ಮಂಗಳೂರು ಪೊಲೀಸರ ರಹಸ್ಯ ಕಾರ್ಯಚಾರಣೆ; ಬಯಲಾಯ್ತು ಕಾಮುಕರ ಕರ್ಮಕಾಂಡ
ಇನ್ನು ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಲಾಯಿತು. ಒಂದಷ್ಟು ಪ್ರಶ್ನಾವಳಿಯನ್ನು ಕೊಟ್ಟು ಮಕ್ಕಳಿಂದ ಉತ್ತರ ಪಡೆಯಲಾಯಿತು. ಆಯ್ದ ಕಿರುಚಿತ್ರಗಳನ್ನು ತೋರಿಸಿ ಲೈಂಗಿಕ ಕಿರುಕುಳ ಎಂದರೆ ಏನು?ಅದನ್ನು ಎದುರಿಸುವುದು ಹೇಗೆ?. ಲೈಂಗಿಕ ಕಿರುಕುಳ ನೀಡಿದಾಗ ಏನು ಮಾಡಬೇಕು. ಏನೇನು ಜಾಗೃತೆ ವಹಿಸಬೇಕು ಎನ್ನವುದರ ಬಗ್ಗೆ ಹೇಳಿಕೊಡಲಾಯಿತು.
ದಕ್ಷಿಣ ಕನ್ನಡ: ನಮ್ಮ ಸಮಾಜ ಅದೆಲ್ಲಿಗೆ ಹೋಗಿ ಮುಟ್ಟುತ್ತಿದೆ ಎನ್ನುವುದು ಗೊತ್ತಿಲ್ಲ. ಏಕೆಂದರೆ ಸಮಾಜದಲ್ಲಿ ರಕ್ಷಕರೆ ಭಕ್ಷಕರಾಗುತ್ತಿದ್ದಾರೆ. ನೆಲೆ ಇಲ್ಲದ, ಪೋಷಕರಿಲ್ಲದ, ರಕ್ಷಕರಿಲ್ಲದ ಮಕ್ಕಳನ್ನು ಸಾಕುವ ಚೈಲ್ಡ್ ಕೇರ್ ಸೆಂಟರ್ಗಳೇ ಮಕ್ಕಳ ಮೇಲೆ ದೌರ್ಜನ್ಯವನ್ನು ಎಸಗುತ್ತಿವೆ. ಇಂತಹದ್ದೊಂದು ಕಾಮುಕರ ಕತ್ತಲೆ ಪುರಾಣವನ್ನು ರಹಸ್ಯ ಕಾರ್ಯಾಚರಣೆ ಮಾಡುವ ಮೂಲಕ ಮಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ. ಮಂಗಳೂರಿನ ರೋಶಿನಿ ನಿಲಯ ಎಂಬ ಮಹಿಳಾ ಸಂಸ್ಥೆ, ಆಪ್ತ ಸಮಾಲೋಚಕರು ಮತ್ತು ದೇರಳಕಟ್ಟೆ ಮನೋವೈದ್ಯ ಕೆ.ಎಸ್.ಹೆಗ್ಡೆ ಈ ಕಾರ್ಯಾಚರಣೆಯಲ್ಲಿ ರಹಸ್ಯವಾಗಿ ಕಾಮುಕರ ಹೆಡೆಮುರಿ ಕಟ್ಟುವ ಕೆಲಸ ಮಾಡಿದ್ದಾರೆ.
ಅರಿವು-ನೆರವು ಕಾರ್ಯಗಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಅವರು ಮಾರ್ಚ್ 28 ರಂದು ಮಂಗಳೂರಿನ ಟಿಎಂಎ ಪೈ ಹಾಲ್ನಲ್ಲಿ ಅರವು-ನೆರವು ಎಂಬ ಕಾರ್ಯಗಾರವನ್ನು ಮಾಡಿದ್ದರು. ಈ ಕಾರ್ಯಗಾರದಲ್ಲಿ ಮಂಗಳೂರಿನ ಹಲವು ಚೈಲ್ಡ್ ಕೇರ್ ಸೆಂಟರ್ಗಳನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ಕೋವಿಡ್ ಜಾಗೃತಿ ಮೂಡಿಸುವುದು ಎಂಬುದಾಗಿತ್ತು. ಅದರಂತೆ ಕೋವಿಡ್ ಜಾಗೃತಿಯನ್ನು ಮೂಡಿಸಲಾಯಿತು.
