ಮುಡಾ ಕೇಸ್: ಲೋಕಾಯುಕ್ತ ವರದಿಗೆ ತಕರಾರು ಎತ್ತಿದ ಸ್ನೇಹಮಯಿ ಕೃಷ್ಣ, ಅರ್ಜಿಯಲ್ಲೇನಿದೆ?
ಮುಡಾ ಪ್ರಕರಣ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಇಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಲೋಕಾಯುಕ್ತ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ವರದಿಗೆ ಸ್ನೇಹಮಯಿ ಕೃಷ್ಣ ತಕರಾರು ಅರ್ಜಿ ಸಲ್ಲಿಸಿದ್ದಾರೆ. 39 ಪುಟಗಳ ಅರ್ಜಿಯಲ್ಲಿ ಲೋಕಾಯುಕ್ತರ ವರದಿ ಸಂಪೂರ್ಣವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಮೈಸೂರು, ಮಾರ್ಚ್ 07: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಪ್ರಕರಣ ತನಿಖೆ ನಡೆಸಿ ಕೋರ್ಟ್ಗೆ ವರದಿ ಸಲ್ಲಿಸಿದ್ದ ಲೋಕಾಯುಕ್ತ ವರದಿಗೆ ದೂರುದಾರ ಸ್ನೇಹಮಯಿಕೃಷ್ಣ (Snehamayi Krishna) ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. 39 ಪುಟಗಳ ತಕರಾರು ಅರ್ಜಿಯಲ್ಲಿ ಸಂಪೂರ್ಣ ಮಾಹಿತಿ ನೀಡಿರುವ ಸ್ನೇಹಮಯಿಕೃಷ್ಣ, ಅದರಲ್ಲಿನ ಅಂಶಗಳನ್ನು ಪರಿಗಣಿಸಿ, ಸೂಕ್ತ ಆದೇಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ತನಿಖಾಧಿಕಾರಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿ ನನ್ನ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದ ಬಿ ಅಂತಿಮ ವರದಿಯಾಗಿರುವುದಿಲ್ಲ. ಆದರೂ ಬಿ ಅಂತಿಮ ವರದಿ ಸಲ್ಲಿಸಿದ್ದರು ಕೂಡ ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ವಿಚಾರಣೆ “ಮಾಡಬಹುದು ಎಂಬಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು, “ಇಂಡಿಯಾ ಕಾರೆಟ್ ಪ್ರೈ.ಲಿ. ವಿರುದ್ಧ ಕರ್ನಾಟಕ ರಾಜ್ಯ” ಎಂಬ ಪ್ರಕರಣದ ತೀರ್ಪಿನಲ್ಲಿ ಹೇಳಿರುತ್ತದೆ. ಸದರಿ ತೀರ್ಪಿನ ಪ್ರತಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅದರಲ್ಲಿನ ಅಂಶಗಳನ್ನು ಪರಿಗಣಿಸಿ, ಸೂಕ್ತ ಆದೇಶ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಹಲವು ದಾಖಲೆಗಳನ್ನು ನೀಡಿದ್ದೇ ಕಾಂಗ್ರೆಸ್ ಪಕ್ಷದವರು! ಸ್ನೇಹಮಯಿ ಕೃಷ್ಣ ಶಾಕಿಂಗ್ ಹೇಳಿಕೆ
ತನಿಖಾಧಿಕಾರಿಯು 1 ರಿಂದ 4ನೇ ಆರೋಪಿಗಳ ವಿಚಾರದಲ್ಲಿ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಬೇಕಾಗಿಯೂ ಲಭ್ಯವಿರುವ ಮತ್ತು ಮುಂದೆ ಲಭ್ಯವಾಗುವ ಸಾಕ್ಷ್ಯಾಧಾರಗಳ ಮೂಲಕ 1 ರಿಂದ 4ನೇ ಆರೋಪಿಗಳ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ಬೇಕಾದ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲು ಅನುಮತಿ ನೀಡಬೇಕಾಗಿಯೂ, ಮಾನ್ಯ ನ್ಯಾಯಾಲಯಕ್ಕೆ ಸೂಕ್ತ ಮತ್ತು ನ್ಯಾಯ ಸಮ್ಮತ ಎಂದು ಕಂಡು ಬರುವ ಇತರೆ ಸೂಕ್ತ ಆದೇಶವನ್ನು ಮಾಡಬೇಕಾಗಿಯೂ ಮಾನ್ಯ ನ್ಯಾಯಾಲಯವನ್ನು ಕಳಕಳಿಯಿಂದ ಮನವಿ ಮಾಡಿದ್ದಾರೆ.
ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಿಷ್ಟು
ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಕೆ ಬಳಿಕ ಟಿವಿ9 ಗೆ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದು, ಮೈಸೂರು ಲೋಕಾಯುಕ್ತ ಪೊಲೀಸರು ನಿರೀಕ್ಷೆಯಂತೆ ಬಿ ವರದಿ ಸಲ್ಲಿಸಿದ್ದಾರೆ. ಇದು ಮುಂಚಿತವಾಗಿ ಹೀಗೆ ಆಗುತ್ತೆ ಅಂತಾ ಗೊತ್ತಾಗಿತ್ತು. ಹಾಗಾಗಿ ಇದೀಗ ತಕರಾರು ಅರ್ಜಿಯನ್ನ ಸಲ್ಲಿಕೆ ಮಾಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯಗೆ ಕ್ಲೀನ್ಚಿಟ್ ಬೆನ್ನಲ್ಲೇ ಕಾಂಗ್ರೆಸ್ ಸಂಸದನಿಗೆ ಸಂಕಷ್ಟ, ಲೋಕಾ ವರದಿಯಲ್ಲೇನಿದೆ?
ತಕರಾರು ಅರ್ಜಿಯಲ್ಲಿಯೇ ಆರೋಪ ಸಾಬೀತಾಗುವಂತಹ ಎಲ್ಲಾ ಅಂಶಗಳು ಇವೆ. ನನ್ನ ಪರವಾಗಿ ನಾನೇ ವಾದ ಮಂಡನೆ ಮಾಡಲಿದ್ದೇನೆ. ಕಾನೂನು ಅರಿವು ಇರುವವರು ತಾವಾಗಿಯೇ ವಾದಿಸಬಹುದು. ಮುಂದಿನ ದಿನಗಳಲ್ಲಿ ನ್ಯಾಯ ಸಿಗುವ ಭರವಸೆ ಇದೆ. ಸದ್ಯಕ್ಕೆ ಬೆದರಿಕೆ, ಆಮಿಷಗಳು ಬರುವುದು ನಿಂತಿದೆ. ಮೊದಲು ನಾನು ಒಂದು ದೂರು ನೀಡಿದ್ದೆ, ಆ ದೂರಿನ ಬಳಿಕ ನಿಂತಿದೆ ಎಂದು ಸ್ನೇಹಮಯಿಕೃಷ್ಣ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:27 pm, Fri, 7 March 25