ಹಣ ಪಡೆದು ಗಲಾಟೆ ಮಾಡಿದೆ ಎಂದಿದ್ದ ವೀಡಿಯೋಗೆ ಬಿಗ್ ಟ್ವಿಸ್ಟ್ : ನಾಗೇಂದ್ರ ಬೆಂಬಲಿಗರು ಹೆದರಿಸಿ ವೀಡಿಯೋ ಮಾಡಿದ್ರು ಎಂದು ಬಿಜೆಪಿ ಕಾರ್ಯಕರ್ತ

ಮೈಸೂರು ಬಿಜೆಪಿ ಒಳಜಗಳ ಉಲ್ಬಣಿಸಿದ್ದು, ಪ್ರತಾಪ್ ಸಿಂಹ ಮತ್ತು ಎಲ್. ನಾಗೇಂದ್ರ ಬೆಂಬಲಿಗರ ನಡುವಿನ ಸಂಘರ್ಷ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಮಾವೇಶದಲ್ಲಿ ಪ್ರತಾಪ್ ಸಿಂಹ ಹೆಸರು ಕೈಬಿಟ್ಟಿದ್ದಕ್ಕೆ ಗಲಾಟೆ ಮಾಡಿದ ಕಾರ್ಯಕರ್ತ ರಾಜಾಚಾರಿಯವರನ್ನು ಬೆದರಿಸಿ, ಬಲವಂತವಾಗಿ ವಿಡಿಯೋ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹಣ ಪಡೆದು ಗಲಾಟೆ ಮಾಡಿದೆ ಎಂದಿದ್ದ ವೀಡಿಯೋಗೆ ಬಿಗ್ ಟ್ವಿಸ್ಟ್ : ನಾಗೇಂದ್ರ ಬೆಂಬಲಿಗರು ಹೆದರಿಸಿ ವೀಡಿಯೋ ಮಾಡಿದ್ರು ಎಂದು ಬಿಜೆಪಿ ಕಾರ್ಯಕರ್ತ
ಮೈಸೂರು ಬಿಜೆಪಿ ಜಗಳ
Image Credit source: Tv9 kannada
Edited By:

Updated on: Nov 09, 2026 | 4:17 PM

ಮೈಸೂರು, ನ.9: ಮೈಸೂರು ಬಿಜೆಪಿ ಒಳರಾಜಕೀಯದ ನಡುವಿನ ಜಗಳಕ್ಕೆ ಭಾರೀ ಟ್ವಿಸ್ಟ್​​ ಸಿಕ್ಕಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ಬೆಂಬಲಿಗರ ನಡುವಿನ ಸಂಘರ್ಷ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಮಾವೇಶದ ವೇದಿಕೆಯಲ್ಲಿ ಪ್ರತಾಪ್ ಸಿಂಹ ಹೆಸರು ಬಿಟ್ಟಿದ್ದಕ್ಕೆ ಗಲಾಟೆ ಮಾಡಿದ ಕಾರ್ಯಕರ್ತ ರಾಜಾಚಾರಿಗೆ ಕೊಲೆ ಬೆದರಿಕೆ ಹಾಕಿ, ಬಲವಂತವಾಗಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಳೆದ ನವೆಂಬರ್ 6 ರಂದು ಮೈಸೂರಿನ ಟೌನ್‌ಹಾಲ್ ಆವರಣದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಹಿರಿಯ ನಾಯಕರ ಸಮ್ಮುಖದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸ್ವಾಗತ ಭಾಷಣದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಇದರಿಂದ ಕೋಪಗೊಂಡ ಬಿಜೆಪಿ ಕಾರ್ಯಕರ್ತ ಡಿ.ಎಲ್. ರಾಜಾಚಾರಿ ವೇದಿಕೆ ಮುಂಭಾಗಕ್ಕೆ ಧಾವಿಸಿ, ಪ್ರತಾಪ್ ಸಿಂಹ ಅವರ ಹೆಸರನ್ನು ಹೇಳುವಂತೆ ಬಹಿರಂಗವಾಗಿ ಗಲಾಟೆ ನಡೆಸಿದರು. ತಕ್ಷಣವೇ ಪೊಲೀಸರು ರಾಜಾಚಾರಿಯನ್ನು ವೇದಿಕೆಯ ಆವರಣದಿಂದ ಹೊರಗೆ ಕಳುಹಿಸಿದ್ದರು.

Loading...

ಇದನ್ನೂ ಓದಿ : ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್: ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿ, ಇಲ್ಲದಿದ್ದರೆ ನೋಟಿಸ್

ಇನ್ನು ಸಮಾವೇಶ ಮುಗಿದ ಬೆನ್ನಲ್ಲೇ ಈ ಪ್ರಕರಣಕ್ಕೆ ಸರಣಿ ಟ್ವಿಸ್ಟ್‌ ಸಿಕ್ಕಿದೆ. ಘಟನೆ ನಡೆದ ನಂತರ ರಾಜಾಚಾರಿ ಅವರದ್ದೆನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಅದರಲ್ಲಿ, “ನಾನು ಕುಡಿದು 2,000 ರೂಪಾಯಿ ಹಣ ಪಡೆದು ಗಲಾಟೆ ಮಾಡಿದ್ದೆ. ನನ್ನದೇ ತಪ್ಪಾಯಿತು, ನಾಗೇಂದ್ರ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ. ನನಗೆ ಯಾರೂ ಹೇಳಿಕೊಟ್ಟಿರಲಿಲ್ಲ” ಎಂದು ರಾಜಾಚಾರಿ ಹೇಳಿಕೆ ನೀಡಿದ್ದರು.

ಆದರೆ, ಎರಡು ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ರಾಜಾಚಾರಿ, ಆ ವಿಡಿಯೋದ ಹಿಂದಿನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. “ಸಮಾವೇಶ ಮುಗಿದ ನಂತರ ಮಾಜಿ ಶಾಸಕ ಎಲ್. ನಾಗೇಂದ್ರ ಅವರ ನಾಲ್ವರು ಬೆಂಬಲಿಗರು ನನ್ನನ್ನು ಅಡ್ಡಗಟ್ಟಿ, ಹೆದರಿಸಿ, ಕೊಲೆ ಬೆದರಿಕೆ ಒಡ್ಡಿ ಈ ರೀತಿ ವಿಡಿಯೋ ಮಾಡಿಕೊಂಡಿದ್ದಾರೆ. ನನಗೆ ಕುಡಿಯುವ ಅಭ್ಯಾಸವೇ ಇಲ್ಲ. ಬೆದರಿಕೆಗೆ ಹೆದರಿ ನಾನು ಆ ರೀತಿ ಹೇಳಿಕೆ ನೀಡಿದ್ದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ರಾಜಾಚಾರಿ ನೀಡಿದ ದೂರಿನ ಮೇರೆಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಗೇಂದ್ರ ಬೆಂಬಲಿಗರೆನ್ನಲಾದ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
Loading...
Unable to load recommendations.
Follow Us