
ಮೈಸೂರು, ಸೆ.28: ಮೃತ ಗ್ರಾಹಕರೊಬ್ಬರ ಖಾತೆ ಹಾಗೂ ಬ್ಯಾಂಕಿನ ಆಂತರಿಕ ಖಾತೆಯಿಂದ ಬರೋಬ್ಬರಿ 61.57 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಮಾಜಿ ಮುಖ್ಯ ವ್ಯವಸ್ಥಾಪಕರಿಗೆ ಮೈಸೂರಿನ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಎಸ್‌ಬಿಐ ಮಾಜಿ ಮುಖ್ಯ ವ್ಯವಸ್ಥಾಪಕ ಎ.ವಿ. ಕುಲಕರ್ಣಿ ಅಲಿಯಾಸ್ ಅನಿರುದ್ಧ ವಸಂತರಾವ್ ಕುಲಕರ್ಣಿ ಶಿಕ್ಷೆಗೆ ಗುರಿಯಾದ ದೋಷಿಯಾಗಿದ್ದಾರೆ. ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ (CJM) ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ವಿ. ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಆರೋಪಿ ಎ.ವಿ. ಕುಲಕರ್ಣಿ ಅವರು ಮೇ 13, 2009 ರಿಂದ ಡಿಸೆಂಬರ್ 23, 2011 ರವರೆಗೆ ಮೈಸೂರಿನ ಚಾಮುಂಡಿಪುರಂನಲ್ಲಿರುವ ಎಸ್‌ಬಿಐ (SBI) ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿ (Chief Manager) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಭಾರಿ ಅಕ್ರಮ ಎಸಗಿದ್ದರು. ಏಪ್ರಿಲ್ 2005 ರಲ್ಲೇ ನಿಧನರಾಗಿದ್ದ ಕೃಷ್ಣ ಅಯ್ಯರ್ ಎಂಬುವರ ಖಾತೆಯಲ್ಲಿದ್ದ 40.53 ಲಕ್ಷ ರೂಪಾಯಿಗಳನ್ನು ವಂಚನೆಯ ಮೂಲಕ ತಮ್ಮ ಹಾಗೂ ತಮ್ಮ ಮಗನ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಇದರ ಜೊತೆಗೆ ಬ್ಯಾಂಕಿನ ಆಂತರಿಕ ಖಾತೆಯಿಂದ 21.04 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದರು. ಒಟ್ಟು 61.57 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಿ, ನಂತರ ಖಾತೆಯಿಂದ ಹಣ ಹಿಂಪಡೆದು ದುರುಪಯೋಗಪಡಿಸಿಕೊಂಡಿದ್ದರು.
ಇದನ್ನೂ ಓದಿ; ಖಾಸಗಿ ಆಸ್ಪತ್ರೆ ಕೈಚೆಲ್ಲಿದ್ದ ಜೀವಕ್ಕೆ ಮರುಜೀವ: ಸಾವಿನ ದವಡೆಯಿಂದ ಗರ್ಭಿಣಿಯನ್ನು ಪಾರು ಮಾಡಿದ ಮಂಗಳೂರಿನ ಸರ್ಕಾರಿ ವೈದ್ಯರು
ಬ್ಯಾಂಕಿನ ಹಿರಿಯ ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯ ವೇಳೆ ಈ ಬೃಹತ್ ಆರ್ಥಿಕ ಅಕ್ರಮ ಬೆಳಕಿಗೆ ಬಂದಿತ್ತು. ತನಿಖೆಯ ವೇಳೆ ಆರೋಪಿ ಕುಲಕರ್ಣಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ತದನಂತರ ಬ್ಯಾಂಕ್‌ಗೆ ಸುಮಾರು 62 ಲಕ್ಷ ರೂಪಾಯಿಗಳನ್ನು ಮರುಪಾವತಿಸಿದ್ದರು. ಆಂತರಿಕ ತನಿಖೆ ಪೂರ್ಣಗೊಂಡ ಬಳಿಕ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಕೂಲಂಕುಷ ತನಿಖೆ ನಡೆಸಿ ಮೈಸೂರಿನ 1ನೇ ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ವಿ. ಅವರು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 409 (ಸಾರ್ವಜನಿಕ ಸೇವಕ ಅಥವಾ ಬ್ಯಾಂಕರ್‌ನಿಂದ ನಂಬಿಕೆ ದ್ರೋಹ) ಅಡಿಯಲ್ಲಿ ಆರೋಪಿ ಎ.ವಿ. ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ್ದಾರೆ. 1 ವರ್ಷದ ಕಠಿಣ ಕಾರಾಗೃಹವಾಸ. 50,000 ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ವಿಧಿಸಲಾದ ದಂಡದ ಮೊತ್ತ ಪೈಕಿ 40,000 ರೂಪಾಯಿಗಳನ್ನು ಸಂಕಷ್ಟಕ್ಕೊಳಗಾಗಿದ್ದ ಬ್ಯಾಂಕ್‌ಗೆ ಪರಿಹಾರವಾಗಿ ಪಾವತಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ಪ್ರಕಾಶ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