರ ಅದಲು ಬದಲು ಆಗಬಹುದಾ ಎಂಬ ಕುತೂಹಲ ಇದೆ.
ಇದನ್ನೂ ಓದಿ: ಗರಿಗೆದರಿದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ; ಕೊನೆ ಕ್ಷಣದ ಲೆಕ್ಕಾಚಾರ ಹೇಗಿದೆ?
(JDS may go with Congress if they agrees to give Mayor position for JDS in Mysuru City Corporation Mayor Election)
Published On - 9:17 am, Wed, 25 August 21