ಕರ್ನಾಟಕದ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ನರೇಂದ್ರ ಮೋದಿ ಸಂವಾದ; ಪ್ರಚಾರ ತಂತ್ರಗಳೇಗಿರಬೇಕು ಎಂದು ತಿಳಿಸಿದ ಪ್ರಧಾನಿ

|

Updated on: Apr 05, 2024 | 5:41 PM

Narendra Modi live interaction with BJP booth level workers: ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 5ರಂದು ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯಕರ್ತರ ಜೊತೆ ಲೈವ್ ಆಗಿ ಸಂವಹನ ನಡೆಸಿದರು. ನಮೋ ಆ್ಯಪ್​ನಲ್ಲಿ ಈ ನೇರ ಕಾರ್ಯಕ್ರಮ ಇತ್ತು. ವಿವಿಧ ಜಿಲ್ಲೆಗಳ ಕೆಲ ಬೂತ್ ಮಟ್ಟದ ಕಾರ್ಯಕರ್ತರು ಈ ವೇಳೆ ಪ್ರಧಾನಿ ಜೊತೆ ಸಂವಾದ ನಡೆಸಿದರು. ಬೂತ್ ಮಟ್ಟದಲ್ಲಿ ಯಾವ ರೀತಿ ಪ್ರಚಾರ ಮಾಡಬೇಕು, ಪ್ರತಿಯೊಬ್ಬ ಮತದಾರರನ್ನು ಯಾವ ರೀತಿ ತಲುಪಬೇಕು ಇತ್ಯಾದಿ ಹಲವು ಅಂಶಗಳ ಬಗ್ಗೆ ಪ್ರಧಾನಿ ಸಾಕಷ್ಟು ಟಿಪ್ಸ್ ನೀಡಿದ್ದಾರೆ.

ಕರ್ನಾಟಕದ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ನರೇಂದ್ರ ಮೋದಿ ಸಂವಾದ; ಪ್ರಚಾರ ತಂತ್ರಗಳೇಗಿರಬೇಕು ಎಂದು ತಿಳಿಸಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ
Follow us on

ಬೆಂಗಳೂರು, ಏಪ್ರಿಲ್ 5: ಪ್ರಧಾನಿ ನರೇಂದ್ರ ಮೋದಿ ಇಂದು ಶುಕ್ರವಾರ ಕರ್ನಾಟಕದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು. ನಮೋ ಆ್ಯಪ್ ಪ್ಲಾಟ್​ಫಾರ್ಮ್​ನಲ್ಲಿ ಲೈವ್ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರು ಮೋದಿ ಅವರ ಜೊತೆ ಮಾತನಾಡಿದರು. ಈ ವೇಳೆ ನರೇಂದ್ರ ಮೋದಿ ಅವರು ಕಾರ್ಯಕರ್ತರಿಗೆ ಪಕ್ಷದ ಪ್ರಚಾರ ತಂತ್ರಗಳನ್ನು ತಿಳಿಸಿಕೊಟ್ಟರು. ಹಾಗೆಯೇ, ಬೂತ್ ಮಟ್ಟದಲ್ಲಿ ಚುನಾವಣಾ ಪ್ರಚಾರ ಯಾವ ರೀತಿಯಲ್ಲಿ ಸಾಗುತ್ತಿದೆ ಎಂಬುದನ್ನು ವಿಚಾರಿಸಿದರು.

ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆಗೆ ಮುಂದಿಡುತ್ತಿದ್ದೀರಾ? ಬೂತ್​ನಲ್ಲಿ ಎಲ್ಲಾ ಚುನಾವಣಾ ಸಾಮಗ್ರಿಗಳು ತಲುಪಿವೆಯಾ? ಪೇಜ್ ಲೀಡರ್​ಗಳಿಗೆ ಹೇಗೆ ಕೆಲಸ ಹಂಚಲಾಗಿದೆ? ಪನ್ನಾ ಪ್ರಮುಖರು ಎಲ್ಲಾ ಮನೆಗಳಿಗೆ ಹೋಗಿದ್ದಾರಾ? ವೋಟರ್ಸ್ ಲಿಸ್ಟ್​ನಲ್ಲಿರುವ ಮನೆಗಳಲ್ಲಿ ಮತದಾರರು ಯಾರಿದ್ದಾರೆ? ಪಟ್ಟಿಯಲ್ಲಿದ್ದವರಲ್ಲಿ ಯಾರು ಇಲ್ಲ ಇವೆಲ್ಲಾ ಮಾಹಿತಿ ಸಂಗ್ರಹಿಸುತ್ತಿದ್ದೀರಾ? ಎಂಬೆಲ್ಲಾ ಪ್ರಶ್ನೆಗಳನ್ನು ಮತ್ತು ಮಾಹಿತಿಯನ್ನು ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕೇಳಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಸುಮಲತಾ ಅಂಬರೀಶ್, ಕ್ರಿಕೆಟಿಗ ದೊಡ್ಡ ಗಣೇಶ್​​​ ಬಿಜೆಪಿ ಸೇರ್ಪಡೆ

ಎಲ್ಲಾ ಮತದಾರರನ್ನು ಭೇಟಿ ಮಾಡಬೇಕು. ಎಲ್ಲಾ ಮತದಾರರ ಜೊತೆ ಒಂದೇ ರೀತಿಯಲ್ಲಿ ಮಾತನಾಡಬಾರದು. ವಿವಿಧ ವರ್ಗದ ಮತದಾರರೊಂದಿಗೆ ಯಾವ್ಯಾವ ರೀತಿಯಲ್ಲಿ ಮಾತನಾಡಬೇಕು ಎಂಬುದನ್ನು ತಿಳಿದಿರಬೇಕು. ಸಾಮಾನ್ಯ ಮತದಾರರಿಗೆ ಅವರಿಗೆ ತಿಳಿಯುವ ರೀತಿಯಲ್ಲಿ ಮಾಹಿತಿ ನೀಡಬೇಕು. ಫಲಾನುಭವಿಗಳೊಂದಿಗೆ ಬೇರೆ ರೀತಿಯಲ್ಲಿ ಸಂವಹನ ನಡೆಸಬೇಕು. ಹೇಗೆ ಮಾತನಾಡಬೇಕು ಎಂದು ಮೊದಲೇ ಒಂದು ಡೈರಿ ಮೈಂಟೇನ್ ಮಾಡಬೇಕು ಎಂದು ಬೂಟ್ ಮಟ್ಟದ ಕಾರ್ಯಕರ್ತರಿಗೆ ಮೋದಿ ಸಲಹೆ ನೀಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಯಾವ ರೀತಿ ವಿಫಲವಾಗಿದೆ, ಎಷ್ಟು ಭ್ರಷ್ಟಾಚಾರ ಎಸಗುತ್ತಿದೆ ಎಂಬುದನ್ನು ಮತದಾರರಿಗೆ ತಿಳಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇರುವುದು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಿ. ಎರಡೂ ಪಕ್ಷಗಳ ಕಾರ್ಯಕರ್ತರ ಜೊತೆ ಸಮನ್ವಯ ಸಭೆ ನಡೆಯಬೇಕು ಎಂದೂ ಪ್ರಧಾನಿಗಳು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ತಿಳಿಹೇಳಿದರು.

ಕೇಂದ್ರ ಸರ್ಕಾರ ಇಷ್ಟೆಲ್ಲಾ ಕೆಲಸ ಮಾಡಿದರೂ ಏನೂ ಮಾಡಿಯೇ ಇಲ್ಲ ಎಂದು ನೆಗಟಿವ್ ಆಗಿ ಹೇಳುವ ಜನರಿರುತ್ತಾರೆ. ನೀವು ಸರ್ಕಾರದ ಸಾಧನೆಗಳೇನು ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ಚುನಾವಣಾ ಪ್ರಚಾರ ಮಾಡುವುದು ಒಂದು ಕೆಲಸವಾದರೆ, ಮತದಾರರ ಬೆಂಬಲ ಗಟ್ಟಿಗೊಳಿಸುವುದೂ ಮತ್ತೊಂದು ಮಹತ್ವದ ಕೆಲಸ ಎಂದರು.

ಇದನ್ನೂ ಓದಿ: ಬರ ಪರಿಹಾರದಿಂದ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಟ್ಟ ಸಿದ್ದರಾಮಯ್ಯ: ವಿಜಯೇಂದ್ರ ಗಂಭೀರ ಆರೋಪ

ಇದೇ ವೇಳೆ, ಉಡುಪಿಯ ಕಾರ್ಯಕರ್ತರೊಬ್ಬರ ಜೊತೆ ಮಾತನಾಡುತ್ತಾ ನರೇಂದ್ರ ಮೋದಿ ಅವರು ಉಡುಪಿ ಹಾಗು ತಮಗೆ ಇರುವ ಅನನ್ಯ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದರು. ಉಡುಪಿಯಲ್ಲಿರುವ ಶ್ರೀಕೃಷ್ಣನ ಮೂರ್ತಿಯು ಸಮುದ್ರದಲ್ಲಿ ಮುಳುಗಿರುವ ದ್ವಾರಕಾದಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಹಾಗೆಯೇ ಉಡುಪಿಯ ಪೇಜಾವರ ಶ್ರೀಗಳಾಗಿದ್ದ ವಿಶ್ವೇಶತೀರ್ಥ ಜೊತೆ ತನಗೆ ಆಪ್ತ ಸಂಬಂಧ ಇತ್ತು ಎಂದಿದ್ದಾರೆ.

ಮೈಸೂರು, ಬೆಳಗಾವಿ, ಶಿವಮೊಗ್ಗ, ಉಡುಪಿ ಇತ್ಯಾದಿ ವಿವಿಧ ಜಿಲ್ಲೆಗಳ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಪ್ರಧಾನಿಗಳು ಈ ಸಂವಾದ ನಡೆಸಿದರು.

ಕರ್ನಾಟಕದಲ್ಲಿ ಎಪ್ರಿಲ್ 26 ಮತ್ತು ಮೇ 7ರಂದು ತಲಾ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜೂನ್ 5ಕ್ಕೆ ಮತ ಎಣಿಕೆ ಆಗಲಿದೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Fri, 5 April 24