ಓಲಾ, ಉಬರ್ ಕ್ಯಾಬ್‌ಗಳಿಗೂ ಮೀಟರ್ ಕಡ್ಡಾಯ: ಹೊಸ ವರ್ಷದಿಂದ ವಾಹನ ಸವಾರರಿಗೆ ಟಫ್ ರೂಲ್ಸ್, ತಪ್ಪಿದ್ರೆ ದಂಡ-ಬೈಕ್ ಸೀಜ್

ಓಲಾ, ಉಬರ್, ನಮ್ಮ ಯಾತ್ರಿ ಸೇರಿದಂತೆ ಎಲ್ಲ ಕ್ಯಾಬ್‌ಗಳಿಗೂ ಮೀಟರ್ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ತಪ್ಪಿದರೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ಭಾರೀ ದಂಡ, ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧದಂಥ ಕಠಿಣ ನಿಯಮಗಳು ಹೊಸ ವರ್ಷದಿಂದ ಜಾರಿಗೆ ಬರಲಿವೆ.

ಓಲಾ, ಉಬರ್ ಕ್ಯಾಬ್‌ಗಳಿಗೂ ಮೀಟರ್ ಕಡ್ಡಾಯ: ಹೊಸ ವರ್ಷದಿಂದ ವಾಹನ ಸವಾರರಿಗೆ ಟಫ್ ರೂಲ್ಸ್, ತಪ್ಪಿದ್ರೆ ದಂಡ-ಬೈಕ್ ಸೀಜ್
Edited By:

Updated on: Nov 16, 2026 | 2:23 PM

ಮುಖ್ಯಾಂಶಗಳು

  • ಎಲ್ಲ ಕ್ಯಾಬ್​ಗಳಿಗೂ ಮೀಟರ್ ಕಡ್ಡಾಯ
  • ಫುಟ್​ಪಾತ್ ಮೇಲೆ ಚಾಲನೆಗೆ ಭಾರೀ ದಂಡ, ಹಾಫ್ ಹೆಲ್ಮೆಟ್ ಬ್ಯಾನ್
  • ಹೊಸ ವರ್ಷದಿಂದ ಮತ್ತಷ್ಟು ಕಠಿಣ ಸಂಚಾರ ನಿಯಮ

ಬೆಂಗಳೂರು, ನವೆಂಬರ್ 16: ಬೆಂಗಳೂರಿನಲ್ಲಿ ಸಂಚರಿಸುವ ಓಲಾ, ಉಬರ್, ನಮ್ಮ ಯಾತ್ರಿ ಕ್ಯಾಬ್‌ಗಳಿಗೂ ಇನ್ಮುಂದೆ ಮೀಟರ್ ಕಡ್ಡಾಯವಾಗಲಿದೆ. ಮೀಟರ್ ಅಳವಡಿಸದೆ ಕ್ಯಾಬ್ ಅಥವಾ ಆಟೋ ಓಡಿಸುವಂತಿಲ್ಲ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಇದೇ ವೇಳೆ, ಹೊಸ ವರ್ಷದಿಂದ ರಾಜ್ಯಾದ್ಯಂತ ವಾಹನ ಸವಾರರಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ಭಾರಿ ದಂಡ ವಿಧಿಸುವುದರ ಜತೆಗೆ ಪದೇ ಪದೆ ನಿಯಮ ಉಲ್ಲಂಘಿಸಿದರೆ ಬೈಕ್ ಸೀಜ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಹಾಫ್ ಹೆಲ್ಮೆಟ್ ಬಳಕೆಗೂ ನಿಷೇಧ ಹೇರಲು ಸರ್ಕಾರ ಮುಂದಾಗಿದೆ.

ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಕ್ಯಾಬ್‌ಗಳಿಗೂ ನಿಯಮ ಅನ್ವಯ

ಬೆಂಗಳೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ಆಟೋಗಳಂತೆ ಓಲಾ, ಉಬರ್ ಹಾಗೂ ನಮ್ಮ ಯಾತ್ರಿ ಕ್ಯಾಬ್‌ಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಕ್ಯಾಬ್‌ಗಳಿಗೂ ಈ ನಿಯಮ ಅನ್ವಯವಾಗಲಿದೆ. ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ ಕಂಪನಿಯ ಕ್ಯಾಬ್‌ಗಳಿಗೂ ಮೀಟರ್ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Loading...

