AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ-ಕಾಂಗ್ರೆಸ್ ನಾಯಕರ ಮೆಟ್ರೋ ಕ್ರೆಡಿಟ್ ವಾರ್: ಮೋದಿ ಮುಂದೆಯೇ ಲೆಕ್ಕ ಬಿಚ್ಚಿಟ್ಟ ಸಿದ್ದರಾಮಯ್ಯ

ಇಂದು (ಆಗಸ್ಟ್ 10) ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದಾರೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಆರ್‌.ವಿ ರಸ್ತೆ ಮತ್ತು ಬೊಮ್ಮಸಂದ್ರದ ಹಳದಿ ಮಾರ್ಗಕ್ಕೆ ಚಾಲನೆ ನೀಡಿದರು. ಮತ್ತೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮೆಟ್ರೋ ಕ್ರೆಡಿಟ್ ವಾರ್ ಶುರುವಾಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಮುಂದೆಯೇ ಲೆಕ್ಕ ಬಿಚ್ಚಿಟ್ಟಿದ್ದಾರೆ.

ಬಿಜೆಪಿ-ಕಾಂಗ್ರೆಸ್ ನಾಯಕರ ಮೆಟ್ರೋ ಕ್ರೆಡಿಟ್ ವಾರ್: ಮೋದಿ ಮುಂದೆಯೇ ಲೆಕ್ಕ ಬಿಚ್ಚಿಟ್ಟ ಸಿದ್ದರಾಮಯ್ಯ
Siddaraaiah And Modi
ರಮೇಶ್ ಬಿ. ಜವಳಗೇರಾ
|

Updated on: Aug 10, 2025 | 3:08 PM

Share

ಬೆಂಗಳೂರು, (ಆಗಸ್ಟ್ 10): ನಮ್ಮ ಮೆಟ್ರೋ ಹಳದಿ ಮಾರ್ಗ (Yellow metri Line) ಉದ್ಘಾಟನೆ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ (BJP And BJP) ನಾಯಕರು ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಅತಿ ಹೆಚ್ಚು ಪಾಲು ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಸಚಿವರು ನಮ್ಮದೇ ಪಾಲು ಹೆಚ್ಚಿದೆ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಇದೀಗ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮುಂದೆಯೇ ರಾಜ್ಯ ಸರ್ಕಾರದ ಪಾಲು ಹೆಚ್ಚಿದೆ ಎಂದು ಲೆಕ್ಕಬಿಚ್ಚಿಟ್ಟರು.

ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ, ಮೆಟ್ರೋ 3ನೇ ಹಂತಕ್ಕೆ ಶಂಕುಸ್ಥಾಪನೆ ಹಾಗೂ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ. 2005ರಲ್ಲಿ ಬೆಂಗಳೂರು ಮಟ್ರೋ ಕಾಮಗಾರಿ ಆರಂಭಿಸಲಾಗಿತ್ತು. ಮನಮೋಹನ್​ ಸಿಂಗ್ ಪ್ರಧಾನಿಯಾಗಿದ್ದಾಗ ಮೆಟ್ರೋ ಯೋಜನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ 50%, ರಾಜ್ಯ ಸರ್ಕಾರ 50% ಅನುದಾನ ನೀಡಬೇಕಿತ್ತು. ಆದ್ರೆ ರಾಜ್ಯ ಸರ್ಕಾರವೇ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ ಎಂದರು.

ಇದನ್ನೂ ಓದಿ: ಮೋದಿ ಚಾಲನೆ ಕೊಟ್ಟ ಹಳದಿ ಮಾರ್ಗದ ಮೆಟ್ರೋ ಟಿಕೆಟ್ ದರ ಹೇಗಿದೆ? ಎಲ್ಲೆಲ್ಲಿ ನಿಲುಗಡೆ?

ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಕಾರ್ಯಕ್ರಮ. 96.10 ಕಿ.ಮೀ. ಉದ್ದದ ಮೆಟ್ರೋ ರೈಲ್ವೆ ಕೆಲಸ ನಡೆದಿದೆ. ಈ ಯೋಜನೆಗೆ ರಾಜ್ಯ ಸರ್ಕಾರ 23 ಸಾವಿರ ಕೋಟಿ‌ ಖರ್ಚು ಮಾಡಿದೆ. ಕೇಂದ್ರ ಸರ್ಕಾರ 7,467.86 ಕೋಟಿ ರೂ. ಮಾತ್ರ ಖರ್ಚು ಮಾಡಿದೆ ಎಂದು ಸ್ಪಷ್ಟಪಡಿಸಿದರು.

