AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಗೆದಷ್ಟು ಬಯಲಾಗ್ತಿದೆ ಮುಡಾ ಅಕ್ರಮ: ತನಿಖೆ ಚುರುಕು, ನ್ಯಾಯಮೂರ್ತಿ ಪಿಎನ್ ದೇಸಾಯಿ ಎಂಟ್ರಿ

ಮುಡಾ ಹಗರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ನೇತೃತ್ವದ ಆಯೋಗ ಕೂಡ ತನಿಖೆ ಆರಂಭಿಸಿದೆ. ಏತನ್ಮಧ್ಯೆ, ಮುಡಾ ಸೈಟ್ ಹಂಚಿಕೆ ಸಂಬಂಧ ಮಾಜಿಕ ಮಾಧ್ಯಮದಲ್ಲಿ ಎರಡನೇ ಪಟ್ಟಿ ವೈರಲ್ ಆಗಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಮತ್ತು ಆಪ್ತರ ಹೆಸರುಗಳು ಇರುವುದು ಬಹಿರಂಗವಾಗಿದೆ. ಒಟ್ಟಿನಲ್ಲಿ ಮುದಾ ಅಕ್ರಮ ಬಗೆದಷ್ಟು ಬಯಲಾಗುತ್ತಿದ್ದು, ವಿವರ ಇಲ್ಲಿದೆ.

ಬಗೆದಷ್ಟು ಬಯಲಾಗ್ತಿದೆ ಮುಡಾ ಅಕ್ರಮ: ತನಿಖೆ ಚುರುಕು, ನ್ಯಾಯಮೂರ್ತಿ ಪಿಎನ್ ದೇಸಾಯಿ ಎಂಟ್ರಿ
ಮುಡಾ ತನಿಖೆ ಚುರುಕು, ಬಗೆದಷ್ಟು ಬಯಲಾಗ್ತಿದೆ ಅಕ್ರಮ
ದಿಲೀಪ್​, ಚೌಡಹಳ್ಳಿ
| Edited By: |

Updated on: Nov 12, 2024 | 2:02 PM

Share

ಮೈಸೂರು, ನವೆಂಬರ್ 12: ಮುಡಾ ಹಗರಣದ ಬಗ್ಗೆ ಒಂದೆಡೆ ಲೋಕಾಯುಕ್ತ, ಮತ್ತೊಂದೆಡೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದರೆ, ಇವುಗಳ ಮಧ್ಯೆ ಸರ್ಕಾರ ಕೂಡಾ ನ್ಯಾಯಾಂಗ ತನಿಖೆಗೆ ನೀಡಿದೆ. ಎಲ್ಲಾ ದಿಕ್ಕಿನಿಂದಲೂ ಎಲ್ಲಾ ಆಯಾಮದಲ್ಲೂ ತನಿಖೆ ಚುರುಕುಗೊಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು, ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಕೂಡಾ ಹಲವು ಕಡೆ ದಾಳಿ ನಡೆಸಿ, ಮಹತ್ವದ ದಾಖಲೆ ಕಲೆಹಾಕಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ನೇತೃತ್ವದ ಆಯೋಗ ಕೂಡಾ ತನಿಖೆ ನಡೆಸುತ್ತಿದ್ದು, ಇವತ್ತು ಮುಡಾ ಕಚೇರಿಗೆ ಆಗಮಿಸಿದೆ.

ಪ್ರಕರಣದ ತನಿಖೆ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರ ಆಯೋಗ ಮುಡಾ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದೆ. ಮುಡಾ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದೇ ಹೊತ್ತಲ್ಲಿ 50:50 ಅನುಪಾತದಲ್ಲಿ ಸೈಟ್ ಪಡೆದವರ ಎರಡನೇ ಪಟ್ಟಿ ಎನ್ನಲಾಗುತ್ತಿರುವ ಪಟ್ಟಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸೈಟ್ ಪಡೆದವರ ಮತ್ತೊಂದು ಪಟ್ಟಿ ವೈರಲ್

ಯಾವಾಗಲೋ ಭೂ ಸ್ವಾಧೀನ, ಮತ್ಯಾವಾಗಲೋ ಸೈಟು ಹಂಚಿಕೆ. ಭೂಮಿ ವಶಕ್ಕೆ ಪಡೆದಿರುವುದು ಒಂದೆಡೆ, ಸೈಟ್ ನೀಡಿರುವುದು ಮತ್ತೊಂದೆಡೆ. 50-50 ಅನುಪಾತ ಜಾರಿಯಾಗುವ ಮುನ್ನ ಭೂಸ್ವಾಧೀನವಾಗಿದ್ದ ಭೂಮಿಗೂ 50:50 ಅನುಪಾತದಲ್ಲಿ ಸೈಟ್. ಹೀಗೆ ಮುಡಾದಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿವೆ. ಇದೀಗ 50:50 ಅನುಪಾತದಲ್ಲಿ ಸೈಟ್ ಪಡೆದವರ ಮತ್ತೊಂದು ಪಟ್ಟಿ ರಿಲೀಸ್ ಆಗಿದೆ. ಈ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಿಎಂ ಆಪ್ತ ಹಿನಕಲ್​ ಪಾಪಣ್ಣ ಹೆಸರು ಕೂಡಾ ಇದೆ.

928 ಸೈಟ್ ಹಂಚಿಕೆ ಪಟ್ಟಿಯಲ್ಲಿ ಸಿಎಂ ಪತ್ನಿ ಹೆಸರು

ಸಿಎಂ ಪತ್ನಿ ಪಾರ್ತಿಯವರು ಪಡೆದಿರುವ 14 ಸೈಟ್‌ಗಳ ವಿವರವೂ ಬಹಿರಂವಾಗಿದ್ದು, ಹೊಸ ಪಟ್ಟಿಯಲ್ಲಿ ಸಿಎಂ ಪತ್ನಿ ಹೆಸರಿದೆ. ಇದರ ಜೊತೆಗೆ ಸಿಎಂ ಆಪ್ತ ಹಿನಕಲ್ ಪಾಪಣ್ಣ ಸೇರಿ ಹಲವರ ಹೆಸರಿದೆ.

ಮುಡಾ 50:50 ಸೈಟ್ ಪಡೆದವರು (ವೈರಲ್ ಆದ ಪಟ್ಟಿಯಲ್ಲಿರುವ ಹೆಸರುಗಳು)

ಇಂದು ವೈರಲ್ ಆಗಿರುವ ಎರಡನೇ ಪಟ್ಟಿಯಲ್ಲಿ ಪಾರ್ವತಿ ಸಿದ್ದರಾಮಯ್ಯಗೆ 14 ಸೈಟ್ ನೀಡಿರುವ ಮಾಹಿತಿ ಇದೆ. ಹಾಗೆಯೇ ಸಿಎಂ ಆಪ್ತ ಪಾಪಣ್ಣಗೆ 32 ಸೈಟ್ ನೀಡಿರುವ ಬಗ್ಗೆ ಉಲ್ಲೇಖವಿದೆ. ಹಾಗೆಯೇ ಮಹದೇವ್ ಎಂಬುವವರಿಗೆ 34, ದೀಪು ರಾಜೇಂದ್ರ ಎಂಬುವವರಿಗೆ 14, ಮಹೇಂದ್ರ ಎಂಬವರಿಗೆ 19 ಸೈಟ್ ನೀಡಲಾಗಿದೆ. ಇನ್ನೂ ಅಬ್ದುಲ್ ವಾಹಿದ್ ಎಂಬವರಿಗೆ 14, ಎಂ.ರವಿಕುಮಾರ್ ಎಂಬವರಿಗೆ 23 ಸೈಟ್, ಸುನೀತಾ ಬಾಯಿ ಎಂಬವರಿಗೆ 12 ನಿವೇಶನ ನೀಡಲಾಗಿದೆ. ಕ್ಯಾಥೆಡ್ರಲ್ ಪ್ಯಾರಿಸ್ ಸೊಸೈಟಿಗೆ ಬರೋಬ್ಬರಿ 48 ಸೈಟ್ ನೀಡಿರುವ ಬಗ್ಗೆಯೂ ಎರಡನೇ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ಸಿಎಂ ಪತ್ನಿ ಹೆಸರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎನ್ನಲಾದ ಲಿಸ್ಟ್​ ವೈರಲ್

ಹೀಗೆ ಮುಡಾ ಅಕ್ರಮದಲ್ಲಿ ದಿನಕ್ಕೊಂದು ವಿಚಾರ ಬಯಲಾಗುತ್ತಿದ್ದು, ಬಿಜೆಪಿಗೆ ಅಸ್ತ್ರವಾಗಿದೆ. ಈ ಕುರಿತು ಪ್ರತಿಕ್ರಯಿಸಿರುವ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ದೂರು

ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಿಯೋಗ, ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧವೇ ದೂರು ನೀಡಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಸಿಎಂ ಪತ್ನಿ ಪಾರ್ವತಿಯವರ ನಿವೇಶನ ನೋಂದಣಿಗೆ ತಹಶೀಲ್ದಾರ್ ಅವರೇ ಮುದ್ರಾಂಕ ಶುಲ್ಕ ನೀಡಿದ್ದಾರೆಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಇದು ಅಪಪ್ರಚಾರವಾಗಿದ್ದು, ಜನರನ್ನ ದಿಕ್ಕು ತಪ್ಪಿಸಲು, ಮುಖ್ಯಮಂತ್ರಿಯನ್ನು ಖಳನಾಯಕರನ್ನಾಗಿ ಬಿಂಬಿಸುವ ದುರುದ್ದೇಶವಾಗಿದೆ ಎಂದು ಕಾಂಗ್ರೆಸ್ ದೂರಿನಲ್ಲಿ ತಿಳಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