AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಆರು ತಿಂಗಳ ಶಿಶು ಅಪಹರಣ ಪ್ರಕರಣ ಕ್ಷಣಮಾತ್ರದಲ್ಲಿ ಬೇಧಿಸಿದ ರೈಲ್ವೆ ಪೊಲೀಸ್

ಶಿಶುವೊಂದರ ಅಪಹರಣ ಪ್ರಕರಣವನ್ನು ಮೈಸೂರಿನಲ್ಲಿ ರೈಲ್ವೆ ಪೊಲೀಸ್ ಸಿಬ್ಬಂದಿ ಕ್ಷಣಮಾತ್ರದಲ್ಲಿ ಬೇಧಿಸಿದ್ದು, ಪೋಷಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಶಿಶುವನ್ನು ಅಪಹರಿಸಿದ ಹಾಸನ ಮೂಲದ ಮಹಿಳೆಯನ್ನು ರೈಲ್ವೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮಹಿಳೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ.

ಮೈಸೂರು: ಆರು ತಿಂಗಳ ಶಿಶು ಅಪಹರಣ ಪ್ರಕರಣ ಕ್ಷಣಮಾತ್ರದಲ್ಲಿ ಬೇಧಿಸಿದ ರೈಲ್ವೆ ಪೊಲೀಸ್
ಸಾಂದರ್ಭಿಕ ಚಿತ್ರ
Ganapathi Sharma
|

Updated on: Oct 24, 2025 | 11:41 AM

Share

ಮೈಸೂರು, ಅಕ್ಟೋಬರ್ 24: ಆರು ತಿಂಗಳ ಶಿಶುವೊಂದರ ಅಪಹರಣ ಯತ್ನವನ್ನು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬುಧವಾರ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ತಡೆದಿದ್ದಾರೆ. ಬೆಳಗ್ಗೆ 5.20ಕ್ಕೆ, ಮೈಸೂರು ರೈಲ್ವೆ ನಿಲ್ದಾಣದ ಪೋರ್ಟಿಕೊ ಪ್ರದೇಶದ ಬಳಿ ಮಹಿಳೆಯೊಬ್ಬರು ಅಳುತ್ತಿರುವುದನ್ನು ಕರ್ತವ್ಯದಲ್ಲಿದ್ದ ಆರ್​ಪಿಎಫ್ ಕಾನ್‌ಸ್ಟೆಬಲ್ ಸಿಎಂ ನಾಗರಾಜು ಗಮನಿಸಿದ್ದಾರೆ. ವಿಚಾರಿಸಿದಾಗ, ಕಾಣೆಯಾದ ತನ್ನ ಮಗುವನ್ನು ಹುಡುಕುತ್ತಾ ಮಹಿಳೆ ಅಳುತ್ತಿರುವುದು ಗೊತ್ತಾಗಿದೆ. ಕುಟುಂಬವು ನಿಲ್ದಾಣದ ಆವರಣದಲ್ಲಿ ನಿದ್ರಿಸುತ್ತಿರುವಾಗ, ತನ್ನ ಆರು ತಿಂಗಳ ಮಗ ನಾಪತ್ತೆಯಾಗಿದೆ ಎಂದು ಮಹಿಳೆ ಕಾನ್‌ಸ್ಟೆಬಲ್‌ಗೆ ತಿಳಿಸಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ನಾಗರಾಜು, ಸಹಾಯಕ ಸಬ್-ಇನ್ಸ್‌ಪೆಕ್ಟರ್ ಪ್ರಸಿ ಮತ್ತು ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ, ತಕ್ಷಣವೇ ಆರ್‌ಪಿಎಫ್ ತಂಡವು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬರು ಶಿಶುವನ್ನು ಎತ್ತಿಕೊಂಡು ಪ್ಲಾಟ್‌ಫಾರ್ಮ್ ಸಂಖ್ಯೆ 6 ರ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅಲ್ಲದೆ, ರೈಲು ಸಂಖ್ಯೆ 16206 ಅನ್ನು ಹತ್ತಲು ಪ್ರಯತ್ನಿಸುತ್ತಿರುವುದು ಕಾಣಿಸಿದೆ.

ಕೂಡಲೇ ಜಾಗೃತರಾದ ಆರ್‌ಪಿಎಫ್ ಸಿಬ್ಬಂದಿ ಪ್ಲಾಟ್‌ಫಾರ್ಮ್‌ಗೆ ಧಾವಿಸಿ, ಶಂಕಿತ ಮಹಿಳೆಯನ್ನು ತಡೆದು ಮಗುವನ್ನು ರಕ್ಷಿಸಿದ್ದಾರೆ. ನಂತರ ಮಹಿಳೆಯನ್ನು ವಿಚಾರಣೆಗಾಗಿ ಆರ್‌ಪಿಎಫ್ ಪೋಸ್ಟ್‌ಗೆ ಕರೆದೊಯ್ಯಲಾಗಿದೆ. ಪೋಷಕರಿಗೆ ತಕ್ಷಣವೇ ಮಾಹಿತಿ ನೀಡಿ, ಅವರ ಮಗುವನ್ನು ಮತ್ತೆ ಅವರ ಮಡಿಲು ಸೇರಿಸಲಾಯಿತು.

ಇದನ್ನೂ ಓದಿ: ಮದುವೆ ಆಗಬೇಕಂದ್ರೆ ಮತಾಂತರವಾಗು: ಬೆಂಗಳೂರಲ್ಲಿ ಆಂಧ್ರ ಮೂಲದ ಯುವತಿಗೆ ಲವ್​ ಸೆಕ್ಸ್​ ದೋಖಾ?

ಮಹಿಳೆಯು ಶಿಶುವನ್ನು ಅಪಹರಿಸಲು ಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿಯನ್ನು ಹಾಸನದ ಪೆನ್ಷನ್ ಮೊಹಲ್ಲಾದ ಮೋಚಿ ಕಾಲೋನಿಯ ನಿವಾಸಿ ನಂದಿನಿ (45) ಎಂದು ಗುರುತಿಸಲಾಗಿದೆ. ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಅವರು ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 137(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