ಸದ್ಯ ಮೆಟ್ರೋದಲ್ಲಿ ನಿತ್ಯ 9 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಹಳದಿ ಮಾರ್ಗ ಸೇರ್ಪಡೆಯಿಂದ 12.5 ಲಕ್ಷ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ. ಬೆಂಗಳೂರು ನಗರದ ಬಹಳ ವೇಗವಾಗಿ ಬೆಳೆಯುತ್ತಿದೆ. ಸಂಚಾರ ದಟ್ಟಣೆ ಮಾಡಲು ಮೆಟ್ರೋ ಮಾಡಲಾಗಿದೆ. 2030ರ ವೇಳೆಗೆ 220 ಕಿ.ಮೀ ಉದ್ದದ ಮೆಟ್ರೋ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ 30 ಲಕ್ಷ ಪ್ರಯಾಣಿಕರು ನಿತ್ಯ ಪ್ರಯಾಣಿಸಲಿದ್ದಾರೆ.

ಇಂದು ಮೂರನೇ ಹಂತಕ್ಕೆ ಶಂಕುಸ್ಥಾಪನೆಯಾಗಿದೆ. ಮೆಟ್ರೋ 3ಎಗೆ ಕೇಂದ್ರ ಅನುಮತಿ ನೀಡಿದರೆ ಅದನ್ನೂ ಪ್ರಾರಂಭಿಸಬಹುದು. ಇನ್ನು ಅಭಿವೃದ್ಧಿ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್‌ಗೆ ಹೇಗೆ ಒತ್ತು ನೀಡುತ್ತೀರೋ ಅದೇ ರೀತಿ ನಮ್ಮ ರಾಜ್ಯಕ್ಕೂ ಆದ್ಯತೆ ನೀಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಪ್ರಧಾನಿ ಮೋದಿ ಅವರನ್ನು ಸಿಎಂ ಕೋರಿದರು.

ಮೆಟ್ರೋ ಯೋಜನೆಯಲ್ಲಿ ಶೇ.80ರಷ್ಟು ನಮ್ಮದು

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ (Namma metro Yellow line) ರಾಜ್ಯ ಸರ್ಕಾರ ಶೇ. 80 ರಷ್ಟು ಖರ್ಚು ಮಾಡಿದ್ದರೆ, ಕೇಂದ್ರ ಬಿಜೆಪಿ ಸರ್ಕಾರ ಶೇ.20 ರಷ್ಟು ಮಾತ್ರ ಖರ್ಚು ಮಾಡಿದೆ. ಕೆಲವೊಂದು ಕಡೆ ಶೇ.11 ರಷ್ಟು ಮಾತ್ರ ಖರ್ಚು ಮಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಅವರು ಹೇಳಿದರು‌. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿ ಸಂಸದರು ಹಾಗೂ ನಾಯಕರ ಮೇಲೆ ವಾಗ್ದಾಳಿ ನಡೆಸಿದರು.

“ಬೆಂಗಳೂರಿಗೆ ಕನಿಷ್ಠ 1 ಲಕ್ಷ ಕೋಟಿ ರೂ. ಅನುದಾನ ನೀಡಬೇಕು ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ. ಮೆಟ್ರೋ ಯೋಜನೆಯ ಭೂಸ್ವಾಧೀನಕ್ಕೆಲ್ಲ ರಾಜ್ಯ ಸರ್ಕಾರವೇ ಹಣ ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಶೇ. 50 ರಷ್ಟು ನೀಡಬೇಕಾಗಿತ್ತು. ಅದನ್ನೂ ನೀಡಿಲ್ಲ. ಆದರೂ ನಾವು ಈ ರಾಜ್ಯದ, ಬೆಂಗಳೂರಿನ ಜನರ ಹಿತಕ್ಕಾಗಿ ಈ ಕೆಲಸ ಪೂರ್ಣಗೊಳಿಸಿದ್ದೇವೆ. ಬೆಂಗಳೂರು ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ನಗರವಾದರೂ ಸಿಗುತ್ತಿರುವ ಅನುದಾನ ಮಾತ್ರ ಬಹಳ ಕಡಿಮೆ” ಎಂದರು.