ಮೈಸೂರು: ದಸರಾ ಆರಂಭವಾದ ಮರುದಿನವೇ ಚಾಮುಂಡಿಬೆಟ್ಟದ ಅರ್ಚಕ ರಾಜು ನಿಧನ

Chamundeshwari Temple Priest passes away: ಮೈಸೂರು ದಸರಾಗೆ ಸೋಮವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿತ್ತು. ಇದಾದ ಬೆನ್ನಲ್ಲೇ ಚಾಮುಂಡೇಶ್ವರಿ ದೇಗುಲದ ಅರ್ಚಕ ರಾಜು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೀಗಾಗಿ ಸದ್ಯ ಚಾಮುಂಡೇಶ್ವರಿ ದೇಗುಲದ ಗರ್ಭಗುಡಿ ಬಂದ್ ಮಾಡಲಾಗಿದ್ದು, ಉತ್ಸವ ಮೂರ್ತಿ ದರ್ಶನಕ್ಕಷ್ಟೇ ಅವಕಾಶ ನೀಡಲಾಗುತ್ತಿದೆ.

ಮೈಸೂರು: ದಸರಾ ಆರಂಭವಾದ ಮರುದಿನವೇ ಚಾಮುಂಡಿಬೆಟ್ಟದ ಅರ್ಚಕ ರಾಜು ನಿಧನ
ಚಾಮುಂಡಿಬೆಟ್ಟದ ಅರ್ಚಕ ರಾಜು ನಿಧನ
Edited By:

Updated on: Sep 23, 2025 | 2:33 PM

ಮೈಸೂರು, ಸೆಪ್ಟೆಂಬರ್ 23: ಮೈಸೂರಿನ (Mysuru) ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ (Chamundeshwari Temple) ಅರ್ಚಕ ರಾಜು ಹೃದಯಾಘಾತದಿಂದ ನಿಧನರಾದರು. ಅರ್ಚಕ ರಾಜು ನಿಧನದ ಕಾರಣ ಸದ್ಯ ಚಾಮುಂಡೇಶ್ವರಿ ದೇಗುಲದ ಗರ್ಭಗುಡಿಗೆ ತೆರೆ ಎಳೆಯಲಾಗಿದೆ. ರಾತ್ರಿ ವರೆಗೂ ಉತ್ಸವಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು ರಾತ್ರಿವರೆಗೂ ಮೂಲ ವಿಗ್ರಹದ ದರ್ಶನ ಇರುವುದಿಲ್ಲ. ವಿಶ್ವವಿಖ್ಯಾತ ಮೈಸೂರು ದಸರಾಗೆ (Mysuru Dasara)ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಗಿತ್ತು. ಅದಾರ ಮರುದಿನವೇ ಅರ್ಚಕರ ನಿಧನವಾಗಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗಿದೆ.

ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ

ದಸರಾ ಆರಂಭವಾದ ಮರುದಿನವೇ ಈ ಘಟನೆ ಸಂಭವಿಸಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. ಆದಾಗ್ಯೂ, ದಸರಾ ಉತ್ಸವಕ್ಕೆ ಇದರಿಂದ ಯಾವುದೇ ಅಡಚಣೆ ಆಗುವುದಿಲ್ಲ. ಕೆಲವು ವಿಧಿವಿಧಾನಗಳ ನಂತರ ಗರ್ಭಗುಡಿ ಬಾಗಿಲು ತೆರೆಯಲಿದೆ. ನವರಾತ್ರಿ ಪೂಜೆಗಳು ಮಾಮೂಲಿಯಂತೆಯೇ ನಡೆಯಲಿವೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ದಸರಾಗೆ ಚಾಲನೆ ದೊರೆತ ಮರುದಿನವೇ ಚಾಮುಂಡೇಶ್ವರಿ ದೇಗುಲದ ಅರ್ಚಕರು ನಿಧನರಾಗಿರುವ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ವಿವಿಧ ರೀತಿಯ ಚರ್ಚೆ ಆರಂಭವಾಗಿದೆ.

ಮೃತರು ಕಳೆದ ಕೆಲವು ವರ್ಷಗಳಿಂದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶಿವನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜು ಅವರ ಅಂತ್ಯಸಂಸ್ಕಾರದ ಬಳಿಕ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಚಾಮುಂಡೇಶ್ವರಿ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ದಸರಾ ದೀಪಾಲಂಕಾರಕ್ಕೆ ಚಾಲನೆ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ

ನವರಾತ್ರಿ, ದಸರಾ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದೀಗ ಅರ್ಚಕರ ನಿಧನದಿಂದ ಗರ್ಭಗುಡಿ ಬಂದ್ ಮಾಡಿದ್ದು, ಭಕ್ತರಿಗೆ ತೊಂದರೆ ಉಂಟು ಮಾಡಿದೆ. ಹೀಗಾಗಿ ಉತ್ಸವ ಮೂರ್ತಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:01 pm, Tue, 23 September 25