ನೀನು ಎಲ್ಲೇ ಇದ್ದರೂ ಬಂದು ಪೊಲೀಸರ ಮುಂದೆ ಶರಣಾಗು: ಪ್ರಜ್ವಲ್ಗೆ ದೇವೇಗೌಡ ವಾರ್ನಿಂಗ್
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇತ್ತ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣಗೆ ಕಾಯುತ್ತಿದ್ದಾರೆ. ಆದ್ರೆ, ಅತ್ತ ಪ್ರಜ್ವಲ್ ಜರ್ಮನಿಯಿಂದ ವಿಮಾನದ ಟಿಕೆಟ್ ಬುಕ್ ಮಾಡಿ ಮತ್ತೆ ಕ್ಯಾನ್ಸಲ್ ಮಾಡುವ ಮೂಲಕ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಇದೀಗ ಎಚ್ಡಿ ದೇವೇಗೌಡ ಅವರು ಪ್ರತಿಕ್ರಿಯಿಸಿ ಕೂಡಲೇ ವಾಪಸ್ ಬರುವಂತೆ ಪ್ರಜ್ವಲ್ಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, (ಮೇ 23): ಹಾಸನ ಪೆನ್ಡ್ರೈವ್ ಪ್ರಕರಣ (Hassan Pen drive Case) ಸಂಬಂಧ ವಿದೇಶದಲ್ಲಿ ತಲೆಮರಿಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರಿಗೆ ಕೂಡಲೇ ವಿದೇಶದಿಂದ ವಾಪಸ್ ಆಗುವಂತೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು(HD Devegowda) ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆಯ ಬಹಿರಂಗ ಪತ್ರ ಬರೆದಿರುವ ದೇವೇಗೌಡ, ಕೂಡಲೇ ವಾಪಸ್ ಬೆಂಗಳೂರಿಗೆ ಬರುವಂತೆ ಮೊಮ್ಮನಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಪ್ರಜ್ವಲ್ ರೇವಣ್ಣ ನೀನು ಎಲ್ಲೇ ಇದ್ದರೂ ಬಂದು ಪೊಲೀಸರ ಮುಂದೆ ಶರಣಾಗು, ವಿಚಾರಣೆಯನ್ನು ಎದುರಿಸು. ಯಾವುದೇ ಮುಲಾಜಿಲ್ಲದೇ ಮರ್ಜಿಇಲ್ಲದೇ ಬಂದು ಶರಣಾಗು ಎಂದು ಪತ್ರದಲ್ಲಿ ಖಡಕ್ ಆಗಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಅವರ ಚಿಕ್ಕಪ್ಪ ಎಚ್ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಕೈಮುಗಿದು ಮನವಿ ಮಾಡುತ್ತೇನೆ ನನ್ನ ಹಾಗೂ ಎಚ್ಡಿ ದೇವೇಗೌಡರ ಮೇಲೆ ಗೌರವ ಇದ್ದರೆ 24 ಇಲ್ಲಾ 48 ಗಂಟೆಯಲ್ಲಿ ಬಂದು ಶರಣಾಗು ಎಂದು ಪ್ರಜ್ವಲ್ ರೇವಣ್ಣಗೆ ಮನವಿ ಮಾಡಿದ್ದರು. ಆದ್ರೆ, ಪ್ರಜ್ವಲ್ ಮಾತ್ರ ಟಿಕೆಟ್ ಬುಕ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅಜ್ಜ ದೇವೇಗೌಡ ಪ್ರಜ್ವಲ್ಗೆ ಎಚ್ಚರಿಕೆಯ ಬಹಿರಂಗ ಪತ್ರ ಬರೆದಿದ್ದಾರೆ.
ಪ್ರಜ್ವಲ್ಗೆ ದೇವೇಗೌಡ್ರು ಬರೆದ ಎಚ್ಚರಿಕೆ ಪತ್ರದಲ್ಲೇನಿದೆ?
ನಾನು ಮೇ 18ರಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಕುರಿತಾಗಿ ಮಾತನಾಡಿದ್ದೆ. ಆತ ನನಗೆ ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು. ನಾನು ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಹಗರಣ ಹೊರಬಿದ್ದ ಮೊದಲ ದಿನವೇ ಪ್ರತಿಪಾದಿಸಿದ್ದಾರೆ.
I have issued a warning to @iPrajwalRevanna to return immediately from wherever he is and subject himself to the legal process. He should not test my patience any further. pic.twitter.com/kCMuNJOvAo
— H D Deve Gowda (@H_D_Devegowda) May 23, 2024
ವಿರೋಧಿಗಳಿಗೆ ಟಾಂಗ್ ಕೊಟ್ಟ ಎಚ್ಡಿಡಿ
ಈ ಕೆಲವು ವಾರಗಳಿಂದ ಜನರು ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕೆ ಮಾಡಲೂ ಹೋಗುವುದಿಲ್ಲ. ಈ ಹರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂದು ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ. ಪ್ರಜ್ವಲ್ನ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ. ಅವನನ್ನು ರಕ್ಷಿಸುವ ಯಾವುದೇ ಇರಾದೆಯೂ ನನಗಿಲ್ಲ. ಅವನ ಈಗಿನ ಚಲನವಲನ ಮತ್ತು ಅವನ ವಿದೇಶ ಯಾತ್ರೆ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ನಾನು ರಾಜ್ಯದ ಜನರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸುವೆ. ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತಯ ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದಯ ನಾನು ನಂಬಿದ್ದೇನೆ.
ನಾನು ಈಚಿನ ದಿನಗಳಲ್ಲಿ ನಡೆದಿರುವ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉತ್ಟ್ರೆಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಅವುಗಳನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ. ಮತ್ತು ತಾವು ಎಸಗಿದ ಕೃತ್ಯಗಳಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ನಂಬಿದ್ದೇನೆ. ನನ್ನ ಸತ್ಯ ಮತ್ತು ನೋವಿನ ಹೊರೆಯನ್ನು ಭಗವಂತನ ಪದತಳದಲ್ಲಿ ಇರಿಸಿದ್ದೇನೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಮನೆಯವರ ಕಣ್ಣಲ್ಲಿ ಏಕಾಂಗಿಯಾಗಬೇಕಾಗುತ್ತೆ
ಈ ಸಂದರ್ಭದಲ್ಲಿ ನಾನು ಈಗ ಒಂದು ಕೆಲಸವನ್ನಷ್ಟೇ ಮಾಡಬಲ್ಲೆ. ಅದೇನೆಂದರೆ, ಪ್ರಜ್ವಲ್ನು ಎಲ್ಲಿದ್ದರೂ ಬಂದು ಪೊಲೀಸರ ಮುಂದೆ ಶರಣಾಗಿ ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಲು, ಮರ್ಜಿಯಿಲ್ಲದೆ ಹೇಳಬಲ್ಲೇ ಮತ್ತು ಹೇಳುತ್ತಿದ್ದೇನೆ. ಇದು ನಾನು ಅವರಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಕೂಡ ತಿಳಿಯಬೇಕು. ಅವರು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬಸ್ಥರೆಲ್ಲರ ಕೋಪವನ್ನು ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂ ಇದೆ. ಆದ್ರೆ, ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇವಿಲ್ಲ. ನನ್ನ ಬಗ್ಗೆ ಅವನಿಗೆ ಎನಾದರೂ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು.
ಹಸ್ತಕ್ಷೇಪ ಮಾಡುವುದಿಲ್ಲ
ನಾನಾಗಲಿ, ನನ್ನ ಕುಟುಂಬದವರಾಗಲಿ ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ. ಅದರಲ್ಲಿ ಯಾವುದೇ ಭಾವನೆಗೆ ಸಿಲುಕದೆ ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೆ ನನಗೆ ಮುಖ್ಯ. ಜನರ ವಿಶ್ವಾಸವನನ್ನು ಮರಳಿ ಪಡೆಯುವುದಷ್ಟೆ ನನ್ನ ಗುರಿ. ಜನರು ಆರು ದಶಕಗಳ ಕಾಲದ ನನ್ನ ರಾಜಕೀಯ ಜೀವನುದ್ದಕ್ಕೂ ನನ್ನ ಜೊತೆಗೆ ನಿಂತಿದ್ದಾರೆ. ಅವರಿಗೆ ನಾನು ಸದಾ ಋಣಿ ಮತ್ತು ನಾನು ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
Published On - 4:54 pm, Thu, 23 May 24