ಇನ್ನು ಮುಂದೆ ಮೈಸೂರಿನ ಈ 31 ಕೇಂದ್ರಗಳಲ್ಲಿ ಸಿಗಲಿದೆ ಹಾವು ಕಡಿತಕ್ಕೆ ಚಿಕಿತ್ಸೆ

|

Updated on: Mar 05, 2024 | 8:25 AM

ಹಾವು ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತ್ತೀಚೆಗಷ್ಟೇ ಘೋಷಿತ ಕಾಯಿಲೆಗಳ ಪಟ್ಟಿಗೆ ಸೇರ್ಪಡೆಗೊಳಿಸಿತ್ತು. ಇದೀಗ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದೆ.

ಇನ್ನು ಮುಂದೆ ಮೈಸೂರಿನ ಈ 31 ಕೇಂದ್ರಗಳಲ್ಲಿ ಸಿಗಲಿದೆ ಹಾವು ಕಡಿತಕ್ಕೆ ಚಿಕಿತ್ಸೆ
ಸಾಂದರ್ಭಿಕ ಚಿತ್ರ
Follow us on

ಮೈಸೂರು, ಮಾರ್ಚ್​ 5: ಹಾವು ಕಡಿತದ ಸಂದರ್ಭದಲ್ಲಿ (Snake Bite Cases) ತ್ವರಿತ ಚಿಕಿತ್ಸೆ ದೊರೆಯುವಂತೆ ಮಾಡಲು, ವಿಷ ನಿವಾರಣಾ ಚುಚ್ಚುಮದ್ದನ್ನು (Anti-Vnom Injections) ಬೇಗನೆ ಲಭ್ಯವಾಗುವಂತೆ ಮಾಡುವುದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕರ್ನಾಟಕದಾದ್ಯಂತ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳ (CHC) ಜೊತೆಗೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳು ಎಂದು ಗೊತ್ತುಪಡಿಸಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಮಿಷನರೇಟ್‌ ಅಧಿಸೂಚನೆ ಹೊರಡಿಸಿದ್ದು, ಹಾವು ಕಡಿತ ಪ್ರಕರಣಗಳ ನಿರ್ವಹಣೆಗೆ ಮಾರ್ಗಸೂಚಿ ಪ್ರಕಟಿಸಿದೆ.

ಹಾವು ಕಡಿತವನ್ನು ಘೋಷಿತ ಕಾಯಿಲೆಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಇತ್ತೀಚೆಗಷ್ಟೇ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಹಾವು ಕಡಿತದ ಸಂದರ್ಭದಲ್ಲಿ ತಕ್ಷಣವೇ ನೆರವಾಗಲು ಮತ್ತು ಕಡಿತಕ್ಕೊಳಗಾದವರಿಗೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತಲುಪುವಂತೆ ಮಾಡಲು ಸಹಾಯ ಒದಗಿಸುವ ಕಾರ್ಯವನ್ನು ಆಶಾ ಕಾರ್ಯಕರ್ತರಿಗೆ ವಹಿಸಲಾಗಿದೆ. ಉಪ-ಕೇಂದ್ರಗಳಲ್ಲಿನ ಆರೋಗ್ಯ ಕಾರ್ಯಕರ್ತರು ಪ್ರಥಮ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ತಕ್ಷಣದ ಚಿಕಿತ್ಸೆಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ವೈದ್ಯಾಧಿಕಾರಿಗೆ ಸೂಚಿಸಲಿದ್ದಾರೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಕಣ್ಗಾವಲು ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ತಜ್ಞರು, ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನಡೆಸಲು ಸೂಚಿಸಲಾಗಿದೆ. ಇದಲ್ಲದೆ, ಇಂಟಿಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲಾಟ್‌ಫಾರ್ಮ್ (IHIP) ಪೋರ್ಟಲ್‌ನಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಂಬಂಧಿತ ಸಾವುನೋವುಗಳನ್ನು ನಿಯಮಿತವಾಗಿ ಅಪ್​ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ 31 ಆರೋಗ್ಯ ಕೇಂದ್ರಗಳು

ಹಾವು ಕಡಿತದ ಚಿಕಿತ್ಸೆಗಾಗಿ ವಿಷ ನಿವಾರಕ ಚುಚ್ಚುಮದ್ದನ್ನು ಈ ಹಿಂದೆ ಕೆಆರ್ ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಮಿಷನರೇಟ್ ಹೊರಡಿಸಿದ ಅಧಿಸೂಚನೆಯ ಹಿನ್ನೆಲೆಯಲ್ಲಿ, ಟಿ. ನರಸೀಪುರ, ನಂಜನಗೂಡು, ಎಚ್‌ಡಿ ಕೋಟೆ, ಹುಣಸೂರಿನಲ್ಲಿ 16 ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ), ಆರು ತಾಲ್ಲೂಕು ಜನರಲ್ ಆಸ್ಪತ್ರೆಗಳು ಸೇರಿದಂತೆ 31 ಆರೋಗ್ಯ ಕೇಂದ್ರಗಳು ಇವೆ. ಇದುಗಳನ್ನು ಹಾವು ಕಡಿತದ ಚಿಕಿತ್ಸೆ ನೀಡಲು ಗುರುತಿಸಲಾಗಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ಪಿಸಿ ಕುಮಾರಸ್ವಾಮಿ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಇದಲ್ಲದೆ, ಪಿರಿಯಾಪಟ್ಟಣ, ಕೆ.ಆರ್.ನಗರ, ಬನ್ನೂರು, ತಲಕಾಡು, ಜಯಪುರ, ಜಯನಗರ, ಸಾಲಿಗ್ರಾಮ, ಹುಲ್ಲಹಳ್ಳಿ, ತಗಡೂರು, ಸರಗೂರು ಮತ್ತು ಮುಗೂರಿನ ಒಂಬತ್ತು ಸಮುದಾಯ ಆರೋಗ್ಯ ಕೇಂದ್ರಗಳು ಈಗ ಹಾವು ಕಡಿತಕ್ಕೆ ಚಿಕಿತ್ಸೆ ನೀಡಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ ಸೇರ್ಪಡೆ: ಆರೋಗ್ಯ ಇಲಾಖೆ

ಗಂಭೀರ ಪ್ರಕರಣಗಳಲ್ಲಿ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ. 2024ರ ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಮೈಸೂರು ಜಿಲ್ಲೆಯಲ್ಲಿ 32 ಹಾವು ಕಡಿತ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