Bharat Jodo Yatra: ಭಾರತ ಜೋಡಿಸುತ್ತಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಜೋಡಿಸುವುದು ಯಾವಾಗ

Political Analysis: ಭಾರತ್ ಜೋಡೋ ಪ್ರಭೆ ಪ್ರಕಾಶಮಾನವಾಗಿ ಹೊಳೆಯುವುದಕ್ಕೂ ಬಿಡದೇ ಕಣ್ಣು ಕೋರೈಸುತ್ತಿರುವುದು ‘ಕಾಂಗ್ರೆಸ್ ಛೋಡೋ’ (ಕಾಂಗ್ರೆಸ್ ಬಿಡು) ಬೆಳವಣಿಗೆಗಳು.

Bharat Jodo Yatra: ಭಾರತ ಜೋಡಿಸುತ್ತಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಜೋಡಿಸುವುದು ಯಾವಾಗ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 30, 2022 | 6:51 AM

ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ (Rahul Gandhi) ಕಾಯಾ, ವಾಚಾ, ಮನಸಾ ‘ಭಾರತ್ ಜೋಡೋ ಯಾತ್ರಾ’ದಲ್ಲಿ (Bharat Jodo Yatra) ತೊಡಗಿಸಿಕೊಂಡಿದ್ದಾರೆ. ಆದರೆ ಭಾರತ್ ಜೋಡೋ ಪ್ರಭೆ ಪ್ರಕಾಶಮಾನವಾಗಿ ಹೊಳೆಯುವುದಕ್ಕೂ ಬಿಡದೇ ಕಣ್ಣು ಕೋರೈಸುತ್ತಿರುವುದು ‘ಕಾಂಗ್ರೆಸ್ ಛೋಡೋ’ (ಕಾಂಗ್ರೆಸ್ ಬಿಡು) ಬೆಳವಣಿಗೆಗಳು.‌ ರಾಹುಲ್ ಗಾಂಧಿ ಉದ್ದೇಶ ಒಂದು ಕಡೆ ಕಾಂಗ್ರೆಸ್ ಜೋಡಿಸುತ್ತಿದ್ದರೆ ಮತ್ತೊಂದು ಕಡೆ ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್​ನ ಕನ್ನಡಿ ಒಡೆಯುತ್ತಿದೆ. ಒಡೆದ ಕನ್ನಡಿಯ ಚೂರುಗಳನ್ನು ಜೋಡಿಸುವವರು ಯಾರು? ಕೇವಲ ಬೇರೆ ರಾಜ್ಯಗಳು ಮಾತ್ರವಲ್ಲ ಕರ್ನಾಟಕದ ಕಾಂಗ್ರೆಸ್ ಕನ್ನಡಿಯೂ ಒಡೆದು ಬೀಳದಂತೆ ಜಾಗರೂಕವಾಗಿ ನೋಡಿಕೊಳ್ಳಲೇಬೇಕಾದ ಒತ್ತಡ ಸೃಷ್ಟಿ ಆಗಿದೆ.

