ಬೆಂಗಳೂರಲ್ಲಿ ಆಕ್ಸಿಜನ್ ಪ್ಲಾಂಟ್ ಸೋರಿಕೆ; ಪೊಲೀಸರು ಹಾಗೂ ಸೋನುಸೂದ್ ಟ್ರಸ್ಟ್ ಸದಸ್ಯರ ಸಮಯಪ್ರಜ್ಞೆಯಿಂದ ನಿಂತ ಅವಘಡ
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತಡಮಾಡದೇ ಧಾವಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಪರಿಣಾಮ ಆಸ್ಪತ್ರೆಯಲ್ಲಿದ್ದ 30ಕ್ಕೂ ಹೆಚ್ಚು ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಆಕ್ಸಿಜನ್ ಕೊರತೆಯಅಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಗಲ ಮೇಲಿದ್ದರೆ ಇನ್ನೊಂದೆಡೆ ಪರಿಸ್ಥಿತಿ ಕೈ ಮೀರಿ ಅಕ್ಸಿಜನ್ ಸೋರಿಕೆಯಂತಹ ದುರ್ಘಟನೆಗಳು ಸಂಭವಿಸುತ್ತಿವೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಶ್ರೇಯಸ್ ಆಸ್ಪತ್ರೆಯಲ್ಲಿಯೂ ನಿನ್ನೆ (ಮೇ 12) ತಡರಾತ್ರಿ ಆಕ್ಸಿಜನ್ ಪ್ಲಾಂಟ್ ಸೋರಿಕೆಯಾಗಿದೆ. ಆದರೆ, ಅದೃಷ್ಟವಶಾತ್ ಆಸ್ಪತ್ರೆ ಸಿಬ್ಬಂದಿ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿಹೋಗಿದೆ.
ಆಸ್ಪತ್ರೆಯ ಪ್ಲಾಂಟ್‌ನಿಂದ ಆಕ್ಸಿಜನ್ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಜತೆಗೆ, ಸೋನುಸೂದ್ ಚಾರಿಟಬಲ್ ಟ್ರಸ್ಟ್‌ಗೂ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತಡಮಾಡದೇ ಧಾವಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಪರಿಣಾಮ ಆಸ್ಪತ್ರೆಯಲ್ಲಿದ್ದ 30ಕ್ಕೂ ಹೆಚ್ಚು ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದ ಕೂಡಲೇ 6 ಜಂಬೋ ಸಿಲಿಂಡರ್ ತಂದು ಆಸ್ಪತ್ರೆಗೆ ಕೊಟ್ಟ ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಬಳಿಕ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಲೀಕೇಜ್ ದುರಸ್ತಿ ಮಾಡಿಸಿದ್ದಾರೆ. ಎಸಿಪಿ ರೀನಾ ಸುವರ್ಣ ಮತ್ತು ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸಮಯಪ್ರಜ್ಞೆಯಿಂದ ಆಸ್ಪತ್ರೆಯಲ್ಲಿ ಘಟಿಸಬಹುದಾಗಿದ್ದ ದುರಂತ ತಪ್ಪಿಹೋಗಿದ್ದು ವೈದ್ಯರಾದಿಯಾಗಿ ಇಡೀ ಆಸ್ಪತ್ರೆ ಸಿಬ್ಬಂದಿ ವರ್ಗದವರು ಸಹಾಯ ಹಸ್ತ ಚಾಚಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ.
ಇದನ್ನೂ ಓದಿ: ರೆಮಿಡಿಸಿವರ್ ಚುಚ್ಚುಮದ್ದು ಈಗಲೇ ತಲುಪಲಿದೆ! ರೈನಾ ಬಳಿಕ ಹರ್ಭಜನ್ ಬೇಡಿಕೆಗೆ ಸೋನು ಸೂದ್ ನೆರವು