ಮೈಸೂರು ವಿವಿ 101ನೇ ಘಟಿಕೋತ್ಸವ; ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಹೆಗಡೆ 20 ಚಿನ್ನದ ಪದಕಗಳ ಸಾಧನೆ

ಘಟಿಕೋತ್ಸವದಲ್ಲಿ ಒಟ್ಟು 29,852 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗಿದೆ.

ಮೈಸೂರು ವಿವಿ 101ನೇ ಘಟಿಕೋತ್ಸವ; ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಹೆಗಡೆ 20 ಚಿನ್ನದ ಪದಕಗಳ ಸಾಧನೆ
ಸಾಧಕ ವಿದ್ಯಾರ್ಥಿಗಳು


ಮೈಸೂರು: ಕರ್ನಾಟಕದ ಹೆಮ್ಮೆಯಾಗಿರುವ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವವನ್ನು ಪೂರೈಸಿ 101ನೇ ಘಟಿಕೋತ್ಸವವನ್ನು ಇಂದು (ಸೆಪ್ಟೆಂಬರ್ 7) ಆಚರಿಸಿತು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಘಟಿಕೋತ್ಸವದಲ್ಲಿ ಪುರಸ್ಕರಿಸಲಾಯಿತು. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ನಾರಾಯಣ್ ಹೆಗಡೆ 20 ಚಿನ್ನದ ಪದಕ ಮತ್ತು ನಾಲ್ಕು ಬಹುಮಾನಗಳಿಗೆ ಭಾಜನರಾದರು. ಮೈಸೂರು ವಿವಿ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ ಟಿ.ಎಸ್. ಮಾದಲಾಂಬಿಕೆ 10 ಪದಕ, 4 ಪ್ರಶಸ್ತಿ ಗಳಿಸಿಕೊಂಡರು. ಎಂಎ ಸಂಸ್ಕೃತ ವಿಭಾಗದ ಸೀಮಾಗೆ 8 ಪದಕ, 2 ದತ್ತಿ ಪ್ರಶಸ್ತಿ, ಬಿಎ ಪದವಿಯ ಸಿಂಧೂ ನಾಗರಾಜ್​ 7 ಪದಕ, 7 ದತ್ತಿ ಪ್ರಶಸ್ತಿ, ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದ ಹಿಮಾಂಷಿ ಚೌಹಾಣ್‌ಗೆ 8 ಪದಕ, ಹಿಮಾಂಷಿ ಚೌಹಾಣ್‌ಗೆ 3 ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಘಟಿಕೋತ್ಸವದಲ್ಲಿ ರಾಜ್ಯಪಾಲ ಮತ್ತು ವಿಶ್ವವಿದ್ಯಾಲಯದ ಕುಲಪತಿ ಥಾವರಚಂದ ಗೆಹಲೋತ್ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. 

ಗಡಿ ಜಿಲ್ಲೆಯ ಅನ್ನದಾತನ ಮಗಳಿಗೆ 10 ಚಿನ್ನದ ಪದಕ
ಕನಿಷ್ಠ ಸೌಲಭ್ಯವೂ ಇಲ್ಲದ ಕುಗ್ರಾಮದವರಾದ ಗಡಿ ಜಿಲ್ಲೆ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮದ ರೈತನ ಮಗಳು ಸ್ನಾತಕೋತ್ತರ ಪದವಿಯ ಕನ್ನಡದ ವಿಷಯದಲ್ಲಿ 10 ಚಿನ್ನದ ಪದಕ, ನಾಲ್ಕು ನಗದು ಬಹುಮಾನ ಬಹುಮಾನ ಪಡೆದು ಶೈಕ್ಷಣಿಕ ವಲಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ರೈತರಾದ ಟಿ.ಎಂ. ಶಿವಮಲ್ಲಪ್ಪ ಮತ್ತು ನೀಲಾಂಬಿಕಾ ದಂಪತಿ ನಾಲ್ಕನೇ ಪುತ್ರಿಯಾದ ಟಿ.ಎಸ್.ಮಾದಲಾಂಬಿಕೆ ಮೈಸೂರು ಮೈಸೂರು ವಿಶ್ವವಿದ್ಯಾನಿಲಯದ 101 ನೇ ಘಟಿಕೋತ್ಸವದಲ್ಲಿ ಪ್ರಥಮ ರಾಂಕಿನೊಂದಿಗೆ ಕನ್ನಡ ಎಂಎ ಪದವಿ ಪಡೆದಿದ್ದಾರೆ. ಕೃಷಿಕರಾದ ಇವರ ತಂದೆ 8ನೇ ತರಗತಿ ಓದಿದ್ದರು. ಮಗಳು ಚೆನ್ನಾಗಿ ಓದಲಿ ಎಂದು ಉತ್ತಮ ವ್ಯಾಸಂಗ ಕೊಡಿಸಲು ತೀರ್ಮಾನಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದರು.

ಮಗಳ ಸಾಧನೆ ನೋಡಲು ಅಪ್ಪನೇ ಇಲ್ಲ
ಅಪ್ಪನ ನಿರೀಕ್ಷೆಯಂತೆ ಮಾದಲಾಂಬಿಕೆ ಬಿಎಯನ್ನು ಶೇ. 80 ಪರ್ಸೆಂಟೇಜ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ನಂತರ ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇಡಿಯನ್ನು ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದರು. ಎಂಎ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಶುಲ್ಕ ಪಾವತಿಸಿದ ದಿನವೇ ಅಪ್ಪ ಅಕಾಲಿಕವಾಗಿ ನಿಧನರಾದರು. ನಾಲ್ವರು ಹೆಣ್ಣು ಮಕ್ಕಳಲ್ಲಿ ಇವರೇ ಕೊನೆಯವರಾಗಿದ್ದರು, ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ತಾಯಿ, ಶಿಕ್ಷಕಿಯಾದ ಅಕ್ಕ ರಾಜೇಶ್ವರಿ ಉನ್ನತ ಶಿಕ್ಷಣ ಪಡೆಯಲು ನೆರವಾದರು. ಮನೆಯವರ ಸಹಕಾರ ಸಹಾಯದಿಂದ ಶ್ರದ್ದೆಯಿಂದ ವಿದ್ಯಾಭ್ಯಾಸ ಮುಂದುವರಿಸಿದ ಮಾದಲಾಂಬಿಕೆ ಇಂದು ಸಾಧನೆಯ ಶಿಖರವನ್ನೇರಿದ್ದಾರೆ.

10 ಮೆಡಲ್ ನಿರೀಕ್ಷಿಸಿರಲಿಲ್ಲ
10 ಚಿನ್ನದ ಪದಕಗಳು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಜತೆಗೆ ನಾಲ್ಕು ನಗದು ಬಹುಮಾನ ಬಂದಿರುವುದು ಅತ್ಯಂತ ಖುಷಿಯಾಗಿದೆ. ಮಾರ್ಗದರ್ಶನ ಮಾಡಿದ ನನ್ನೆಲ್ಲಾ ಅಧ್ಯಾಪಕರಿಗೆ ಇದು ಸಲ್ಲಬೇಕು. ಗುರುಗಳಾದ ಡಾ.ಕೃಷ್ಣಮೂರ್ತಿ ಹನೂರು ಅವರ ಪಾಠ ಕೇಳುವ ಅವಕಾಶ ದೊರೆತದ್ದು ಜೀವನವನ್ನು ಬದಲಾಯಿಸಿತು. ಎನ್‌ ಇಟಿ ಪರೀಕ್ಷೆ ಪಾಸು ಮಾಡಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುವ ಗುರಿ ಹೊಂದಿರುವೆ ಎಂದು ಸಾಧಕ ವಿದ್ಯಾರ್ಥಿನಿ ಮಾದಲಾಂಬಿಕೆ ಹರ್ಷ ವ್ಯಕ್ತಪಡಿಸಿದರು.

29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ಒಟ್ಟು 29,852 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗಿದೆ. ಅವರಲ್ಲಿ 20,118 (67.39%) ಮಹಿಳೆಯರು ಹಾಗೂ 9,734 (32.60%) ಪುರುಷರಿದ್ದರು. ವಿವಿಧ ವಿಷಯಗಳಲ್ಲಿ 244 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ಪಡೆದವರಲ್ಲಿ, 98 (40.16%) ಮಹಿಳೆಯರು ಮತ್ತು 146 (59.83%) ಪುರುಷರು ಇದ್ದರು. ಒಟ್ಟಾರೆ 387 ಪದಕಗಳು ಹಾಗೂ 216 ಅಭ್ಯರ್ಥಿಗಳಿಗೆ 178 ದತ್ತಿ ಬಹುಮಾನಗಳನ್ನು ಪ್ರದಾನ ಮಾಡಲಾಯಿತು. ಅವರಲ್ಲಿ 172 ಮಹಿಳೆಯರು ಹಾಗೂ 44 ಪುರುಷ ಅಭ್ಯರ್ಥಿಗಳಿದ್ದರು. ಇದೇ ವೇಳೆ 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 22,465 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ನೀಡಲಾಯಿತು. ಈ ಪೈಕಿ 20,020 ಮಹಿಳೆಯರು, 9,588 ಪುರುಷ ಅಭ್ಯರ್ಥಿಗಳಿದ್ದರು.

ಇದನ್ನೂ ಓದಿ:  

NEET UG Admit Card 2021: ನೀಟ್​ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್​ ಮಾಡಿಕೊಳ್ಳುವ ವಿಧಾನ ಹೀಗಿದೆ

End of Work From Home: ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆತರಲು ಕಂಪೆನಿಗಳಿಂದ ನಾನಾ ಸವಲತ್ತು, ಸೌಕರ್ಯ

(Mysuru University 101st Convention Chaitra Hegade a student of the Chemistry Division won 20 gold medals)

Read Full Article

Click on your DTH Provider to Add TV9 Kannada