ಮೀಟರ್ ಇಲ್ಲದೆ ಆಟೋ ಅಥವಾ ಕ್ಯಾಬ್ ಓಡಿಸಿದರೆ ದಂಡ

ಮೀಟರ್ ಅಳವಡಿಕೆ ಸಂಬಂಧ ಕರಡು ನಿಯಮ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೀಟರ್ ಇಲ್ಲದೆ ಆಟೋ ಅಥವಾ ಕ್ಯಾಬ್ ಓಡಿಸಿದರೆ ದಂಡ ವಿಧಿಸಲಾಗುತ್ತದೆ. ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೊಸ ವರ್ಷದಿಂದ ಫುಟ್‌ಪಾತ್ ಮೇಲೆ ಬೈಕ್ ಓಡಿಸಿದರೆ ಭಾರಿ ದಂಡ

ವಾಹನ ಸವಾರರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹೊಸ ವರ್ಷದಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಫುಟ್‌ಪಾತ್ ಮೇಲೆ ಬೈಕ್ ಅಥವಾ ಇತರ ವಾಹನಗಳನ್ನು ಚಲಾಯಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಈವರೆಗೆ 1,000 ರೂ. ಇದ್ದ ದಂಡವನ್ನು 5,000 ರೂ.ಗೆ ಹೆಚ್ಚಿಸುವ ಪ್ರಸ್ತಾವನೆ ಇದೆ.

ಹೊಸ ನಿಯಮದ ಪ್ರಕಾರ ಫುಟ್‌ಪಾತ್ ಮೇಲೆ ಚಾಲನೆಗೆ ದಂಡ ಎಷ್ಟು?

ಹೊಸ ನಿಯಮದ ಪ್ರಕಾರ, ಮೊದಲ ಬಾರಿಗೆ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ 5,000 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ ವಿಧಿಸಲು ಉದ್ದೇಶಿಸಲಾಗಿದೆ. ಮೂರನೇ ಅಥವಾ ನಾಲ್ಕನೇ ಬಾರಿಯೂ ಇದೇ ತಪ್ಪು ಮಾಡಿದರೆ ವಾಹನವನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ.

ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್‌ಗೆ ಸಿದ್ಧತೆ

ಇನ್ನು ಮುಂದೆ ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವುದಕ್ಕೂ ನಿಷೇಧ ಹೇರಲು ಸರ್ಕಾರ ನಿರ್ಧರಿಸಿದೆ. ಹಾಫ್ ಹೆಲ್ಮೆಟ್‌ಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ಜತೆಗೆ ಅವುಗಳ ತಯಾರಿಕಾ ಕೇಂದ್ರಗಳನ್ನೂ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿಗೆ ಹಣ ಕೇಳಿದರೆ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು: ಸಚಿವ ರಿಜ್ವಾನ್ ಅರ್ಷದ್ ಖಡಕ್ ಎಚ್ಚರಿಕೆ

ಈ ಸಂಬಂಧ ಕಾಯ್ದೆ ಜಾರಿಗೆ ತರಲು ಅಗತ್ಯವಿರುವ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಪೂರ್ಣಗೊಂಡಿದೆ ಎಂದು ಸಚಿವರು ಹೇಳಿದ್ದಾರೆ. ಹೊಸ ವರ್ಷದಿಂದಲೇ ಈ ನಿಯಮಗಳನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಹೀಗಾಗಿ, ಇನ್ಮುಂದೆ ಕ್ಯಾಬ್ ಮತ್ತು ಆಟೋ ಚಾಲಕರು ಮಾತ್ರವಲ್ಲದೆ ದ್ವಿಚಕ್ರ ವಾಹನ ಸವಾರರೂ ಹೊಸ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us