ಮಗು ಹುಟ್ಟಿದ ಮರುದಿನವೇ ಹೆರಿಗೆ ಆಸ್ಪತ್ರೆ ಎದುರು ತಂದೆಯ ಸಾವು
ಮೈಸೂರಿನಲ್ಲಿ ಒಂದು ದುರಂತ ಘಟನೆ ನಡೆದಿದೆ. ಮಗು ಹುಟ್ಟಿದ ಮರುದಿನವೇ ತಂದೆ ಆಸ್ಪತ್ರೆಯ ಎದುರು ನಿಧನರಾಗಿದ್ದಾರೆ. ಐದು ದಿನಗಳಿಂದ ಆಸ್ಪತ್ರೆಯ ಆವರಣದಲ್ಲಿ ಮಲಗುತ್ತಿದ್ದ ನಾಗೇಶ್ ಅವರು ತಂದೆಯಾದ ಸಂತೋಷದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಕರಿಗೆ ಸೂಕ್ತವಾದ ವಸತಿ ವ್ಯವಸ್ಥೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಮೈಸೂರು, ಜನವರಿ 13: ಮಗು ಹುಟ್ಟಿದ ಮರುದಿನವೇ ತಂದೆ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ (Mysore) ನಡೆದಿದೆ. ನಾಗೇಶ್ (47) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ನಿವಾಸಿ ನಾಗೇಶ್ ಹೆರಿಗೆಗೆ ಅಂತ ಪತ್ನಿಯನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗಾಗಿ, ನಾಗೇಶ್ ಪತ್ನಿಯ ಆರೈಕೆಗಾಗಿ ಕಳೆದ ಐದಾರು ದಿನಗಳಿಂದ ಆಸ್ಪತ್ರೆಯಲ್ಲಿ ತಂಗಿದ್ದರು. ನಾಗೇಶ್ ಪ್ರತಿದಿನ ಆಸ್ಪತ್ರೆಯ ಆವರಣದಲ್ಲಿ ಮಲಗುತ್ತಿದ್ದರು.
ರವಿವಾರ ನಾಗೇಶ್ ಪತ್ನಿಗೆ ಹೆರಿಗೆಯಾಗಿದೆ. ತಂದೆಯಾದ ಖುಷಿಯಲ್ಲಿ ನಾಗೇಶ್ ರವಿವಾರ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದರು. ಬೆಳಗ್ಗೆ 7 ಗಂಟೆ ಸುಮಾರಿಗೆ ನೋಡಿದಾಗ ನಾಗೇಶ್ ಮೃತಪಟ್ಟಿರುವುದು ತಿಳಿದಿದೆ. ಮಗು ಜನಿಸಿದ ಮರುದಿವೇ ತಂದೆ ನಾಗೇಶ್ ಉಸಿರು ಚಲ್ಲಿದ್ದಾರೆ. ತಂದೆಯಾದ ಖುಷಿಯಲ್ಲಿಯೇ ನಾಗೇಶ್ ಬಾರದ ಲೋಕಕ್ಕೆ ತೆರಳಿದ್ದಾರೆ.
ಇನ್ನು, ರೋಗಿಯ ಆರೈಕೆಗೆ ಬರುವ ಸಂಬಂಧಿಕರು ನಿತ್ಯ ಆಸ್ಪತ್ರೆಯ ಹೊರಗಡೆ ಮಲಗುತ್ತಾರೆ. ಆಸ್ಪತ್ರೆಯಲ್ಲಿ ತಂಗಲು ಸರಿಯಾದ ವ್ಯವಸ್ಥೆ ಇಲ್ಲ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಶಿವನಗೌಡ ಕರಿಗೌಡ್ರ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಬಿಐ ಬ್ಯಾಂಕ್ನಲ್ಲಿ 1.50 ಲಕ್ಷ, ಸಹಕಾರಿ ಸಂಘದಲ್ಲಿ 1.50 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ತೀರಿಸಲಾಗದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಕೆರೆ ಏರಿ ಮೇಲಿನ ದೇವಾಲಯಕ್ಕೆ ಕಾರು ಡಿಕ್ಕಿಯಾಗಿ ಪತ್ರಕರ್ತ ಸ್ಥಳದಲ್ಲೇ ಸಾವು ಮೃತಪಟ್ಟಿದ್ದಾನೆ. ಗುಡಿಬಂಡೆ ನಿವಾಸಿ ಭರತ್ (32) ಮೃತ ದುರ್ದೈವಿ. ಜಿ.ಎಸ್.ಭರತ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮಗಳ ನಾಮಕರಣ ಕಾರ್ಯಕ್ರಮದ ಸಿದ್ಧತೆಗೆಂದು ಗುಡಿಬಂಡೆ ಬಂದಿದ್ದರು. ಗುಡಿಬಂಡೆ ಪಟ್ಟಣದಿಂದ ಬಾಗೇಪಲ್ಲಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಹೊರವಲಯದಲ್ಲಿ ಬಸ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದೆ. ಬಸ್ ಚಾಲಕ ಸೇರಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜೇವರ್ಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Mon, 13 January 25