ವಿದ್ಯಾರ್ಥಿಗಳು ಶಾಲೆಗಳಲ್ಲಿ ಶೌಚಾಲಯ ತೊಳೆದರೆ ತಪ್ಪೇನು?: ಗೋವಿಂದ ಕಾರಜೋಳ
ಇತ್ತೀಚಿಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸ್ಚಚ್ಛಗೊಳಿಸಿರುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು, ಸೆಪ್ಟೆಂಬರ್ 08: ಇತ್ತೀಚಿಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳು (Students) ಶೌಚಾಲಯ (Toilet) ಸ್ಚಚ್ಛಗೊಳಿಸಿರುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ಕುರಿತು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ (Govind Karjol) ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಶಾಲೆಗಳಲ್ಲಿ ಶೌಚಾಲಯ ತೊಳೆದರೆ ತಪ್ಪೇನು, ಜಪಾನ್‌ನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಹೇಳಿದರು ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ನನ್ನ ವಸತಿ ನಿಲಯವನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದೆ ಎಂದು ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವೀಡಿಯೊಗಳನ್ನು ನಾನು ನೋಡಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪೊರಕೆ ನೀಡುವುದು ಅಪರಾಧ ಎಂಬಂತೆ ಕಾಣುತ್ತಿದ್ದು, ಇದರಿಂದ ಸ್ವಚ್ಛತೆಯ ಕೆಲಸ ಕೀಳು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿದೆ. ಬದಲಾಗಿ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿಹೇಳುವುದು ಅವಶ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬಹಿರ್ದೆಸೆಗೆ ಹೋಗಲು ಹತ್ತಾರು ಸಮಸ್ಯೆ; ಯಲಬುರ್ಗಾ ಕೊನಸಾಗರದಲ್ಲಿ ತಾವೇ ಹಣ ಹಾಕಿ ಶೌಚಾಲಯ ನಿರ್ಮಿಸಿದ ಮಹಿಳೆಯರು
ವಿದ್ಯಾರ್ಥಿಗಳು ಕೆಲ ಎಚ್ಚರಿಕೆಗಳನ್ನು ಬಳಸಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದರಲ್ಲಿ ತಪ್ಪೇನಿಲ್ಲ. ಯಾವುದೇ ತಾರತಮ್ಯವಿಲ್ಲದೆ ಎಲ್ಲ ವಿದ್ಯಾರ್ಥಿಗಳು ಸ್ವಚ್ಛತೆಯಲ್ಲಿ ತೊಡಗಬೇಕು. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಕೂಡ ಇದರಲ್ಲಿ ಭಾಗಿಯಾಗಬೇಕು. ಕನಿಷ್ಠ 11 ವರ್ಷ ವಯಸ್ಸಿನ 5 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಯ ವಿದ್ಯಾರ್ಥಿಗಳು ಮಾತ್ರ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳಬೇಕು. ಶೌಚಾಲಯಗಳು ನಲ್ಲಿ ನೀರು ಸೌಲಭ್ಯವನ್ನು ಹೊಂದಿರಬೇಕು. ಇದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನಿಯಮದಂತೆ ಜಾರಿಯಾಗಬೇಕು. ಪ್ರತಿ ವಾರಾಂತ್ಯದಲ್ಲಿ ಪೌರಕಾರ್ಮಿಕರು ಸ್ವಚ್ಛತೆ ಮಾಡಬೇಕು ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯ ಮಾಜಿ ಪ್ರಾಧ್ಯಾಪಕ ಸೀತಾರಾಮು ಎಂಎಸ್ ಹೇಳಿದರು.
ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ಸಮಸ್ಯೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ದಲಿತ ಸಮುದಾಯದ ಪ್ರತಿನಿಧಿಯಾಗಿರುವ ಕಾರಜೋಳ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಬೇಕು ಎಂದು ಹೇಳುವುದು ಸುಲಭ, ಆದರೆ ಅಂತಿಮವಾಗಿ ದಲಿತ ಸಮುದಾಯದ ಮಕ್ಕಳೇ ಸ್ವಚ್ಛತೆಯಲ್ಲಿ ತೊಡಗುತ್ತಾರೆ. ಇದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