ಆದರೆ ಈ ಕಾರ್ಯಗಾರದ ಮೂಲ ಉದ್ದೇಶವಿದ್ದಿದ್ದು, ಮಾತ್ರ ಕಾಮುಕರನ್ನು ಖೆಡ್ಡಾಕ್ಕೆ ಕೆಡವುದಾಗಿತ್ತು. ಚೈಲ್ಡ್ ಕೇರ್ ಸೆಂಟರ್‌ಗಳಲ್ಲಿ ತಂದೆ ತಾಯಿಯಿಲ್ಲದ ಅನಾಥ ಮಕ್ಕಳು, ಕೌಟುಂಬಿಕ ಸಮಸ್ಯೆಗಳಿಂದ ಅನಾಥರಾಗಿರುವ ಮಕ್ಕಳು ಇರುತ್ತಾರೆ. ಈ ಮಕ್ಕಳನ್ನು ಜವಬ್ದಾರಿಯುತವಾಗಿ ಆರೈಕೆ ಮಾಡಬೇಕಾದ ಕರ್ತವ್ಯ ಈ ಚೈಲ್ಡ್ ಕೇರ್ ಸೆಂಟರ್‌ಗಳದ್ದು, ಆದರೆ ಮಂಗಳೂರಿನ ಕೆಲ ಚೈಲ್ಡ್ ಕೇರ್ ಸೆಂಟರ್‌ಗಳಲ್ಲೇ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಮಂಗಳೂರು ನಗರ ಪೊಲೀಸರಿಗೆ ಅನುಮಾನ ಬಂದಿತ್ತು. ಆದರಂತೆ ಕಮೀಷನರ್ ಶಶಿಕುಮಾರ್ ನೇತೃತ್ವದಲ್ಲಿ ನಡೆದ ರಹಸ್ಯ ಕಾರ್ಯಾಚರಣೆ ಇದಾಗಿತ್ತು.
ಡಿಸಿಪಿ ಹರಿರಾಂ ಶಂಕರ್ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಅರಿವು ನೆರವು ಎಂಬ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಚೈಲ್ಡ್ ಕೇರ್ ಸೆಂಟರ್ನ ಮಕ್ಕಳನ್ನು ಕರೆಸಿಕೊಳ್ಳಲಾಯಿತು. ಈ ಕಾರ್ಯಗಾರದಲ್ಲಿ ಚೈಲ್ಡ್ ಸೆಂಟರ್ನ ಮೇಲ್ವಿಚಾರಕರನ್ನು ಹೊರಗಿಟ್ಟು ಮಕ್ಕಳ ಜೊತೆ ಆಪ್ತ ಸಮಾಲೋಚನೆ ಮಾಡಲಾಯಿತು. ಈ ವೇಳೆ ಹಲವಾರು ವಿಚಾರಗಳು ಹೊರಗೆ ಬಂದವು. ಈ ವೇಳೆ ಕೆಲ ಸೆಂಟರ್‌ಗಳಲ್ಲಿ ಮಕ್ಕಳಿಗೆ ಚೆನ್ನಾಗಿ ಹೊಡೆಯುತ್ತಾರೆ, ಅವರ ಬಳಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಟಾರ್ಚರ್ ಮಾಡುತ್ತಾರೆ, ಊಟ-ತಿಂಡಿ ಸರಿಯಾಗಿ ಕೊಡುವುದಿಲ್ಲ ಎನ್ನವು ವಿಚಾರ ಬಹಿರಂಗವಾಯಿತು.
ಲೈಂಗಿಕ ಕಿರುಕುಳ ಕೊಟ್ಟ ಉಸ್ತಾದ್ ಬಂಧನ 14 ವರ್ಷದ ಬಾಲಕ ಮತ್ತು ಇನ್ನು ಐದಾರು ಜನ ವಿದ್ಯಾರ್ಥಿಗಳು ನೀಡಿದ ಮಾಹಿತಿ ಮಾತ್ರ ಒಂದು ಕ್ಷಣ ಎಲ್ಲರನ್ನು ಆತಂಕಕ್ಕೆ ಕಾರಣವಾಯಿತು. ಮಂಗಳೂರಿನ ಹೊರವಲಯದ ಉಳ್ಳಾಲದ ನೂರಾನಿ ಯತೀಂಖಾನ & ದಾರುಲ್ ಮಸಾಕಿನ್ ಸೆಂಟರ್‌ನಲ್ಲಿ 14 ವರ್ಷದ ಅಪ್ರಾಪ್ತ ಬಾಲಕನಿಗೆ ಸೆಂಟರ್ ಉಸ್ತಾದ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿಗಳು ಹೇಳಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ ಕಿರುಕುಳ ನೀಡಿದ ಕೋಣಾಜೆ ಮೂಲದ ಆರೋಪಿ ಉಸ್ತಾದ್ ಆಯೂಬ್ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಗುಡ್ ಟಚ್-ಬ್ಯಾಡ್ ಟಚ್ ಬಗ್ಗೆ ಅರಿವು ಇನ್ನು ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಲಾಯಿತು. ಒಂದಷ್ಟು ಪ್ರಶ್ನಾವಳಿಯನ್ನು ಕೊಟ್ಟು ಮಕ್ಕಳಿಂದ ಉತ್ತರ ಪಡೆಯಲಾಯಿತು. ಆಯ್ದ ಕಿರುಚಿತ್ರಗಳನ್ನು ತೋರಿಸಿ ಲೈಂಗಿಕ ಕಿರುಕುಳ ಎಂದರೆ ಏನು?ಅದನ್ನು ಎದುರಿಸುವುದು ಹೇಗೆ?. ಲೈಂಗಿಕ ಕಿರುಕುಳ ನೀಡಿದಾಗ ಏನು ಮಾಡಬೇಕು. ಏನೇನು ಜಾಗೃತೆ ವಹಿಸಬೇಕು ಎನ್ನವುದರ ಬಗ್ಗೆ ಹೇಳಿಕೊಡಲಾಯಿತು.
