
ಬೆಂಗಳೂರು, (ಜೂನ್ 02): ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಗರದ ಎಲ್ಲಾ ಜಂಟಿ ಪೊಲೀಸ್ ಆಯುಕ್ತರು, ಲಾ ಅಂಡ್ ಆರ್ಡರ್ ಡಿಸಿಪಿಗಳು ಹಾಗೂ ಟ್ರಾಫಿಕ್ ಡಿಸಿಪಿಗಳ ಜೊತೆ ಸಭೆ ನಡೆಸಿ ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಜೂನ್ 03ರ ಸಂಜೆ 4.05ಕ್ಕೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭಾರಿ ಪ್ರಮಾಣದ ಭದ್ರತೆ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕೆಲ ಸಲಹೆ ಸೂಚೆನಗಳನ್ನ ನೀಡಲಾಗಿದೆ.
ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.ಆಗಮಿಸುವ ಅತಿಥಿಗಳಿಗೆ ಪ್ರತ್ಯೇಕ ಪಾಸ್‌ಗಳನ್ನು ವಿತರಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿ ಪೊಲೀಸ್ ಇಲಾಖೆ ಪಡೆದುಕೊಂಡಿದೆ. ಹೊರ ರಾಜ್ಯಗಳಿಂದಲೂ ಹಲವು ಗಣ್ಯರು ಹಾಗೂ ವಿಐಪಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರ ಭದ್ರತೆಗೂ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜೂನ್ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ನಿರ್ಬಂಧಿತ ರಸ್ತೆಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.ನೂತನ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಪೊಲೀಸರು, ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.