DK Shivakumar: ಇಡಿ ಪ್ರಕರಣ ರದ್ದಾದರೂ ಡಿಕೆ ಶಿವಕುಮಾರ್ಗೆ ಕಾಡುತ್ತಿದೆ ಸಿಬಿಐ ಕಂಟಕ!
ಜಾರಿ ನಿರ್ದೇಶನಾಲಯದ ತನಿಖೆಯಿಂದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಗೆ ಕೊಂಚ ರಿಲೀಫ್ ಸಿಕ್ಕಿದೆ. ಆದರೆ. ಇದು ಸಿಬಿಐ ತನಿಖೆ ಮೇಲೆ ಪರಿಣಾಮವಿಲ್ಲ. ಐಟಿ, ಇಡಿ ನೀಡಿದ್ದ ಮಾಹಿತಿ ಆಧರಿಸಿ ಸಿಬಿಐ ನಡೆಸುತ್ತಿರುವ ತನಿಖೆ ಇನ್ನೂ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಹೈಕೋರ್ಟ್ ನೀಡುವ ತೀರ್ಪು ಡಿಕೆ ಶಿವಕುಮಾರ್ ಅವರ ಭವಿಷ್ಯ ನಿರ್ಧರಿಸಲಿದೆ.
ಬೆಂಗಳೂರು, (ಮಾರ್ಚ್ 05): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ವಿರುದ್ಧದ ಇಡಿ ಪ್ರಕರಣವನ್ನು ಸುಪ್ರೀಂಕೋರ್ಟ್(supreme court) ರದ್ದುಪಡಿಸಿದೆ. ಐಪಿಸಿ ಸೆಕ್ಷನ್ 120 ಬಿ ಸ್ವತಂತ್ರ ಅಪರಾಧವಲ್ಲವೆಂದು ಇಡಿ ಕೇಸ್ ಅನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಡಿ ಪ್ರಕರಣದಲ್ಲಿ 50 ದಿನಗಳ ಕಾಲ ಜೈಲಿನಲ್ಲಿದ್ದ ಡಿ ಕೆ ಶಿವಕುಮಾರ್ ಇನ್ನು ದೆಹಲಿಯ ಕೋರ್ಟ್ ವಿಚಾರಣೆಗೆ ಹಾಜರಾಗುವಂತಿಲ್ಲ. ಹೀಗಾಗಿ ಇದೇ ಇಡಿ ಪ್ರಕರಣದಲ್ಲಿ ಮತ್ತೆ ಜೈಲು ಸೇರುವ ಅಪಾಯದಿಂದ ಡಿಕೆ ಶಿವಕುಮಾರ್ ಪಾರಾಗಿದ್ದಾರೆ. ಆದ್ರೆ, ಸಿಬಿಐ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದ್ದು,. ಇದರ ತನಿಖೆ ಮೇಲೆ ರದ್ದುಗೊಂಡಿರುವ ಇಡಿ ಪ್ರಕರಣ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.
