
ಬೆಂಗಳೂರು, ನವೆಂಬರ್ 2: ಸಿಲಿಕಾನ್ ಸಿಟಿಯ ಸಂಚಾರದ ಜೀವನಾಡಿ ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ ದಿನಾಂಕ ಬದಲಾಗಿದೆ. ಈ ಮೊದಲು ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಎಂದು ಸ್ವತಃ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಆದ್ರೆ, ಇದೀಗ ನವೆಂಬರ್ 15ರ ಬದಲಾಗಿ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಲಾಬಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ಪಿಂಕ್ ಲೈನ್ ಕಳೆದ ಆರು ತಿಂಗಳಿಂದ ಉದ್ಘಾಟನೆ ಆಗಲಿದೆ ಎಂದು ಹೇಳಿಕೊಂಡು ಬರುಲಾಗುತ್ತಿದೆ. ಆದರೆ ಉದ್ಘಾಟನೆ ಆಗಿರಲಿಲ್ಲ. ರೈಲುಗಳಿಗೆ ನಿಯಮಾನುಸವಾರಗಿ ಅನುಮೋದನೆ ಪಡೆಯೋದು ವಿಳಂಬಕ್ಕೆ ಕಾರಣವಾಗಿತ್ತು. ಆದ್ರೆ, ಇದೀಗ ಉದ್ಗಾಟನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ಉದ್ಘಾಟನೆ ಮಾಡಲಿದ್ದಾರೆ. 7.5 ಕಿ.ಮೀ ಮಾರ್ಗ ಇದಾಗಿದ್ದು, ಆರಂಭದಲ್ಲಿ ಆರು ರೈಲುಗಳನ್ನು ಕಾರ್ಯಾಚರಣೆಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಂಸ್ಥೆ ಪ್ಲಾನ್ ಮಾಡಿದೆ.
ಈಗಾಗಲೇ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ (CMRS) ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ತಾಂತ್ರಿಕವಾಗಿ ಮಾರ್ಗ ಸಿದ್ಧವಾಗಿದ್ದು, ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ವೇಳಾಪಟ್ಟಿ ಮತ್ತು ಕಾರ್ಯಕ್ರಮದ ವಿವರಗಳು ಶೀಘ್ರದಲ್ಲೇ ಪ್ರಕಟವಾಗಲಿದೆ.
ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕ ಕಲ್ಪಿಸುವ ಈ ಮಾರ್ಗವು 21.26 ಕಿ.ಮೀ. ಉದ್ದ ಹೊಂದಿದ್ದು, ಇದರಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದೆ. ಸದ್ಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎಲಿವೇಟೆಡ್ ವಿಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಇತ್ತೀಚೆಗೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಕ್ಲಿಯರೆನ್ಸ್ ಸಹ ಸಿಕ್ಕಿದೆ. ಹೀಗಾಗಿ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ರೈಲು ಸಂಚಾರ ಆರಂಭವಾಗಲಿದೆ. ಉದ್ಘಾಟನೆಗೆ ಸಿದ್ಧವಾಗಿರುವ ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಹಳದಿ ಮತ್ತು ಗುಲಾಬಿ ಮಾರ್ಗಗಳ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣ) ತಾವರೆಕೆರೆ ಸೇರಿ 6 ನಿಲ್ದಾಣಗಳು ಇವೆ.
ಈ ಮಾರ್ಗ ಕಾರ್ಯಾರಂಭಗೊಂಡರೆ ಬನ್ನೇರುಘಟ್ಟ ರಸ್ತೆ, ಐಐಎಂಬಿ, ಜೆಪಿ ನಗರ ಹಾಗೂ ಜಯದೇವ ಆಸ್ಪತ್ರೆ ಭಾಗದ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಈ ಭಾಗದಲ್ಲಿ ಫುಲ್ ಟ್ರಾಫಿಕ್ ಆಗುವುದು ಸಾಮಾನ್ಯವಾಗಿದೆ. ಅದರಲ್ಲೂ ಮಳೆ ಬಂತಂದರೆ ಸಾಕು ಕಿಲೋಮೀಟರ್ ಗಟ್ಟಲೇ ಸಂಚಾರ ದಟ್ಟಣೆಯಾಗುತ್ತದೆ. ಆದ್ರೆ, ಇದೀಗ ಮೆಟ್ರೋ ಆರಂಭವಾದರೆ ಕೊಂಚ ಟ್ರಾಫಿಕ್ನಿಂದ ಮುಕ್ತಿ ಸಿಗಬಹುದು.