ವರದಿ: ಪ್ರಸನ್ನ ಗಾಂವ್ಕರ್

ಭಾರತ್ ಜೋಡೋ ಸಂತಸ ಶುರುವಾದ ಘಳಿಗೆಯಲ್ಲೇ ಕಾಂಗ್ರೆಸ್ ಛೋಡೋ ಸಂಕಟಕ್ಕೂ ನಾಂದಿ ಹಾಡಿದ್ದು ಇದೇ ಗಾಂಧಿ ಕುಟುಂಬಕ್ಕೆ ಹತ್ತಿರದಲ್ಲಿದ್ದವರೇ. 49 ವರ್ಷಗಳ ಕಾಲ ಕಾಂಗ್ರೆಸ್ ಪಡಸಾಲೆಯಿಂದ ಹಿಡಿದು ಗಾಂಧಿ ಕುಟುಂಬದ ಅಂತರಂಗವನ್ನೂ ಅರಿತಿದ್ದ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಛೋಡೋ ಅಂದುಬಿಟ್ಟರು. ಅಲ್ಲಿಂದ ಶುರುವಾದ ಸರಣಿ ಅಪಘಾತ ಗೋವಾದಲ್ಲಿ ನಡೆದು ರಾಜಸ್ಥಾನದಲ್ಲಿ ಗಾಯ ಮಾಡಿ ಇದೀಗ ಛತ್ತೀಸಗಢದಲ್ಲೂ ಮರ್ಮಾಘಾತ ನೀಡುವ ಹಂತಕ್ಕೆ ಬಂದುಮುಟ್ಟಿದೆ. ಕಾಂಗ್ರೆಸ್ ಛೋಡೋ ಅಪಘಾತ ಕರ್ನಾಟಕದಲ್ಲೂ ಆಗದಿರಲಪ್ಪ ಅಂತ ಅದೆಷ್ಟು ಮಂದಿ ಬೇಡಿಕೊಳ್ಳುತ್ತಿದ್ದಾರೋ.

ಗೋವಾದಲ್ಲಿ ಅಕ್ಷರಶಃ ಕಾಂಗ್ರೆಸ್ ಸರ್ಕಾರ ರಚನೆಯೇ ಆಗಿಬಿಟ್ಟಿತು ಅನ್ನುವ ಹಂತ ಮುಟ್ಟಿತ್ತು. ಆದರೆ ಗೋವಾದ ಅಧಿಕಾರ ಪೀಠ ಏರಿದ್ದು ಮಾತ್ರ ಬಿಜೆಪಿ. ಬಿಜೆಪಿ ಅದಷ್ಟೇ ಶಾಕ್ ಕೊಡಲಿಲ್ಲ; ಕಾಂಗ್ರೆಸ್​ನ ಕೋಟೆಯನ್ನು ಛಿದ್ರಛಿದ್ರ ಮಾಡಿತು. ಅದರ ಹೊಡೆತ ಮೊರೆತ ಕೇಳಿಸಿಕೊಳ್ಳಲು ರಾಹುಲ್ ದೆಹಲಿಯಲ್ಲಿ ಇರಲಿಲ್ಲ. ಭಾರತ್ ಜೋಡೋದಲ್ಲಿ ತಲ್ಲೀನರಾಗಿದ್ದರು. 11 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 8 ಮಂದಿ ಪಕ್ಷದ ಸಮೇತ ಬಿಜೆಪಿ ಸೇರ್ಪಡೆ ಆಗಿಬಿಟ್ಟಿದ್ದರು. ಅಲ್ಲಿಯೂ ರಾಹುಲ್ ನಡೆಯನ್ನು ವಿರೋಧಿಸಿ ಹೊರ ನಡೆದವರೇ ಜಾಸ್ತಿ.‌ ಸ್ಥಳೀಯ ಗೋವಾ ಕಾಂಗ್ರೆಸ್​ನಲ್ಲಿ ಹೊತ್ತಿಕೊಂಡ ಬಣ ರಾಜಕೀಯದ ಬೆಂಕಿಯೇ ಗೋವಾದ ಸಮುದ್ರದ ಶಾಖಕ್ಕೆ ಮತ್ತಷ್ಟು ಧಗಧಗಿಸಿತ್ತು.‌

