ಮೈಸೂರು ದಸರಾ 2024: ಅರಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜಾ ಸಂಭ್ರಮ
ನವರಾತ್ರಿಯ 9ನೇ ದಿನ ಇಂದು (ಅ.11) ಆಯುಧ ಪೂಜೆ. ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಆರಂಭವಾಗಿದೆ. ಚಾಮುಂಡಿ ಬೆಟ್ಟದಲ್ಲಿ ನಸುಕಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಇಂದು ಅರಮನೆಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂಬ ಮಾಹಿತಿ ಇಲ್ಲಿದೆ.
ಮೈಸೂರು, ಅಕ್ಟೋಬರ್ 11: ಕರ್ನಾಟಕದಾದ್ಯಂತ ನವರಾತ್ರಿ (Navaratri) ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಡಹಬ್ಬ ದಸರಾವನ್ನು (Dasara) ಮೈಸೂರಿನಲ್ಲಿ (Mysore) ಈ ಬಾರಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನವರಾತ್ರಿಯ 9ನೇ ದಿನ ಇಂದು (ಅ.11) ಆಯುಧ ಪೂಜೆ. ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಆರಂಭವಾಗಿದೆ. ಬೆಳಗ್ಗೆ 6 ಗಂಟೆಗೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿ ಹೋಮ ನೆರವೇರಿತು.
ಬೆಳಗ್ಗೆ 6.40ರಿಂದ 7.10ರೊಳಗೆ ಖಾಸಗಿ ಆಯುಧಗಳನ್ನು ಪೂಜೆ ಮಾಡಲಾಗಿದೆ. ಬಳಿಕ ಖಾಸಗಿ ಆಯುಧಗಳನ್ನು ಆನೆ ಬಾಗಿಲು ಮೂಲಕ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. 7.30ರಿಂದ 8 ಗಂಟೆಯೊಳಗೆ ದೇಗುಲದಿಂದ ಖಾಸಗಿ ಆಯುಧಗಳನ್ನ ಆನೆ ಬಾಗಿಲು ಮುಖಾಂತರ ಕಲ್ಯಾಣ ಮಂಟಪಕ್ಕೆ ಆಗಮಿಸುತ್ತವೆ.
9.05ಕ್ಕೆ ಚಂಡಿ ಹೋಮ ಪೂರ್ಣಾಹುತಿ, 11.45ಕ್ಕೆ ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮಿಸುತ್ತವೆ. ಮಧ್ಯಾಹ್ನ 12.20ರಿಂದ 12.45ರೊಳಗೆ ಅರಮನೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ. ಸಂಜೆ ಖಾಸಗಿ ದರ್ಬಾರ್ ಬಳಿಕ ಸಿಂಹ ಮುಖ ವಿಸರ್ಜನೆ ನೆರವೇರುತ್ತದೆ.
ಇದನ್ನೂ ಓದಿ: ಜಗಮಗಿಸೋ ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮನೆ ದೇವರ ದರ್ಶನ ಮಾಡುತ್ತಾರೆ. ಬಳಿಕ ಮೈಸೂರು ಅರಮನೆಯಲ್ಲಿ ದಫ್ತಾರ್ ಪೂಜೆ ನೆರವೇರುತ್ತದೆ.
ಸಿಎಂ ಸಿದ್ದರಾಮಯ್ಯ 3 ದಿನ ಮೈಸೂರು ಪ್ರವಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ 3 ದಿನ ಅಕ್ಟೋಬರ್ 11, 12 ಮತ್ತು 13 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ 10.25ಕ್ಕೆ ವಿಮಾನದ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಇಂದು ಮತ್ತು ನಾಳೆ ಎರಡು ದಿನ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ, ಸಿಎಂ ಸಿದ್ದರಾಮಯ್ಯ ಭಾನುವಾರ ಧಾರವಾಡ ಮತ್ತು ಬೆಳಗಾವಿಗೆ ತೆರಳಲಿದ್ದಾರೆ.
ನಾಳೆ ಜಂಬೂ ಸವಾರಿಗೆ ಚಾಲನೆ
ಸಿಎಂ ಸಿದ್ದರಾಮಯ್ಯ ಅವರು ಅಕ್ಟೋಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 1.41 ರಿಂದ 2.10ರ ನಡುವೆ ಅರಮನೆಯ ಬಲರಾಮ ದ್ವಾರದಲ್ಲಿರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಸಂಜೆ 4 ಗಂಟೆಯಿಂದ 4.30ರ ಒಳಗಾಗಿ ಅರಮನೆ ಒಳಾವರಣದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಬನ್ನಿಮಂಟಪ ಮೈದಾನದಲ್ಲಿ ರಾತ್ರಿ 7 ಗಂಟೆಗೆ ಆಯೋಜಿಸಿರುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಕ್ಟೋಬರ್ 13 ರಂದು ಬೆಳಿಗ್ಗೆ 11ಕ್ಕೆ ಕಡಕೋಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.30ಕ್ಕೆ ಮೈಸೂರಿನಿಂದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ತೆರಳುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:29 am, Fri, 11 October 24