ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಬಳಿಕ ಮಾಜಿ ಅಧ್ಯಕ್ಷ ಸಾವು
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ನಿನ್ನೆ (ಅಕ್ಟೋಬರ್ 19) ಹೊರಬಿದ್ದಿದ್ದು, 29 ವರ್ಷದ ಬಳಿಕ ಜಾರಕಿಹೊಳಿ ಬ್ರದರ್ಸ್ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ ಈ ಗೆಲುವಿನ ಸಂಭ್ರಮಾಚರಣೆಯಲ್ಲಿ ದುರಂತ ಘಟನೆಯೊಂದು ನಡೆದು ಹೋಗಿದೆ.

ಬೆಳಗಾವಿ, (ಅಕ್ಟೋಬರ್ 20): ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ (Belagavi DCC Bank Election Result 2025) ನಿನ್ನೆ (ಅಕ್ಟೋಬರ್ 19) ಪ್ರಕಟಗೊಂಡಿದ್ದು, ಇದರಲ್ಲಿ ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಶಾಸಕ ಅಶೋಕ ಪಟ್ಟಣ ಅವರ ಆಪ್ತ ಮಲ್ಲಣ್ಣ ಯಾದವಾಡ ಅವರು ಗೆಲುವು ಸಾಧಿಸಿದ್ದಾರೆ. ಆದ್ರೆ, ಈ ಗೆಲುವಿನ ಸಂಭ್ರಮಾಚರಣೆ ಬಳಿಕ ಪಿಕೆಪಿಎಸ್ ಮಾಜಿ ಅಧ್ಯಕ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕ ಅಶೋಕ್ ಪಟ್ಟಣ ಆಪ್ತ ಗಿರಿಯಪ್ಪ ಗಂಟೋಟಿ(40) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಮಕೇರಿ ನಿವಾಸಿಯಾಗಿದ್ದ ಗಿರಿಯಪ್ಪ, ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಪರವಾಗಿ ಶಾಸಕ ಅಶೋಕ ಪಟ್ಟಣ ಜೊತೆಗೂಡಿ ಪ್ರಚಾರ ಮಾಡಿದ್ದರು. ಆದ್ರೆ, ಗೆಲುವಿನ ಸಂಭ್ರಮದಲ್ಲೇ ದುರಂತ ಸಾವು ಕಂಡಿದ್ದಾರೆ.
ಇದನ್ನೂ ಓದಿ: 29 ವರ್ಷದ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ ಸಿಕ್ಕಿದೆ: ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ಎಂದ ಜಾರಕಿಹೊಳಿ
ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಅವರ ಪರ ಪ್ರಚಾರ ಮಾಡಿದ್ದ ಗಿರಿಯಪ್ಪ ಗಂಟೋಟಿ, ಫಲಿತಾಂಶದ ದಿನವಾದ ನಿನ್ನೆ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು. ಆದರೆ, ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಮದುರ್ಗ ಮತ್ತು ಬೆಳಗಾವಿಯಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ. ಚುನಾವಣೆ ಗೆಲುವಿನ ಸಂಭ್ರಮದಲ್ಲಿದ್ದವರಿಗೆ ಇದು ಕಂಬನಿ ಮಿಡಿಯುವಂತೆ ಮಾಡಿದೆ.



