AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಮುಂದುವರಿದ ರಸ್ತೆ ರಾದ್ಧಾಂತ: ರಾತ್ರೋರಾತ್ರಿ ಪ್ರಿನ್ಸಸ್ ರಸ್ತೆಯ ಸ್ಟಿಕ್ಕರ್ ತೆರವು

ಮೈಸೂರಿನಲ್ಲಿ ರಸ್ತೆ ರಾದ್ಧಾಂತ ನಿಲ್ಲುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಜಟಾಪಟಿ ಮುಂದುವರಿದಿದೆ. ಪ್ರಿನ್ಸಸ್ ರಸ್ತೆಗೆ ದಾಖಲೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ. ಆದರೆ, ವಿವಿಧ ಸಂಘಟನೆಗಳು ಪ್ರಿನ್ಸಸ್ ರಸ್ತೆಗೆ ದಾಖಲೆಗಳಿವೆ ಎಂದು ವಾದಿಸಿವೆ. ಅಲ್ಲದೆ, ಸಿದ್ದರಾಮಯ್ಯ ಹೆಸರಿಡುವುದನ್ನು ವಿರೋಧಿಸಿವೆ.

ಮೈಸೂರಿನಲ್ಲಿ ಮುಂದುವರಿದ ರಸ್ತೆ ರಾದ್ಧಾಂತ: ರಾತ್ರೋರಾತ್ರಿ ಪ್ರಿನ್ಸಸ್ ರಸ್ತೆಯ ಸ್ಟಿಕ್ಕರ್ ತೆರವು
ದಾಖಲೆಗಳಲ್ಲಿ ಮತ್ತು ಅಧಿಕೃತ ವೆಬ್​​ಸೈಟ್​ಗಳಲ್ಲಿ ಪ್ರಿನ್ಸಸ್ ರಸ್ತೆ ಹೆಸರು ಉಲ್ಲೇಖವಾಗಿರುವುದು
ರಾಮ್​, ಮೈಸೂರು
| Updated By: Ganapathi Sharma|

Updated on: Jan 02, 2025 | 2:22 PM

Share

ಮೈಸೂರು, ಜನವರಿ 2: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆ ರಾಜಕೀಯ ಜೋರಾಗಿದೆ. ಸಿದ್ದರಾಮಯ್ಯ ಹೆಸರಿಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿವಿಧ ಸಂಘಟನೆಗಳ ಸದಸ್ಯರು, ಮಂಗಳವಾರ ಕೆಆರ್​​ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ಸ್ಟಿಕ್ಕರ್ ಅಂಟಿಸಿ ಪೂಜೆ ಮಾಡಿದ್ದರು. ಆರೆ, ರಾತ್ರೋ ರಾತ್ರಿ ಪ್ರಿನ್ಸಸ್ ರಸ್ತೆಯ ಸ್ಟಿಕ್ಕರ್ ತೆರವುಗೊಳಿಸಲಾಗಿದೆ. ವಿವಿಧೆಡೆ ಅಳವಡಿಸಿದ್ದ ಪ್ರಿನ್ಸಸ್ ರಸ್ತೆ ನಾಮಫಲಕವನ್ನು ತೆರವುಗೊಳಿಸಿದ್ದು ಅಧಿಕಾರಿಗಳೋ, ಪೊಲೀಸರು ಎಂಬ ಪ್ರಶ್ನೆ ಮೂಡಿದೆ.

ವಿವಿಧ ಸಂಘಟನೆಗಳು ಬುಧವಾರ ಅಂಟಿಸಿದ್ದ ಪ್ರಿನ್ಸಸ್ ರಸ್ತೆ ಸ್ಟಿಕ್ಕರ್​ನಲ್ಲಿ, 1921ರಲ್ಲಿ ನಾಲ್ವಡಿ ಅವರಿಂದ ಪ್ರಿನ್ಸಸ್ ರಸ್ತೆ ಉದ್ಘಾಟನೆಯಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಸ್ಟಿಕ್ಕರ್​ನಲ್ಲಿ ನಾಲ್ವಡಿ ಹಾಗೂ ಕೃಷ್ಣಾಜಮ್ಮಣ್ಣಿ ಅವರ ಭಾವಚಿತ್ರವಿತ್ತು.

ಕಾಂಗ್ರೆಸ್ ಮುಖಂಡರ ವಾದವೇನು?

ಕೆಆರ್​ಎಸ್​ ರಸ್ತೆಗೆ ಪ್ರಿನ್ಸಸ್ ರಸ್ತೆ ದಾಖಲೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ. ಆದರೆ, ಪ್ರಿನ್ಸಸ್ ರಸ್ತೆ ಎಂದು ಹೆಸರಿರುವ ನಾಮಫಲಕ ಲಭ್ಯವಾಗಿದೆ. ಯಾದವಗಿರಿ ರೈಲ್ವೆ ಬಡಾವಣೆಯ ಮನೆಗೆ ನಾಮಫಲಕ ಅಳವಡಿಸಲಾಗಿದೆ. ಮನೆ ನೇಮ್ ಬೋರ್ಡ್​ನಲ್ಲಿ ಪ್ರಿನ್ಸಸ್ ರಸ್ತೆ ಎಂದು ನಮೂದಿಸಲಾಗಿದೆ.

