ಆರ್ಮಿ ಕ್ಯಾಂಟೀನ್ಗಳಿಗೆ ಅಬಕಾರಿ ಸುಂಕ ವಿಧಿಸಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಆರ್ಮಿ ಕ್ಯಾಂಟೀನ್ಗಳಿಗೆ ಯಾವುದೇ ಕಾರಣಕ್ಕೂ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆ ಕುರಿತ ವರದಿಗಳ ಬಗ್ಗೆ ‘ಜೈ ಹಿಂದ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಅವರು, ಮಿಲಿಟರಿ ಕ್ಯಾಂಟೀನ್ಗಳಿಗೆ ಕರ್ನಾಟಕ ಸರ್ಕಾರ ಎಕ್ಸೈಸ್ ಡ್ಯುಟಿ ವಿಧಿಸಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಮಾಜಿ ಸೈನಿಕರ ಕಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.

ಬೆಂಗಳೂರು, ಮೇ 28: ಆರ್ಮಿ ಕ್ಯಾಂಟೀನ್ಗಳಿಗೆ ಪೂರೈಕೆ ಮಾಡುವ ಮದ್ಯದ ಅಬಕಾರಿ ತೆರಿಗೆ ಹೆಚ್ಚಳಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Govt) ಮುಂದಾಗಿದೆ ಎಂಬ ಮಾಧ್ಯಮ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಲ್ಲಗಳೆದಿದ್ದಾರೆ. ಆಪರೇಷನ್ ಸಿಂಧೂರ್ ಯಶಸ್ಸಿನ ಸಂಭ್ರಮ ಆಚರಣೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ಜೈ ಹಿಂದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಮಿ ಕ್ಯಾಂಟೀನ್ ವಸ್ತುಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಮಿಲಿಟರಿ ಕ್ಯಾಂಟೀನ್ಗಳಿಗೆ ಕರ್ನಾಟಕ ಸರ್ಕಾರ ಎಕ್ಸೈಸ್ ಡ್ಯುಟಿ ವಿಧಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಹಾಗೆ, ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಮುಖ್ಯಮಂತ್ರಿಗಳು ಈ ವಿಚಾರವನ್ನು ಘೋಷಣೆ ಮಾಡುತ್ತಿದ್ದಂತೆಯೇ ಸಭೆಯಲ್ಲಿ ನೆರದಿದ್ದವರು ಚಪ್ಪಾಳೆ ಮೂಲಕ ಸ್ವಾಗತಿಸಿದರು.
ನಿವೃತ್ತ ಸೇನಾ ಸಿಬ್ಬಂದಿಯ ಕಲ್ಯಾಣಕ್ಕಾಗಿ ಎಕ್ಸ್ ಸರ್ವಿಸ್ ಮೆನ್ ವೆಲ್ಫೇರ್ ಕಾರ್ಪೊರೇಷನ್ ಸ್ಥಾಪಿಸಬೇಕೆಂಬ ಮನವಿ ಇದೆ. ಅದನ್ನು ಸ್ಥಾಪಿಸುವ ಸಂಬಂಧ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ನೀವೆಲ್ಲ ದೇಶದ ಜತೆಗಿದ್ದೀರಿ. ನಾವು ನಿಮ್ಮ ಜತೆಗಿದ್ದೇವೆ ಎಂದು ಮಾಜಿ ಸೈನಿಕರನ್ನು ಉದ್ದೇಶಿಸಿ ಸಿದ್ದರಾಮಯ್ಯ ಹೇಳಿದರು.
‘ಜೈ ಹಿಂದ್’ ಕಾರ್ಯಕ್ರಮದ ವಿಡಿಯೋ
LIVE : ‘ಜೈ ಹಿಂದ್ ಸಭಾ’ ಕಾರ್ಯಕ್ರಮ, ಟೌನ್ ಹಾಲ್, ಬೆಂಗಳೂರು https://t.co/QvbY0kuMvR
— Karnataka Congress (@INCKarnataka) May 28, 2025
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಸಿ ವೇಣುಗೋಪಾಲ್ ಅವರು ಆರ್ಮಿ ಜಾಕೆಟ್ ಧರಿಸಿದರು.
ಇದನ್ನೂ ಓದಿ: ಯೋಧರು ಖರೀದಿಸುವ ಮದ್ಯದ ತೆರಿಗೆ ಹೆಚ್ಚಿಸಲು ಮುಂದಾದ ಕಾಂಗ್ರೆಸ್ ಸರ್ಕಾರ
ಆರ್ಮಿ ಕ್ಯಾಂಟೀನ್ನಲ್ಲಿ ಮಾರಾಟ ಮಾಡುವ ಮದ್ಯದ ಮೇಲಿನ ತೆರಿಗೆಯನ್ನೂ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಕೆಲವು ದಿನಗಳ ಹಿಂದೆ ತಿಳಿಸಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮೂರು ಬಾರಿ ಮದ್ಯದ ದರ ಏರಿಕೆ ಮಾಡಲಾಗಿದೆ. ಅದರ ಬೆನ್ನಲ್ಲೇ ಆರ್ಮಿ ಕ್ಯಾಂಟೀನ್ಗೂ ಅಬಕಾರಿ ಸುಂಕ ವಿಧಿಸುವ ಸುಳಿವಿನ ಬಗ್ಗೆ ವಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Wed, 28 May 25