ಐಟಿ, ಇಡಿ ನೀಡಿದ್ದ ಮಾಹಿತಿ ಆಧರಿಸಿ ಸಿಬಿಐ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ. ಸಿಬಿಐ ತನಿಖೆಗೆ ಸಮ್ಮತಿ ರದ್ದುಪಡಿಸಿದ ಕ್ರಮವನ್ನು ಸಿಬಿಐ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆ ಹಂತದಲ್ಲಿದೆ. ಹೀಗಾಗಿ ಹೈಕೋರ್ಟ್ ನೀಡುವ ತೀರ್ಪು ಡಿಕೆ ಶಿವಕುಮಾರ್ ಪಾಲಿಗೆ ಮಹತ್ವದ್ದಾಗಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಸಿಎಂ ಡಿಕೆ ಶಿವಕುಮಾರ್ಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್
ಇನ್ನು ಸಿಬಿಐ ಅಲ್ಲದೇ ದೆಹಲಿಯ ಡಿಕೆ ಶಿವಕುಮಾರ್ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿ 8.59 ಕೋಟಿ ಲೆಕ್ಕವಿಲ್ಲದ ಹಣ ಸಂಗ್ರಹಕ್ಕೆ ಸಂಬಂಧಿಸಿದಂತೆಯೂ ಪ್ರಕರಣ ವಿಚಾರಣೆ ಹಂತದಲ್ಲಿದೆ. ಸದ್ಯ ಡಿಕೆ ಶಿವಕುಮಾರ್ ಪಾಲಿಗೆ ಸಿಬಿಐ ದಾಖಲಿಸಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವೇ ಮಹತ್ವದ್ದಾಗಿದ್ದು, ಬಂಧನ ಸಾಧ್ಯತೆ ಇರುವ ಪ್ರಕರಣವೂ ಇದೇ ಆಗಿದೆ. ಸಿಬಿಐ ತನಿಖೆಗೆ ಸಮ್ಮತಿ ಹಿಂಪಡೆಯುವ ಮೂಲಕ ಸಿಬಿಐ ಕಟ್ಟಿಹಾಕಲು ಸದ್ಯಕ್ಕೆ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಆದರೆ ಹೈಕೋರ್ಟ್ ನೀಡಬಹುದಾದ ತೀರ್ಪು ಡಿಕೆ ಶಿವಕುಮಾರ್ ಭವಿಷ್ಯ ನಿರ್ಧರಿಸಲಿದೆ.
ಹೈಕೋರ್ಟ್ ವಿಸ್ತೃತ ಪೀಠದಲ್ಲಿ ಡಿಕೆಶಿ ಭವಿಷ್ಯ
ಶಿವಕುಮಾರ್ ವಿರುದ್ಧ ಸಿಬಿಐ 2020 ರಲ್ಲಿ ಪ್ರಕರಣ ದಾಖಲಿಸಿತ್ತು. 2013 ಮತ್ತು 2018 ರ ನಡುವೆ 74 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದು, ಅದು ಆದಾಯಕ್ಕೆ ಅನುಗುಣವಾಗಿಲ್ಲ ಎಂದು ಆರೋಪಿಸಲಾಗಿದೆ. ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರಕಾರ ಹಿಂಪಡೆದುಕೊಂಡಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್ ಈ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಸರಕಾರದ ತೀರ್ಮಾನ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿ ಜತೆಗೆ ಇದೀಗ ಸಿಬಿಐ ಕೂಡ ಅರ್ಜಿ ಸಲ್ಲಿಸಿದೆ. ಎರಡು ಪ್ರತ್ಯೇಕ ಅರ್ಜಿಗಳು ಜನವರಿ 6ರಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘ಈ ಅರ್ಜಿಗಳ ವಿಚಾರಣೆ ಸಮರೋಪಾದಿಯಲ್ಲಿ ನಡೆದು ಅಂತಿಮ ಹಂತ ತಲುಪಬೇಕಾಗಿದೆ. ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದಿರುವುದನ್ನು ಪ್ರಶ್ನಿಸಲಾಗಿದೆ. ಬಹಳ ಪ್ರಮುಖ ಅಂಶಗಳನ್ನು ವಕೀಲರು ಪ್ರಸ್ತಾಪಿಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಅಡ್ವೊಕೇಟ್ ಜನರಲ್, ಸಿಬಿಐ ಹಾಗೂ ಯತ್ನಾಳ್ ವಾದ ವಿರೋಧಿಸಿದ್ದಾರೆ. ಆದರೆ, ಸಮ್ಮತಿ ನೀಡಿದ ನಂತರ ಹಿಂಪಡೆಯುವ ಅಧಿಕಾರವಿಲ್ಲವೆಂದು ಸಿಬಿಐ ವಾದ ಮಂಡಿಸಿದೆ. ಎರಡೂ ಕಡೆ ವಾದ ಕೇಳಿದ ನಂತರ ಇದನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Tue, 5 March 24