ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿ ಮಾಡುತ್ತೇವೆ: ಸಿದ್ದರಾಮಯ್ಯ
ಕರ್ನಾಟಕ ಸರ್ಕಾರವು ರೋಹಿತ್ ವೇಮುಲ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪತ್ರಕ್ಕೆ ಪ್ರತಿಕ್ರಿಯಿಸಿ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಕಾಯ್ದೆಯು ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲಿನ ತಾರತಮ್ಯವನ್ನು ತಡೆಯುವ ಗುರಿ ಹೊಂದಿದೆ.

ಬೆಂಗಳೂರು, ಏಪ್ರಿಲ್ 18: ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾಯ್ದೆಯನ್ನು (Rohith Vemula Act) ಜಾರಿಗೆ ತರುವ ನಿರ್ಧಾರದಲ್ಲಿ ಸರ್ಕಾರ ದೃಢವಾಗಿ ನಿಂತಿದೆ. ಕರ್ನಾಟಕದಲ್ಲಿ ಆದಷ್ಟು ಬೇಗ ರೋಹಿತ್ ವೇಮುಲ ಕಾಯ್ದೆ ಜಾರಿ ಮಾಡುತ್ತೇವೆ. ಪಕ್ಷದ ನಾಯಕ ರಾಹುಲ್ ಗಾಂಧಿಯವರ (Rahul Gandhi) ಪತ್ರ ಹಾಗೂ ಸಾಮಾಜಿಕ ನ್ಯಾಯ, ಅಚಲವಾದ ಬದ್ಧತೆಗಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿ ತರುವ ವಿಚಾರವಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬರೆದ ಪತ್ರಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ ಅವರು, ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ, ತಾರತಮ್ಯ ಎದುರಿಸದಂತೆ ಆದಷ್ಟು ಬೇಗ ಕಾಯ್ದೆಯನ್ನು ಜಾರಿಗೆ ತರುತ್ತೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನ, ಸಹಾನುಭೂತಿಯ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಟ್ವೀಟ್
I thank Shri @RahulGandhi for his heartfelt letter and unwavering commitment to social justice.
Our Govt stands firm in its resolve to enact the Rohith Vemula Act in Karnataka — to ensure no student faces discrimination based on caste, class, or religion. We will bring this… https://t.co/XsmtXW7NDF
— Siddaramaiah (@siddaramaiah) April 18, 2025
ರಾಹುಲ್ ಗಾಂಧಿ ಬರೆದ ಪತ್ರದಲ್ಲಿ ಏನಿದೆ?
“ಸಂಸದ ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಎದುರಿಸಿದ ತಾರತಮ್ಯದ ಬಗ್ಗೆ ಉಲ್ಲೇಖಿಸಿದ್ದಾರೆ. ಹಿಂದೆ, ನಮ್ಮಲ್ಲಿ ಸಾಕಷ್ಟು ಆಹಾರ ಧಾನ್ಯಗಳಿದ್ದವು. ಹೀಗಿದ್ದರೂ ನಮ್ಮಲ್ಲಿ ಕೆಲವರು ಹಸಿವಿನಿಂದ ಬಳಲುತ್ತಿದ್ದರು. ಊಟ ಮಾಡದೇ ಮಲಗಿದ ದಿನಗಳೆಷ್ಟೋ. ನೀರು ಲಭ್ಯತೆಯೂ ಕಷ್ಟವಾಗಿತ್ತು. ಅಸ್ಪೃಶ್ಯರು ಎಂಬ ಒಂದೇ ಕಾರಣಕ್ಕೆ ಇವೆಲ್ಲವನ್ನೂ ಸಹಿಸಿಕೊಂಡು ಬದುಕಬೇಕಾಗಿತ್ತು” ಎಂಬ ಸಂಗತಿಯನ್ನು ಪತ್ರದಲ್ಲಿ ಬರೆದಿದ್ದಾರೆ.