ಇನ್ನೂ ಗೋವಾ ಎಪಿಸೋಡ್ ಮುಗಿದಿರಲಿಲ್ಲ, ಅಷ್ಟರೊಳಗೆ ರಾಜಸ್ಥಾನದಲ್ಲಿ ಸಿಎಂ ಗೆಹ್ಲೋಟ್ ನೇತೃತ್ವದಲ್ಲಿ ಶಾಸಕರು ರಾಜೀನಾಮೆ ಕೊಡುವ ಹಂತಕ್ಕೆ ಹೋಗಿಬಿಟ್ಟರು. ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ಹಳೆಬೇರು ಹೊಸಚಿಗುರಿನ ಕಿತ್ತಾಟ ಇಡೀ ರಾಜಸ್ಥಾನ ಕಾಂಗ್ರೆಸ್ ಮರವನ್ನೇ ಅಲುಗಾಡಿಸಿತು. ಗೋವಾದಲ್ಲಿ ನಡೆದ ಬಣ ರಾಜಕೀಯ ರಾಜಸ್ಥಾನದಲ್ಲಿ ನಡೆಯುತ್ತಿರುವ ಬಣ ಸಮರ ಎರಡಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ. ಬಿಜೆಪಿ ತನ್ನ ಸಿಎಂಗಳನ್ನು ಬದಲಾವಣೆ ಮಾಡುವುದನ್ನೇ ಟೀಕೆ ಮಾಡುವ ಕಾಂಗ್ರೆಸ್​ಗೆ ಇದೀಗ ರಾಜಸ್ಥಾನದಲ್ಲಿ ಸಿಎಂ ಬದಲಾವಣೆ ಮಾಡಬೇಕು ಅಂತ ಅನಿಸಿದ್ದರ ಹಿಂದಿನ ಮರ್ಮವೇನೋ?

ರಾಜಸ್ಥಾನದಲ್ಲಿ ಬಿಡಿ ಗೆಹ್ಲೋಟ್​ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಇದೆಯಲ್ಲ ಅಂತ ಅನಿಸಬಹುದು. ರಾಜಸ್ಥಾನವನ್ನೇ ಸಮಸ್ಯೆಯ ಸರಮಾಲೆಗೆ ದೂಡಿದ ಗೆಹ್ಲೋಟ್ ಎಐಸಿಸಿ ಅಧ್ಯಕ್ಷರಾದರೆ ಏನು ಗತಿ ಅಂತ ಹಲವರು ಈಗಾಗಲೇ ಅಡ್ಡಿಪಡಿಸಿದ್ದಾರೆ. ಮುಂದಿನ ಡಿಸೆಂಬರ್ ವೇಳೆಗೆ ರಾಜಸ್ಥಾನ ಚುನಾವಣೆ ಇರುವಾಗ ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ಯುದ್ದ ಯಾಕೋ ಸರಿ ಬರುತ್ತಿಲ್ಲ.

ಛತ್ತಿಸಗಢದ ಕಥೆ ಬೇರೆಯದೇ ಇದೆ. ಛತ್ತೀಸಗಢದಲ್ಲಿ ಕಾಂಗ್ರೆಸ್ ಸಿಎಂ ಕುರ್ಚಿಯ ಕಿತ್ತಾಟ ಕಳೆದ ವರ್ಷವೇ ಭುಗಿಲೆದ್ದಿತ್ತು. ಸಿಎಂ ಭೂಪೇಶ್ ಭಗೇಲ್ ಹಾಗೂ ಟಿ.ಎಸ್.ಸಿಂಗ್ ಡಿಯೋ ಅವರ ನಡುವಿನ ಕುರ್ಚಿ ಕದನ ದೆಹಲಿಗೂ ಪದೇಪದೇ ತಲೆಬಿಸಿ ಉಂಟು ಮಾಡುತ್ತಿದೆ. ಛತ್ತೀಸಗಡದಲ್ಲಿಯೂ ರಾಹುಲ್ ಗಾಂಧಿಯೇ ಸಮಸ್ಯೆಗೆ ಕಾರಣರಾದ ಅನುಮಾನವೂ ಹಲವರಲ್ಲಿ ಮೂಡಿದೆ. 2018ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಭೂಪೇಶ್ ಭಗೇಲ್ ಹಾಗೂ ಟಿ.ಎಸ್.ಸಿಂಗ್ ಡಿಯೋ ಅವರಿಗೆ ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಭರವಸೆಯನ್ನು ರಾಹುಲ್ ಗಾಂಧಿ ನೀಡಿದ್ದರು.

