
ಮೈಸೂರು, ಅಕ್ಟೋಬರ್ 09: ಮೈಸೂರು ದಸರಾಗೆ ದಿನಗಣನೆ ಶುರುವಾಗಿದ್ದು, ವಿಶ್ವ ವಿಖ್ಯಾತ ದಸರಾ ಕಣ್ತುಂಬಿಕೊಳ್ಳಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ದಸರಾ ಮಹೋತ್ಸವದ ಕಾರ್ಯಗಳು ಜೋರಾಗಿ ನಡೆದಿವೆ. ಈ ಬಾರಿಯ ದಸರಾ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಶಿಥಿಲಗೊಂಡ ಕಟ್ಟಡ ಮತ್ತು ಮರಗಳಲ್ಲಿ ಕುಳಿತು ಜಂಬೂಸವಾರಿ ವೀಕ್ಷಣೆಗೆ ನಿಷೇಧಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೀಮಾ ಲಾಟ್ಕರ್, ‘ಈ ಬಾರಿಯ ನಾಡ ಹಬ್ಬ ಮೈಸೂರು ದಸರಾಗೆ 5,161 ಸಿವಿಲ್ ಹಾಗೂ ಸಂಚಾರಿ ಪೊಲೀಸರು, 33 ಕೆಎಸ್ಆರ್ಪಿ ತುಕಡಿ, 25 ಡಿಎಆರ್ ತುಕಡಿ, 1500 ಹೋಮ್ ಗಾರ್ಡ್ಗಳು ಸೇರಿದಂತೆ ಆರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ದಸರಾದ 11 ದಿನ ಒಟ್ಟು 18 ಪೊಲೀಸ್ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಅರಮನೆ ಸುತ್ತಮುತ್ತ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇರಲಿದ್ದು, 35,794 ಸಿಸಿ ಕ್ಯಾಮರಾ ಮೂಲಕ ಸಾರ್ವಜನಿಕರ ಮೇಲೆ ಕಣ್ಗಾವಲು ಇರಲಿದೆ’ ಎಂದು ಅವರು ತಿಳಿಸಿರು.
ಇನ್ನು ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೆ ಜಂಬೂಸವಾರಿ. ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನರು ಕಾಯುತ್ತಿದ್ದಾರೆ. ಆದರೆ ‘ಶಿಥಿಲಗೊಂಡಿರುವ ಕಟ್ಟಡ ಮತ್ತು ಮರಗಳ ಮೇಲೆ ಕುಳಿತು ಜಂಬೂಸವಾರಿ ವೀಕ್ಷಣೆಗೆ ನಿಷೇಧಿಸಲಾಗಿದೆ. ಈಗಾಗಲೇ 92 ಹಳೆಯ ಕಟ್ಟಡಗಳನ್ನು ಗುರುತು ಮಾಡಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಖಡಕ್ ಎಚ್ಚರಿಕೆ ನಿಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.