ದಾಖಲೆಗಳ ಪ್ರಕಾರ ಪ್ರಿನ್ಸೆಸ್ ರಸ್ತೆ ಹೆಸರಿತ್ತೇ?

ಇಷ್ಟೇ ಅಲ್ಲ ರಸ್ತೆಗೆ ಪ್ರಿನ್ಸೆಸ್ ಹೆಸರಿತ್ತು ಎಂಬುದಕ್ಕೆ ಮತ್ತೊಂದು ಮಹತ್ವದ ದಾಖಲೆ ಲಭ್ಯವಾಗಿದೆ. 1921ರಲ್ಲಿ ಪ್ರಿನ್ಸೆಸ್ ರಸ್ತೆ ಎಂದು ನಮೂದಾಗಿರುವ ನಕ್ಷೆಗೆ ನಗರಾಭಿವೃದ್ಧಿ ಟ್ರಸ್ಟ್ ಬೋರ್ಡ್ ಮೈಸೂರು ಚೇರ್​ಮನ್ ಸಹಿ ಹಾಕಿದ್ದಾರೆ.

ಮೈಸೂರು ಪಾಲಿಕೆ ಕಚೇರಿಗೆ ತೆರಳಿ ಆಯುಕ್ತರನ್ನು ಭೇಟಿಯಾಗಿ ಸ್ನೇಹಮಯಿ ಕೃಷ್ಣ ನೇತೃತ್ವದ ನಿಯೋಗ ಚರ್ಚೆ ನಡೆಸಿದೆ. ಪ್ರಿನ್ಸೆಸ್ ರಸ್ತೆಗೆ ದಾಖಲೆಗಳಿವೆ, ಸಿಎಂ ಹೆಸರು ಇಡೋದು ಬೇಡ. ಪ್ರಿನ್ಸೆಸ್ ರಸ್ತೆ ಅಂತಲೇ ಉಳಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದೆ.

ಪ್ರೊಫೆಸರ್ ನಂಜರಾಜೇ ಅರಸ್ ಹೇಳಿದ್ದೇನು?

ಇತ್ತ ಸಿಎಂ ಜತೆ ರಸ್ತೆ ಬಗ್ಗೆ ಮಾತನಾಡುತ್ತೇನೆ ಎಂದು ‘ಟಿವಿ9’ಗೆ ಪ್ರೊಫೆಸರ್ ನಂಜರಾಜೇ ಅರಸ್ ಹೇಳಿದ್ದಾರೆ. ಸಿದ್ದರಾಮಯ್ಯರೇ ಹೆಸರು ಬೇಡ ಎನ್ನುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಯಾರನ್ನೂ ಮೆಚ್ಚಿಸಲು ಕೆಲಸ ಮಾಡಲು ಹೋಗಬಾರದು ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಪ್ರಿನ್ಸೆಸ್ ರಸ್ತೆ ಎಂದು ರೈಲ್ವೆ ಇಲಾಖೆ ದಾಖಲೆಗಳಲ್ಲಿ ಇದೆ. ಮಹಾರಾಜರ ಹೆಸರು ತೆಗೆದು ಬೇರೆಯವರ ಹೆಸರಿಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು ಪ್ರಸ್ತಾವ: ಕೂಡಲೇ ಪ್ರಿನ್ಸೆಸ್ ರೋಡ್ ಫಲಕ ಅಳವಡಿಸಲು ಸ್ನೇಹಮಯಿ ಕೃಷ್ಣ ಆಗ್ರಹ

ಒಂದೆಡೆ ಮೈಸೂರಿನ ಕೆಆರ್​ಎಸ್ ರಸ್ತೆಗೆ ಹೆಸರಿರುವ ಪುರಾವೆಗಳೇ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಮತ್ತೊಂದೆಡೆ, ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಬೇಡ. ಈಗಾಗ್ಲೇ ಸಾಕಷ್ಟು ದಾಖಲೆಗಳಿವೆ ಎಂದು ಸಾಮಾಜಿಕ ಹೋರಾಟಗಾರರು ಒಂದೊಂದೇ ದಾಖಲೆಗಳನ್ನು ರಿಲೀಸ್ ಮಾಡುತ್ತಿದ್ದಾರೆ.

ವರದಿ: ರಾಮ್ ಮತ್ತು ದಿಲೀಪ್, ‘ಟಿವಿ9’ ಮೈಸೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