ಆದರೆ ಈಗ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಮುಗಿಯುತ್ತಿದೆ. ಆದರೂ ಸಿಎಂ ಬದಲಾವಣೆ ಆಗಿಲ್ಲ. ಹೀಗಾಗಿ ಭೂಪೇಶ್ ಭಗೇಲ್ ವಿರುದ್ದ ಡಿಯೋ ಕತ್ತಿ ಮಸೆಯುತ್ತಿದ್ದಾರೆ. ರಾಜಸ್ಥಾನ ಘಟನೆ ಬಳಿಕ ಛತ್ತೀಸಗಡದಲ್ಲಿ ನ್ಯಾಯ ಸಿಗಬೇಕು ಅಂತ ಡಿಯೋ ವಾದ ಮಂಡಿಸುತ್ತಿದ್ದಾರೆ.

ಈ ಎಲ್ಲ ರಾಜ್ಯಗಳ ಕಾಂಗ್ರೆಸ್ ಛೋಡೋ ಕಥೆ ಕೇಳಿದವರಿಗೆ ಕರ್ನಾಟಕದ ಬಗ್ಗೆಯೂ ಆತಂಕ ಮೂಡುವುದು ಸಹಜ. ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ತಲೆಬಿಸಿ ಆಗಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವಿನ ಸಮರ ಪದೇಪದೇ ಬಹಿರಂಗವಾಗುತ್ತಿದೆ‌. ಪ್ರಮುಖ ನಿರ್ಣಾಯಕ ವೇದಿಕೆಗಳಲ್ಲೇ ಸಿದ್ದರಾಮಯ್ಯ ಡಿಕೆಶಿ ನಡುವೆ ತುರುಸಿನ ಸ್ಪರ್ಧೆ ಎಷ್ಟಿದೆ ಅಂದರೆ ಸ್ವತಃ ರಾಹುಲ್ ಗಾಂಧಿಯೇ ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯರನ್ನು ತಬ್ಬಿಕೊಳ್ಳುವಂತೆ ಡಿ.ಕೆ.ಶಿವಕುಮಾರ್​ಗೆ ಸನ್ನೆ ಮಾಡಬೇಕಾಯಿತು.

ಪಂಜಾಬ್​ನಲ್ಲಿ ನಡೆದ ಕಾಂಗ್ರೆಸ್ ಒಳಮನೆಯ ಕಿತ್ತಾಟ, ಗೋವಾದ ಬಣ ಬಡಿದಾಟ, ರಾಜಸ್ಥಾನ ಛತ್ತಿಸಗಢದ ಶರಂಪರ ಸೆಣಸಾಟಗಳನ್ನು ನೋಡಿದವರಿಗೆ ಕರ್ನಾಟಕದಲ್ಲೂ ಕಾಂಗ್ರೆಸ್​ಗೆ ಎಲ್ಲವೂ ಸಲೀಸಲ್ಲ ಎನ್ನುವ ಸಂದೇಶ ರವಾನೆಯಾಗುತ್ತಿದೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸುಮಾರು 21 ದಿನ ಕರ್ನಾಟಕದಲ್ಲಿ ಹೆಜ್ಜೆ ಹಾಕುತ್ತಾರೆ. ಅದೇ ಶ್ರಮ ಕಾಂಗ್ರೆಸ್ ಜೋಡಿಸುವುದರಲ್ಲೂ ವ್ಯಯಿಸಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಗೆಲುವು-ಹೊಂದಾಣಿಕೆ ಎನ್ನುವುದು ಸುಲಭವಾಗಿ ಹರಡುವ ವೈರಸ್​ಗಳಲ್ಲ. ಆದರೆ ಸೋಲು-ಕಿತ್ತಾಟಗಳು ಮಾತ್ರ ವೈರಸ್ ಇದ್ದಂತೆ. ಅವು ಸುಲಭವಾಗಿ ಹರಡುತ್ತವೆ.

ವರದಿ: ಪ್ರಸನ್ನ ಗಾಂವ್ಕರ್, ಕರೆಸ್ಪಾಂಡೆಂಟ್, ಪೊಲಿಟಿಕಲ್ ಬ್ಯೂರೊ, ಟಿವಿ9 ಕನ್ನಡ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada