ಮೈಸೂರು: ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ, ಓರ್ವ ಮಹಿಳೆ ಸೇರಿ ಮೂವರು ವಶಕ್ಕೆ
ಮೈಸೂರಿನ ಹುನಗನಹಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಕೇಂದ್ರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಯಲು ಮಾಡಿದ್ದಾರೆ. ಓರ್ವ ಮಹಿಳೆ ಸೇರಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು, ಅಕ್ಟೋಬರ್ 23: ಭ್ರೂಣ ಪತ್ತೆ ಹಾಗೂ ಹತ್ಯೆ (Fetus Killing) ಎರಡು ಕಾನೂನುಬಾಹಿರ. ಆದರೂ ಕೆಲವರು ಹಣದ ಆಸೆಗೆ ಇಂತಹ ಹೇಯ ಕೃತ್ಯವೆಸಗುತ್ತಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (mysuru) ಕೆಲಸ ಮಾಡುತ್ತಿದ್ದ ಅಂತಹದೇ ಒಂದು ಗ್ಯಾಂಗ್ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಶಂಕೆ ಕೂಡ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ತಾಲ್ಲೂಕು ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು. ಈ ಐಶಾರಾಮಿ ಬಂಗಲೆಗೆ ಗರ್ಭಿಣಿ ಮಹಿಳೆಯರನ್ನು ಕರೆದುಕೊಂಡು ಬಂದು ಅವರ ಒಡಲಿನಲ್ಲಿರುವ ಭ್ರೂಣದ ಲಿಂಗ ಪತ್ತೆ ಕೆಲಸ ಮಾಡಲಾಗುತಿತ್ತು. ಅದು ಹೆಣ್ಣಾ ಅಥವಾ ಗಂಡಾ ಅಂತಾ ಪತ್ತೆ ಮಾಡಲಾಗುತ್ತಿತ್ತು. ಇದಕ್ಕಾಗಿ ಅವರ ಬಳಿ ಸಾವಿರಾರು ರೂ. ಹಣ ಪೀಕಲಾಗುತಿತ್ತು. ಆ ಮನೆಯಲ್ಲಿ ಹಣಕಾಸಿನ ಡೈರಿ ಪತ್ತೆಯಾಗಿದ್ದು ಅದರಲ್ಲಿದ್ದ ಮಾಹಿತಿ ಎಂತವರನ್ನು ಬೆಚ್ಚಿ ಬೀಳಿಸುತ್ತದೆ.
ಇದನ್ನೂ ಓದಿ: ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕೇಸ್ ಬೇಧಿಸಿದ ಖಾಕಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆಯ ಕಿಂಗ್‌ಪಿನ್ ಬಂಧನ
ಲಕ್ಷಾಂತರ ರೂ. ವಹಿವಾಟನ್ನು ಡೈರಿಯಲ್ಲಿ ಬರೆದಿಡಲಾಗಿತ್ತು. ಮಾಹಿತಿಗಳ ಪ್ರಕಾರ ಭ್ರೂಣದ ಲಿಂಗ ಪತ್ತೆಗಾಗಿ 25 ಸಾವಿರ ರೂ. ಭ್ರೂಣ ಪತ್ತೆ ಹಚ್ಚಿ ಒಂದು ವೇಳೆ ಅದು ಹೆಣ್ಣು ಭ್ರೂಣವಾದರೆ ಅದರ ಹತ್ಯೆಗೆ 30 ಸಾವಿರ ರೂ ಹಣ ನಿಗದಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಕೊಠಡಿಯಲ್ಲಿ ಇದ್ದ ಕಬ್ಬಿಣದ ಲಾಕರ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ನಗದು ಪತ್ತೆ ಆಗಿದೆ. ಸ್ಥಳದಲ್ಲಿ ಭ್ರೂಣ ಹತ್ಯೆಗೆ ಬೇಕಾದ ಕಿಟ್‌ಗಳು, ಔಷಧಿಗಳು ಪತ್ತೆಯಾಗಿದ್ದು, ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ.
ಮೂವರು ಆರೋಪಿಗಳು ವಶಕ್ಕೆ
ಈ ಬಗ್ಗೆ ಮಾಹಿತಿ ತಿಳಿದ ರಾಜ್ಯ ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ, ಮಂಡ್ಯ ಡಿಹೆಚ್ಓ ಮೋಹನ್ ಹಾಗೂ ಮೈಸೂರು ಡಿಹೆಚ್ಓ ಕುಮಾರಸ್ವಾಮಿ, ಮಂಡ್ಯ ಕುಟಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಆರೋಪಿಗಳ ಕೃತ್ಯ ಬಯಲಿಗೆಳೆಯಲು ಗರ್ಭಿಣಿ ಮಹಿಳೆ ಸಹಕಾರವನ್ನು ಪಡೆಯಲಾಗಿದೆ. ವರುಣ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಸೇರಿ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಇನ್ನು ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಇಬ್ಬರು ಗರ್ಭಿಣಿಯವರು ಕಂಡುಬಂದಿದ್ದು, ಅವರು ಕೂಡ ಭ್ರೂಣ ಲಿಂಗ ಪತ್ತೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಅದರಲ್ಲಿ ಓರ್ವ ಮಹಿಳೆಗೆ ಅದಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಬಾರಿ ಯಾವ ಮಗು ಎಂದು ತಿಳಿದುಕೊಳ್ಳಲು ಬಂದಿದ್ದರು ಎನ್ನಲಾಗಿದೆ.
ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆಗಾಗಿ ಬಳಸುತ್ತಿದ್ದ ವೈದ್ಯಕೀಯ ಪರಿಕರ, ಔಷಧಿಗಳನ್ನು ಮನೆಯ ಮುಂದೆಯೇ ವಿಲೇವಾರಿ ಮಾಡಲಾಗಿದೆ. ಕೆಲ ವಸ್ತುಗಳನ್ನ ಅಲ್ಲೇ ಸುಟ್ಟು ಹಾಕಲಾಗಿತ್ತು. ಸಾಮಾನ್ಯವಾಗಿ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಇಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸುಟ್ಟು ಹಾಕಲಾಗಿದೆ. ಅರೆಬರೆ ಸುಟ್ಟ ಸ್ಥಿತಿಯಲ್ಲಿ ಎಲ್ಲವೂ ಪತ್ತೆ ಆಗಿದೆ.
ಇದನ್ನೂ ಓದಿ: ಪಾಂಡವಪುರದಲ್ಲಿ ಭ್ರೂಣ ಹತ್ಯೆ ಕೇಸ್ಗೆ ಆಘಾತಕಾರಿ ಟ್ವಿಸ್ಟ್: ಮಂಡ್ಯ ಆಲೆಮನೆ ಆರೋಪಿ ಹಳೆ ಚಾಳಿ ಬಿಟ್ಟಿಲ್ಲ!
ಸದ್ಯ ವರುಣ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿ ಮಹಿಳೆ ನರ್ಸ್ ಎಂಬ ವಿಚಾರ ತಿಳಿದುಬಂದಿದೆ. ಒಟ್ಟಿನಲ್ಲಿ ಹಣಕ್ಕಾಗಿ ಆರೋಪಿಗಳು ಇಂತಹ ಪಾಪದ ಕೃತ್ಯಕ್ಕೆ ಕೈ ಹಾಕಿರುವುದು ಮಾತ್ರ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:58 am, Thu, 23 October 25



