ಕರ್ನಾಟಕದ ಅಭಿವೃದ್ಧಿ ನೋಡಿ, ಮಹದೇಶ್ವರನ ದರ್ಶನ ಮಾಡಿ: ರಾಹುಲ್ ಗಾಂಧಿಗೆ ಪ್ರತಾಪ್ ಸಿಂಹ ಸಲಹೆ

25 ವರ್ಷಗಳ ಆದ ನಂತರ ಭವಿಷ್ಯ ಸಿಗಬಹುದು ರಾಹುಲ್ ಗಾಂಧಿಯ ಬಗ್ಗೆ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

ಕರ್ನಾಟಕದ ಅಭಿವೃದ್ಧಿ ನೋಡಿ, ಮಹದೇಶ್ವರನ ದರ್ಶನ ಮಾಡಿ: ರಾಹುಲ್ ಗಾಂಧಿಗೆ ಪ್ರತಾಪ್ ಸಿಂಹ ಸಲಹೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಂಸದ ಪ್ರತಾಪ್ ಸಿಂಹ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 30, 2022 | 8:41 AM


ಮೈಸೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಆರಂಭಿಸಿರುವ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ಬಗ್ಗೆ ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ. ‘ಇದು ಭಾರತವನ್ನು ಜೋಡಿಸುವ ಯಾತ್ರೆ ಅಲ್ಲ, ಭಾರತವನ್ನು ಒಡೆಯುವ ಯಾತ್ರೆ’ ಎಂದು ಆಕ್ಷೇಪಿಸಿರುವ ಅವರು, ಕ್ರೈಸ್ತ ಮತ ಪ್ರಚಾರಕ ಪ್ಯಾಸ್ಟರ್ (ಗುರು) ಭೇಟಿಯೊಂದಿಗೆ ಯಾತ್ರೆ ಆರಂಭಿಸಿದ್ದಾರೆ. ಜೀಸಸ್ ಒಬ್ಬನೇ ದೇವರು ಎಂಬ ನಿಮ್ಮ ಉದ್ದೇಶ ಗೊತ್ತಾಗಿದೆ ಎಂದು ಆಕ್ಷೇಪಿಸಿದ್ದಾರೆ. ಕರ್ನಾಟಕಕ್ಕೆ ಬಂದಾಗ ಮಲೈ ಮಹದೇಶ್ವರ ದೇಗುಲಕ್ಕೆ ಹೋಗಿ ಬನ್ನಿ. ಚಾಮರಾಜನಗರ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ನೋಡಿ. ರಿಂಗ್ ರಸ್ತೆ ಹಾಗೂ ಮೈಸೂರು ವಿಮಾನ ನಿಲ್ದಾಣ ನೋಡಿ ಎಂದು ಕಾಂಗ್ರೆಸ್​ ನಾಯಕರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಲಹೆ ಮಾಡಿದ್ದಾರೆ.

ಕೆರೆಗಳಿಗೆ ನೀರು ತುಂಬಿದ್ದರೆ ಅಲ್ಲಿಗೆ ಹೋಗಿ ಬನ್ನಿ. ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅಲ್ಲಿ ಆಗಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ. ಐದು ವರ್ಷದ ನಂತರ ಮತ್ತೊಮ್ಮೆ ಯಾತ್ರೆ ಮಾಡಿ. ಬಸ್‌ನಲ್ಲಿ ಬರುವುದು ಬೇಡ ಜೆಟ್‌ನಲ್ಲಿ ಬನ್ನಿ. ಮೈಸೂರಿಗೆ ಬಂದಾಗ ಪ್ಯಾಸ್ಟರ್ ಬದಿಗಿಟ್ಟು ಚಾಮುಂಡಿಗೆ ನಮಸ್ಕರಿಸಿ. ದಸರಾದಲ್ಲಿ ಪಾಲ್ಗೊಳ್ಳಿ. ಮೋದಿ ನಿರ್ಮಿಸಿರುವ ಮೈಸೂರು-ಬೆಂಗಳೂರು ಹೈವೇ ರಸ್ತೆ ನೋಡಿ ಎಂದು ವ್ಯಂಗ್ಯವಾಡಿದ್ದಾರೆ.

ಭಾರತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆಧಾರ್, ಪ್ಯಾನ್ ಕಾರ್ಡ್, ಸ್ಮಾರ್ಟ್​ಫೋನ್ ಬಳಕೆ ಗೊತ್ತಿಲ್ಲದ ಸಿದ್ದರಾಮಯ್ಯ ತಮ್ಮನ್ನು ತಾವು ಒಬ್ಬ ಅರ್ಥಶಾಸ್ತ್ರಜ್ಞರೆಂದು ಬಿಂಬಿಸಿಕೊಳ್ಳುತ್ತಾರೆ. 40 ವರ್ಷಗಳ ರಾಜಕಾರಣದಲ್ಲಿ ಇಂದಿರಾಗಾಂಧಿ, ನೆಹರು ಅವರನ್ನು ಟೀಕೆ ಮಾಡಿದ್ದರು. ಈಗ ಅದೇ ಕುಟುಂಬದ ಕುಡಿಯನ್ನು ರಾಜಕುಮಾರ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಅವರ ಮೇಲೆಯೇ ಧೃಡ ನಂಬಿಕೆ ಇಲ್ಲ. ಸ್ವಂತ ಅಭಿಪ್ರಾಯ ಇಲ್ಲ. ತಾತ್ಸಾರ, ತುಚ್ಛ ಮಾತು ಎಂದರೆ ಸಿದ್ದರಾಮಯ್ಯ ನೆನಪಾಗುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದಿನ 25 ವರ್ಷಗಳವರೆಗೆ ನಿಮಗೆ ಭವಿಷ್ಯ ಇಲ್ಲ. 25 ವರ್ಷಗಳ ಆದ ನಂತರ ಭವಿಷ್ಯ ಸಿಗಬಹುದು ಎಂದು ವ್ಯಂಗ್ಯವಾಡಿದರು.

ಚಾಮರಾಜ ನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರನ್ನು ರಾಹುಲ್ ಗಾಂಧಿ ಭೇಟಿ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು ಇದೊಂದು ಆತ್ಮದ್ರೋಹದ ಕೆಲಸ. ಭೂಪಾಲ್ ಗ್ಯಾಸ್ ದುರಂತಕ್ಕೆ ಕಾರಣವಾದ ಆರೋಪಿಯನ್ನು ವಿಮಾನ ಹತ್ತಿಸಿದವರು ಕಾಂಗ್ರೆಸ್ ನಾಯಕರು. ಈಗ ತೋರಿಕೆಗೆ ಎಂಬಂತೆ ಆಕ್ಸಿಜನ್ ದುರಂತರದಲ್ಲಿ ಮೃತಪಟ್ಟವರ ಕುಟುಂಬವನ್ನು ಭೇಟಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ವೈಯಕ್ತಿಕ ನಿಂದನೆ ಹೆಚ್ಚಾಗುತ್ತಿದೆ. ಈ ಹಿಂದೆ ಕೆಟ್ಟ ರಾಜಕಾರಣಕ್ಕೆ ಬಿಹಾರ ಮತ್ತು ಉತ್ತರ ಪ್ರದೇಶವು ಉದಾಹರಣೆಯಾಗಿತ್ತು. ಈಗ ಕೆಟ್ಟ ರಾಜಕಾರಣದ ಬಗ್ಗೆ ರಾಜ್ಯದ ಹೆಸರು ಹೇಳುವ ಸ್ಥಿತಿ ಬಂದಿದೆ. ಅಭಿವೃದ್ಧಿ ವಿಚಾರದಲ್ಲಿ ಟೀಕೆ ಮಾಡಿ, ವೈಯಕ್ತಿಕ ಟೀಕೆ ಬೇಡ ಎಂದು ಅವರು ವಿನಂತಿಸಿದರು.

ಇದನ್ನೂ ಓದಿ: Bharat Jodo Yatra: ಕರ್ನಾಟಕದಲ್ಲಿ ಇಂದಿನಿಂದ ಭಾರತ ಐಕ್ಯತಾ ಯಾತ್ರೆ, ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ರಾಹುಲ್ ಪ್ರವೇಶ

ಇದನ್ನೂ ಓದಿ: Bharat Jodo Yatra: ಭಾರತ ಜೋಡಿಸುತ್ತಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಜೋಡಿಸುವುದು ಯಾವಾಗ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada