
ಬೆಂಗಳೂರು, ಸೆಪ್ಟೆಂಬರ್ 16: ಪೆಟ್ರೋಲ್, ಡೀಸೆಲ್ ಖರೀದಿಸುವ ಗ್ರಾಹಕರ ಹಕ್ಕುಗಳ ರಕ್ಷಣೆಗೆ ರಾಜ್ಯ ಸರ್ಕಾರ ಹಲವು ಕ್ರಮಗಳಿಗೆ ಮುಂದಾಗಿದೆ. ಪೆಟ್ರೋಲ್ ಬಂಕ್‌ಗಳ ಕ್ಯಾಲಿಬರೇಷನ್ ಹಾಗೂ ಪರಿಶೀಲನೆಯ ಅವಧಿಯನ್ನು ಸ್ಪಷ್ಟವಾಗಿ ನಮೂದಿಸಿ, ಅದನ್ನು ಡಿಸ್ಪ್ಲೇ ಮೂಲಕ ಸಾರ್ವಜನಿಕರ ಗಮನಕ್ಕೆ ತರುವಂತೆ ಸೂಚಿಸಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ರಾಜ್ಯದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್‌ಗಳಿದ್ದು, ಕಳೆದ ಒಂದು ವಾರದಲ್ಲಿ ಇಲಾಖೆಯ ಅಧಿಕಾರಿಗಳು 805 ಬಂಕ್‌ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 768 ಬಂಕ್‌ಗಳಲ್ಲಿ ಅಳತೆ ವ್ಯತ್ಯಯ ಕಂಡುಬಂದಿದ್ದು, 101 ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
805 ಬಂಕ್‌ಗಳಲ್ಲಿದ್ದ ಒಟ್ಟು 3,071 ಪೆಟ್ರೋಲ್ ಗನ್‌ಗಳ ಪೈಕಿ 2,618 ಗನ್‌ಗಳಲ್ಲಿ ಶಾರ್ಟ್ ಅಳತೆ ಕಂಡುಬಂದಿದೆ ಎಂದು ಸಚಿವರು ಹೇಳಿದರು. ನಿಯಮಾನುಸಾರ ಶೇ 0.5ರಷ್ಟು ವ್ಯತ್ಯಾಸಕ್ಕೆ ಅವಕಾಶವಿದ್ದರೂ, ಕೆಲವು ಕಡೆ ಇದಕ್ಕಿಂತ ಹೆಚ್ಚಿನ ವ್ಯತ್ಯಾಸ ಕಂಡುಬಂದಿದೆ. ಮೂರು ಬಂಕ್‌ಗಳಲ್ಲಿ 10 ಮಿಲಿಲೀಟರ್‌ಗಿಂತಲೂ ಹೆಚ್ಚು ವ್ಯತ್ಯಾಸ ಕಂಡುಬಂದಿದೆ ಎಂದು ಅವರು ತಿಳಿಸಿದರು.
ಪೆಟ್ರೋಲ್ ಬಂಕ್‌ಗಳ ಮಾಲೀಕರು ಪ್ರತಿದಿನ ಪೆಟ್ರೋಲ್ ಗನ್‌ಗಳ ಅಳತೆಯನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗುವುದು. ಗ್ರಾಹಕರಿಗೆ ಅಳತೆಯ ಬಗ್ಗೆ ಅನುಮಾನ ಬಂದರೆ, ನಿಗದಿತ ಮಾಪಕಗಳ ಮೂಲಕ ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗುವುದು. ಬಂಕ್‌ಗಳಲ್ಲಿ ಸೂಕ್ತ ಶುಚಿತ್ವ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆಯೂ ಸೂಚನೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಕೇಂದ್ರ ಸರ್ಕಾರದ ಕ್ಯಾಲಿಬರೇಷನ್‌ಗೆ ಸಂಬಂಧಿಸಿದ ಎರಡು ಅಧಿಸೂಚನೆಗಳಿಗೆ ರಾಜ್ಯ ಸರ್ಕಾರದ ಆಕ್ಷೇಪವಿದೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು. ಈ ಹಿಂದೆ ವರ್ಷಕ್ಕೊಮ್ಮೆ ಕ್ಯಾಲಿಬರೇಷನ್ ಮಾಡಿಸಬೇಕಿದ್ದ ನಿಯಮವನ್ನು ಎರಡು ವರ್ಷಕ್ಕೊಮ್ಮೆ ಮಾಡುವಂತೆ ಬದಲಾವಣೆ ಮಾಡಲಾಗಿದೆ. ಅಲ್ಲದೆ, ಪೆಟ್ರೋಲ್ ಗನ್‌ಗಳ ಕ್ಯಾಲಿಬರೇಷನ್ ಅನ್ನು ಖಾಸಗಿಯವರು ಮಾಡಬಹುದು ಎಂಬ ಮತ್ತೊಂದು ಅಧಿಸೂಚನೆಯೂ ಬಂದಿದೆ ಎಂದು ಸಚಿವರು ಹೇಳಿದರು.
ಖಾಸಗಿಯವರು ಕ್ಯಾಲಿಬರೇಷನ್ ಮಾಡಿದರೆ ಅದರ ವಿಶ್ವಾಸಾರ್ಹತೆ ಹೇಗೆ ಖಚಿತಪಡಿಸಿಕೊಳ್ಳಬೇಕು ಎಂಬ ಪ್ರಶ್ನೆ ಇದೆ. ಪೆಟ್ರೋಲ್ ಬಂಕ್ ಮಾಲೀಕರು ತಮಗೆ ಪರಿಚಯವಿರುವವರಿಂದ ಸರ್ಟಿಫಿಕೇಟ್ ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗಬಹುದು ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಈ ಎರಡು ಅಧಿಸೂಚನೆಗಳನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಪೆಟ್ರೋಲ್ ಬಂಕ್‌ಗಳಲ್ಲಿ ಅಳತೆ, ಗುಣಮಟ್ಟ, ಶುಚಿತ್ವ ಅಥವಾ ಇತರ ಯಾವುದೇ ಸಮಸ್ಯೆಗಳಿದ್ದರೆ ಸಾರ್ವಜನಿಕರು 18005991100 ಟೋಲ್‌ಫ್ರೀ ಸಂಖ್ಯೆಗೆ ದೂರು ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