
ನವದೆಹಲಿ, ಸೆಪ್ಟೆಂಬರ್ 23: ಉಡುಪಿಯ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯ ಪ್ರಧಾನಿಯವರ ನಿವಾಸದಲ್ಲಿ ಭೇಟಿಯಾದರು. ಇದೇ ವೇಳೆ, ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ (ಜನ್ಮ ಶತಾಬ್ದ ಪಂಚವಾರ್ಷಿಕ ಯೋಜನೆ) ಆಚರಣೆಯ ಲಾಂಛನವನ್ನು ಅನಾವರಣಗೊಳಿಸಲಾಯಿತು. ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ.
‘ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದೆ. ಪದ್ಮವಿಭೂಷಣ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಆಚರಣೆಯ ಲಾಂಛನವನ್ನು ಅನಾವರಣಗೊಳಿಸಲಾಯಿತು. ಭಕ್ತಿ, ಜ್ಞಾನ ಮತ್ತು ಸೇವೆಯಿಂದ ಕೂಡಿದ ಅವರ ಜೀವನವು ಅಸಂಖ್ಯಾತ ಜನರಿಗೆ ನಿರಂತರ ಸ್ಫೂರ್ತಿಯಾಗಿದೆ. ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಚಟುವಟಿಕೆಗಳು ಅವರ ಉದಾತ್ತ ಆದರ್ಶಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಿವೆ’ ಎಂದು ಪ್ರಧಾನಿ ಮೋದಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ಯಕ್ಷಗಾನ ಕಿರೀಟ ತೊಡಿಸಿ ಸ್ವಾಮೀಜಿಯವರಿಂದ ಗೌರವ
ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದೆ.
ಪದ್ಮವಿಭೂಷಣ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಆಚರಣೆಯ ಲಾಂಛನವನ್ನು ಅನಾವರಣಗೊಳಿಸಲಾಯಿತು. ಭಕ್ತಿ, ಜ್ಞಾನ ಮತ್ತು ಸೇವೆಯಿಂದ ಕೂಡಿದ ಅವರ ಜೀವನವು ಅಸಂಖ್ಯಾತ ಜನರಿಗೆ ನಿರಂತರ… pic.twitter.com/5nSGTzQD5i
— Narendra Modi (@narendramodi) September 22, 2026
ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್, ನವದೆಹಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ 32ನೇ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾರ್ಗದರ್ಶಕರಾಗಿದ್ದವರು. ಸಮಾಜ ಸುಧಾರಣೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶ್ರೀಗಳು ದಲಿತರ ಕೇರಿಗಳಿಗೆ ಭೇಟಿ ನೀಡಿ, ಅವರಿಗೆ ವೈಷ್ಣವ ದೀಕ್ಷೆ ನೀಡುವ ಮೂಲಕ ಸಮಾಜದ ತುಳಿತಕ್ಕೊಳಗಾದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಕೇವಲ ಮಠದ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಸಾಮಾಜಿಕ ಕಳಕಳಿ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ನದಿಗಳ ಸ್ವಚ್ಛತೆ (ಗಂಗಾ ಅಭಿಯಾನ) ಹಾಗೂ ಗೋರಕ್ಷಣೆಯಂತಹ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಹಿರಿಯ ನಾಯಕರೊಂದಿಗೆ ಅತ್ಯಂತ ನಿಕಟ ಬಾಂಧವ್ಯ ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 1992ರ ರಾಷ್ಟ್ರೀಯ ಏಕತಾ ಯಾತ್ರೆಯ ಕಾಲದಿಂದಲೂ ಆಪ್ತ ಸಂಬಂಧ ಕಾಯ್ದುಕೊಂಡಿದ್ದರು. ಶ್ರೀಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಮಾರ್ಗದರ್ಶಕರಂತೆ ಗೌರವಿಸುತ್ತಿದ್ದರು.
ಇದನ್ನೂ ಓದಿ: ಭಕ್ತರ ಒತ್ತಾಯಕ್ಕೆ ಉಯ್ಯಾಲೆಯಲ್ಲಿ ಕೂತು ಸಂತಸಪಟ್ಟ ಪೇಜಾವರ ಶ್ರೀಗಳು
ಅಯೋಧ್ಯೆಯ ರಾಮಜನ್ಮಭೂಮಿ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಪೇಜಾವರ ಶ್ರೀಗಳು, ವಿಶ್ವ ಹಿಂದೂ ಪರಿಷತ್‌ನ ಧರ್ಮ ಸಂಸದ್ ಮತ್ತು ರಾಮಜನ್ಮಭೂಮಿ ನ್ಯಾಸದ ಪ್ರಮುಖ ಟ್ರಸ್ಟಿಯಾಗಿ ಸಕ್ರಿಯ ಪಾತ್ರ ವಹಿಸಿದ್ದರು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಜೀವನದ ಮಹದಾಸೆ ಎಂದು ಅವರೇ ಹೇಳಿಕೊಂಡಿದ್ದರು. ಇದೀಗ ಶ್ರೀಗಳ ಜನ್ಮ ಶತಮಾನೋತ್ಸವ ಆಚರಣೆಯ ಲಾಂಛನವನ್ನು ಪ್ರಧಾನಿ ಅನಾವರಣಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 am, Wed, 23 September 26