ನಿಫಾ ವೈರಸ್ ಭೀತಿ: ಕೇರಳ ಗಡಿಗಳಲ್ಲಿ ಅಕ್ಟೋಬರ್ 10ರ ವರೆಗೆ ಮುಂದುವರಿಯಲಿದೆ ನಿಗಾ
Nipah surveillance on Kerala borders; ನಿಫಾ ಸಾವಿನ ಪ್ರಮಾಣ ಶೇ 40-70ರಷ್ಟಿದ್ದು, ಹೆಚ್ಚು ಜಾಗರೂಕರಾಗಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಕೇರಳದಲ್ಲಿ ಪತ್ತೆಯಾದ ಕೊನೆಯ ನಿಫಾ ಪ್ರಕರಣದ (ಸೆಪ್ಟೆಂಬರ್ 1) ಇನ್ಕ್ಯುಬೇಷನ್ ಅವಧಿ ಮುಗಿಯುವ ಅಕ್ಟೋಬರ್ 10 ರವರೆಗೆ ಕಣ್ಗಾವಲು ಮುಂದುವರಿಯಲಿದೆ. ಬಳಿಕ ಕಣ್ಗಾವಲು ಸಡಿಲಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು, ಸೆಪ್ಟೆಂಬರ್ 20: ಅಕ್ಟೋಬರ್ 10 ರವರೆಗೆ ರಾಜ್ಯದ ಕೇರಳ ಗಡಿಗಳಲ್ಲಿ ನಿಫಾ ಕಣ್ಗಾವಲು (Nipah virus Surveillance) ಮುಂದುವರಿಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಬುಧವಾರ ಹೇಳಿದ್ದಾರೆ. ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಶಂಕಿತ ನಿಫಾ ಪ್ರಕರಣಗಳು ವರದಿಯಾಗಿಲ್ಲ. ಆದಾಗ್ಯೂ ಸರ್ಕಾರವು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಸುಮಾರು 20 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಇದುವರೆಗೆ 10,000 ಕ್ಕೂ ಹೆಚ್ಚು ಜನರನ್ನು ಜ್ವರ, ಕೆಮ್ಮು ಮತ್ತು ಇತರ ರೋಗಲಕ್ಷಣಗಳಿಗಾಗಿ ತಪಾಸಣೆ ಮಾಡಲಾಗಿದೆ. ಕೇರಳದಲ್ಲಿ ನಿಫಾ ವೈರಸ್ ಸೋಂಕು ಪ್ರಕರಣಗಳು ಏಕಾಏಕಿ ವರದಿಯಾಗಿರುವ ಕೇಂದ್ರದಿಂದ 150 ಕಿಮೀ ವ್ಯಾಪ್ತಿಯ ಗಡಿಯಲ್ಲಿರುವ ಎಚ್‌ಡಿ ಕೋಟೆ ತಾಲೂಕಿನ ಕುಗ್ರಾಮಗಳು ಮತ್ತು ಕೇರಳದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಿಫಾ ಸಾವಿನ ಪ್ರಮಾಣ ಶೇ 40-70ರಷ್ಟಿದ್ದು, ರೋಗಕ್ಕೆ ಯಾವುದೇ ಲಸಿಕೆ ಇಲ್ಲದಿರುವುದರಿಂದ ಹೆಚ್ಚು ಜಾಗರೂಕರಾಗಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಕೇರಳದಲ್ಲಿ ಪತ್ತೆಯಾದ ಕೊನೆಯ ನಿಫಾ ಪ್ರಕರಣದ (ಸೆಪ್ಟೆಂಬರ್ 1) ಇನ್ಕ್ಯುಬೇಷನ್ ಅವಧಿ ಮುಗಿಯುವ ಅಕ್ಟೋಬರ್ 10 ರವರೆಗೆ ಕಣ್ಗಾವಲು ಮುಂದುವರಿಯಲಿದೆ. ಬಳಿಕ ಕಣ್ಗಾವಲು ಸಡಿಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಿಫಾ ವೈರಸ್ ಭೀತಿ: ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಕೇರಳದ ಪ್ರವಾಸಿಗರಿಗೆ ನಿರ್ಬಂಧ
ಇಲ್ಲಿಯವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ. ಶಂಕಿತ ಪ್ರಕರಣ ನಮ್ಮ ಗಮನಕ್ಕೆ ಬಂದರೆ, ಅಂಥವರ ಮಾದರಿಯನ್ನು ಪರೀಕ್ಷೆಗಾಗಿ ವೈರಾಲಜಿ ಸಂಸ್ಥೆಗೆ ಕಳುಹಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದ್ದಾರೆ.
ಇದಲ್ಲದೆ, ಯಾವುದೇ ರೀತಿಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕ್ವಾರಂಟೈನ್, ವಿಶೇಷ ವಾರ್ಡ್‌ಗಳು, ಮಾಸ್ಕ್‌ಗಳು, ಕಿಟ್‌ಗಳು ಇತ್ಯಾದಿ ಸೌಲಭ್ಯಗಳನ್ನು ಇಟ್ಟುಕೊಳ್ಳುವ ಮೂಲಕ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