“ಡಾ. ಬಿ.ಆರ್ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿರುವ ಅವರು, ‘ನಾನೊಬ್ಬ ಅಸ್ಪೃಶ್ಯ ಎಂಬುದು ಗೊತ್ತಿತ್ತು. ಇದೇ ಕಾರಣಕ್ಕಾಗಿ ಅವಮಾನ ಮತ್ತು ತಾರತಮ್ಯ ಸಾಮಾನ್ಯವಾಗಿದ್ದವು. ಅಂಕಗಳಿದ್ದರೂ ಸಹಪಾಠಿಗಳೊಂದಿಗೆ ನಾನು ಸಹಜವಾಗಿ ಕೂರಲು ಸಾಧ್ಯವಿಲ್ಲ ಎಂಬುದೂ ತಿಳಿದಿತ್ತು. ಇಷ್ಟಾದರೂ, ತರಗತಿಯ ಒಂದು ಮೂಲೆಯಲ್ಲಿ ಕೂರುತ್ತಿದ್ದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಅವರು ಅನುಭವಿಸಿದ ಅವಮಾನವನ್ನು ಭಾರತದ ಯಾವ ಮಗುವೂ ಅನುಭವಿಸಬಾರದು ಎಂಬುದನ್ನು ನೀವು ಒಪ್ಪುತ್ತೀರಿ ಎಂದು ಭಾವಿಸಿದ್ದೇನೆ. ದಲಿತ, ಆದಿವಾಸಿ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಲಕ್ಷಾಂತರ ವಿದ್ಯಾರ್ಥಿಗಳು ಇಂದಿಗೂ ಅದೇ ಘೋರ ತಾರತಮ್ಯವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಎದುರಿಸುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರೂ ರೋಹಿಲ್ ವೇಮುಲಾ, ಪಾಯಲ್ ತಾನ್ವಿ ಮತ್ತು ದರ್ಶನ್ ಸೊಲಂಕಿ ಅವರ ಹತ್ಯೆಯಯನ್ನು ಸಹಿಸಲಾಗದು. ಇವೆಲ್ಲದಕ್ಕೂ ಕೊನೆ ಹಾಡುವ ಕಾಲವಿದು. ಹೀಗಾಗಿ ಕರ್ನಾಟಕ ಸರ್ಕಾರವು ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೆ ತರಬೇಕು” ಎಂದಿದ್ದಾರೆ.
“ಆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್, ರೋಹಿತ್ ವೇಮುಲ ಒಳಗೊಂಡಂತೆ ಹಲವರು ಎದುರಿಸಿದ ಅವಮಾನವನ್ನು ಯಾವುದೇ ಮಗು ಅನುಭವಿಸಬಾರದು. ಶಿಕ್ಷಣ ವ್ಯವಸ್ಥೆಯೊಂದಕ್ಕೇ ಈ ದೇಶದಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯ. ಅವಕಾಶ ವಂಚಿತರೂ ಶಿಕ್ಷಣದ ಮೂಲಕ ಸಬಲರಾಗಬಹುದು” ಎಂದು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ರೋಹಿತ್ ವೇಮುಲ ದಲಿತನೇ ಅಲ್ಲ; ಹೈಕೋರ್ಟ್ಗೆ ಪೊಲೀಸರ ಅಂತಿಮ ವರದಿ
ರೋಹಿತ್ ವೇಮುಲ ಯಾರು?
ಹೈದರಾಬಾದ್ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಪಿಹೆಚ್ಡಿ ಅಧ್ಯಯನ ಮಾಡುತ್ತಿದ್ದ ರೋಹಿತ್ ವೇಮುಲ 2016ರ ಜನವರಿ 17 ರಂದು ಆತ್ಮಹತ್ಯಗೆ ಶರಣಾಗಿದ್ದರು. ರೋಹಿತ್ ವೇಮುಲ ಅವರು ಆತ್ಮಹತ್ಯೆಗೆ ಮುನ್ನ ಸುದೀರ್ಘ ಡೆತ್ ನೋಟ್ ಬರೆದಿದ್ದರು. ಈ ಡೆತ್ ನೋಟ್ನಲ್ಲಿ ಹಲವು ವಿಚಾರಗಳನ್ನು ಉಲ್ಲೇಖ ಮಾಡಿದ್ದರು.
ವರದಿ: ಈರಣ್ಣ ಬಸವ