ಭೀಮನ ಅಭಿಮಾನಿಗಳಿಗೆ ನಿರಾಸೆ: ಈ ಬಾರಿಯ ಜಂಬೂಸವಾರಿಯಲ್ಲಿ ಭಾಗವಹಿಸಲ್ಲ; ಕಾರಣವೇನು ಗೊತ್ತಾ?

ಮೈಸೂರು ದಸರಾ 2026ರ ಸಿದ್ಧತೆಗಳು ಆಗಸ್ಟ್ 26ರಿಂದ ಗಜಪಯಣದೊಂದಿಗೆ ಆರಂಭವಾಗುತ್ತಿವೆ. ನಾಗರಹೊಳೆಯಿಂದ ವೀರನಹೊಸಳ್ಳಿ ಮೂಲಕ ಅರಮನೆಗೆ 14 ಆನೆಗಳು ಆಗಮಿಸಲಿವೆ. ಅದರಲ್ಲಿ 12 ಪ್ರಮುಖ ಮತ್ತು 2 ಮೀಸಲು ಆನೆಗಳಿವೆ. ಜನಪ್ರಿಯ ಭೀಮ ಆನೆಯು ಮದ ಇರುವ ಕಾರಣ ಈ ಬಾರಿ ಮೀಸಲಿನಲ್ಲಿ ಉಳಿಯಲಿದ್ದು, ವಿಶೇಷ ತರಬೇತಿ ಮತ್ತು ಆರೈಕೆಗೆ ಒಳಗಾಗಲಿದೆ.

ಭೀಮನ ಅಭಿಮಾನಿಗಳಿಗೆ ನಿರಾಸೆ: ಈ ಬಾರಿಯ ಜಂಬೂಸವಾರಿಯಲ್ಲಿ ಭಾಗವಹಿಸಲ್ಲ; ಕಾರಣವೇನು ಗೊತ್ತಾ?
ಭೀಮ ಆನೆ
Edited By:

Updated on: Aug 21, 2026 | 3:43 PM

ಮೈಸೂರು, ಆ.21: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯ ಗಜಪಡೆಗಳ ಆಗಮನದೊಂದಿಗೆ ಸಿದ್ಧತೆಗಳು ಶುರುವಾಗಲಿವೆ. ಆಗಸ್ಟ್ 26ರಂದು ಗಜಪಯಣ ಎಂಬ ಸಾಂಪ್ರದಾಯಿಕ ಕಾರ್ಯಕ್ರಮದ ಮೂಲಕ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಈ ಬಾರಿ ಹುಣಸೂರು ತಾಲೂಕಿನ ನಾಗರಹೊಳೆಯ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ ವೀರನಹೊಸಳ್ಳಿಯಿಂದ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುವುದು. ಕಾಡಿನಿಂದ ನಾಡಿಗೆ ಬರುವ ಆನೆಗಳಿಗೆ ವೀರನಹೊಸಳ್ಳಿಯಲ್ಲಿ ಗಜಪೂಜೆಯನ್ನು ನೆರವೇರಿಸಿ, ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಲಾಗುತ್ತದೆ. ಅಲ್ಲಿಂದ ಆನೆಗಳನ್ನು ಲಾರಿಗಳ ಮೂಲಕ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಕರೆತರಲಾಗುವುದು. ಎರಡು ದಿನಗಳ ವಿಶ್ರಾಂತಿಯ ನಂತರ, ಈ ಆನೆಗಳು ಮೈಸೂರು ಅರಮನೆಯ ಆವರಣವನ್ನು ಪ್ರವೇಶಿಸಿ ದಸರಾ ಕಾರ್ಯಕ್ರಮಗಳಿಗೆ ಸಿದ್ಧವಾಗಲಿವೆ.

ಒಟ್ಟು 14 ಆನೆಗಳನ್ನು ಈ ಬಾರಿಯ ದಸರಾಕ್ಕಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ 12 ಆನೆಗಳು ನೇರವಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದು, ಉಳಿದ ಎರಡು ಆನೆಗಳನ್ನು ಮೀಸಲಾಗಿರಿಸಲಾಗಿದೆ. ಯಾವುದೇ ಆನೆಗೆ ಆರೋಗ್ಯ ಸಮಸ್ಯೆ ಅಥವಾ ಇನ್ನಿತರ ತೊಂದರೆಗಳು ಎದುರಾದರೆ, ಈ ಮೀಸಲು ಆನೆಗಳನ್ನು ಬಳಸಲಾಗುವುದು.

ಇಲ್ಲಿದೆ ನೋಡಿ ವಿಡಿಯೋ:

Mysuru Dasara 2026: ಭೀಮ ಅಂತಾ ಕೂಗಿದ್ರೆ ರಿಯಾಕ್ಟ್‌ ಮಾಡುವ ಆನೆ.. ಜಂಬೂಸವಾರಿಗೆ ಸಿದ್ಧನಾಗಿಲ್ಲ ಯಾಕೆ?|#TV9D

ಗಜಪಡೆಗಳ ಆಗಮನ ಹಂತಗಳು:

ಮೊದಲ ಹಂತದಲ್ಲಿ ಒಂಬತ್ತು ಆನೆಗಳು:

ದುಬಾರೆ ಶಿಬಿರದಿಂದ ಧನಂಜಯ (45 ವರ್ಷ), ಪ್ರಶಾಂತ (54 ವರ್ಷ), ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ. ಬಳ್ಳೆ ಶಿಬಿರದಿಂದ ಮಹೇಂದ್ರ (42 ವರ್ಷ), ಲಕ್ಷ್ಮಿ. ಮತ್ತಿಗೋಡು ಶಿಬಿರದಿಂದ ಏಕಲವ್ಯ (41 ವರ್ಷ).ಈ ಒಂಬತ್ತು ಆನೆಗಳು ಆಗಸ್ಟ್ 26ರಂದೇ ವೀರನಹೊಸಳ್ಳಿಯಿಂದ ಗಜಪೂಜೆ ಸ್ವೀಕರಿಸಿ ಮೈಸೂರಿಗೆ ತಲುಪಲಿವೆ.

ಎರಡನೇ ಹಂತದಲ್ಲಿ ಮೂರು ಆನೆಗಳು:

ದೊಡ್ಡ ಅರವೆ ಶಿಬಿರದಿಂದ ರೂಪಾ (50 ವರ್ಷ). ರಾಮಾಪುರ (ಬಂಡೀಪುರ) ಶಿಬಿರದಿಂದ ಚೈತ್ರಾ (55 ವರ್ಷ). ಮತ್ತಿಗೋಡು ಶಿಬಿರದಿಂದ ಶ್ರೀಕಂಠ (57 ವರ್ಷ). ಶ್ರೀಕಂಠ ಈ ಬಾರಿ ದಸರಾದಲ್ಲಿ ಭಾಗವಹಿಸುವ ಅತ್ಯಂತ ಹಿರಿಯ ಆನೆಯಾಗಿದೆ.

ಇದನ್ನೂ ಓದಿ: ತೀವ್ರ ವಿರೋಧದ ನಡುವೆಯೂ ಮೈಸೂರು ದಸರಾದಲ್ಲಿ ಕಂಬಳಕ್ಕೆ ಭರದ ಸಿದ್ಧತೆ: ಟ್ರ್ಯಾಕ್ ನಿರ್ಮಾಣ ಕಾರ್ಯ ಆರಂಭ

ಈ ಬಾರಿ ಭೀಮ ಆನೆ ಮೀಸಲಿನಲ್ಲಿ:

ಮೈಸೂರು ನಗರ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿರುವ ಭೀಮ ಆನೆಯು ಈ ಬಾರಿ ಜಂಬೂಸವಾರಿಯಲ್ಲಿ ನೇರವಾಗಿ ಭಾಗವಹಿಸದೆ ಮೀಸಲು ಪಟ್ಟಿಯಲ್ಲಿದೆ. ಕೇವಲ 26 ವರ್ಷ ವಯಸ್ಸಿನ ಭೀಮ, ತನ್ನ ಸರಳತೆ ಮತ್ತು ಸ್ನೇಹಪರ ಗುಣಗಳಿಂದ ಜನಪ್ರಿಯ. ರಸ್ತೆಯಲ್ಲಿ “ಭೀಮ” ಎಂದು ಕೂಗಿದರೆ ತಿರುಗಿ ಪ್ರತಿಕ್ರಿಯೆ ನೀಡುವ ಗುಣದಿಂದ ಎಲ್ಲರ ಮನಗೆದ್ದಿತ್ತು. ಆದರೆ, ಈ ಬಾರಿ ಭೀಮನಿಗೆ ಮದ ಇರುವ ಕಾರಣ ಜಂಬೂಸವಾರಿಯಲ್ಲಿ ಭಾಗವಹಿಸಲು ಸಿದ್ಧನಾಗಿಲ್ಲ. ಹೀಗಾಗಿ, ಭೀಮನನ್ನು ಮೀಸಲು ಆನೆಯಾಗಿ ಇರಿಸಲಾಗಿದೆ. ದುಬಾರೆ ಶಿಬಿರದ 51 ವರ್ಷದ ಹರ್ಷ ಆನೆಯು ಭೀಮನ ಜೊತೆ ಮೀಸಲು ಆನೆಯಾಗಿ ಇರಲಿದೆ. ಮುಖ್ಯ 12 ಆನೆಗಳಿಗೆ ಯಾವುದೇ ತೊಂದರೆ ಎದುರಾದರೆ ಈ ಆನೆಗಳು ಕಾರ್ಯ ನಿರ್ವಹಿಸಲಿವೆ.

ತರಬೇತಿ ಮತ್ತು ಸಿದ್ಧತೆಗಳು:

ದಸರಾ ಜಂಬೂಸವಾರಿಯ ಮೆರವಣಿಗೆ ನೋಡಲು ವಿಶ್ವದಾದ್ಯಂತ ಪ್ರವಾಸಿಗರು ಆಗಮಿಸುತ್ತಾರೆ. ಅದಕ್ಕಾಗಿ ಆನೆಗಳಿಗೆ ವಿಶೇಷ ತರಬೇತಿ ಮತ್ತು ಆರೈಕೆ ಅಗತ್ಯವಿದೆ. ಕಾಡಿನಿಂದ ಬಂದ ನಂತರ ನಾಡಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಆನೆಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಿಸುವುದು, ವಿಶೇಷ ಪೌಷ್ಟಿಕ ಆಹಾರ ನೀಡುವುದು, ಹಾಗೂ ಮೆರವಣಿಗೆಗೆ ಬೇಕಾದ ಎಲ್ಲಾ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ. ಅಕ್ಟೋಬರ್ 11ರಂದು ದಸರಾ ಮಹೋತ್ಸವ ಆರಂಭವಾಗಿ, ಅಕ್ಟೋಬರ್ 21ರಂದು ಜಂಬೂಸವಾರಿ ಮೆರವಣಿಗೆ ಇರುವುದರಿಂದ, ಆಗಸ್ಟ್ 26ರಿಂದಲೇ ಈ ಸಿದ್ಧತೆಗಳು ಆರಂಭವಾಗುತ್ತಿರುವುದು ದಸರೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಗಜಪಡೆಗಳ ಆಗಮನದೊಂದಿಗೆ ಮೈಸೂರಿನಲ್ಲಿ ದಸರಾ ಕಲರವ ಅಧಿಕೃತವಾಗಿ ಚಾಲನೆಗೊಳ್ಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Fri, 21 August 26

Loading...
Unable to load recommendations.
Follow Us