ಕಾನೂನು ಕ್ರಮಕ್ಕೆ ಸೂಚನೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಚೈಲ್ಡ್ ಕೇರ್ ಸೆಂಟರ್ ಇದ್ದು, ಸುಮಾರು 500 ಮಕ್ಕಳು ಇಲ್ಲಿದ್ದಾರೆ. ಇಡೀ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಈ ರೀತಿಯ ಸೆಂಟರ್‌ಗಳಿದ್ದು 1024 ಮಕ್ಕಳಿದ್ದಾರೆ. ಸದ್ಯ ಮಂಗಳೂರು ವ್ಯಾಪ್ತಿಯ ನಿಗಾ ಘಟಕಗಳ ಮಕ್ಕಳ ಪರೀಕ್ಷೆ ನಡೆಸಲಾಗಿದ್ದು, ಕಿರುಕುಳ ನೀಡುತ್ತಿದ್ದ ಸೆಂಟರ್‌ಗಳಿಗೆ ನೋಟಿಸ್ ನೀಡಲಾಗಿದೆ. ಇನ್ನು ಈ ಎಲ್ಲಾ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಗಮನಕ್ಕೆ ತರಲಾಗಿದೆ. ಇನ್ನು ಈ ರೀತಿಯ ವಿಶಿಷ್ಟ ಕಾರ್ಯಾಚರಣೆ ಕರ್ನಾಟಕದಲ್ಲಿ ಇದೇ ಮೊದಲಾಗಿದ್ದ ಪ್ರತಿ ಜಿಲ್ಲೆಗಳನ್ನು ಈ ರೀತಿಯ ರಹಸ್ಯ ಕಾರ್ಯಾಚರಣೆಯನ್ನು ಮಾಡಿದರೆ ಈ ಕೂಪದಿಂದ ವಿದ್ಯಾರ್ಥಿಗಳನ್ನು ಹೊರಗೆ ತರಬಹುದಾಗಿದೆ.
ಮಕ್ಕಳು ದೇಶದ ಆಸ್ತಿ. ಈ ಕಾರ್ಯಾಚರಣೆ ರಾಜ್ಯದಲ್ಲಿ ಪ್ರಥಮವಾಗಿದೆ. ಮಕ್ಕಳನ್ನು ಈ ಕೂಪದಿಂದ ಮುಕ್ತರಾಗುವಂತೆ ಮಾಡುವ ಉದ್ದೇಶ ನಮ್ಮದ್ದಾಗಿತ್ತು ಮತ್ತು ಇಂತಹ ಪಿಡುಗನ್ನು ಹೋಗಲಾಡಿಸುವ ಗುರಿಯಿತ್ತು. ಸದ್ಯ ಸಂತ್ರಸ್ತ ಮಕ್ಕಳಿಗೆ ಸುರಕ್ಷಿತವಾದ ಕಡೆ ಮೂಲಭೂತ ವ್ಯವಸ್ಥೆ ಮಾಡಲಾಗಿದೆ. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ತನಿಖೆ ಇನ್ನು ಮುಂದುವರೆದಿದೆ. ತಪ್ಪು ಯಾರೆ ಮಾಡಿದರು ಕಾನೂನಿನ ಅಡಿಯಲ್ಲಿ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಕ್ಕಳಿಂದ ವಿಚಾರವನ್ನು ಹೊರತರಲು ಶತಾಯ ಗತಾಯ ಪ್ರಯತ್ನ ಮಾಡಲಾಯಿತು. ಮಕ್ಕಳಿಗೆ ನಮ್ಮ ಮೇಲೆ ಸಂಪೂರ್ಣ ವಿಶ್ವಾಸ ಬಂದ ಮೇಲೆ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು. ಇನ್ನು ಈ ರಹಸ್ಯ ಕಾರ್ಯಚರಣೆನ್ನು ಯಶಸ್ವಿಯಾಗಿಸಲು ತುಂಬಾ ಗ್ರೌಂಡ್ ವರ್ಕ್ ಮಾಡಲಾಗಿತ್ತು ಎಂದು ಮಂಗಳೂರು ಕಾನೂನು ಸುವ್ಯವಸ್ಥೆಯ ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.
(ವರದಿ: ಪೃಥ್ವಿರಾಜ್ ಬೊಮ್ಮನಕೆರೆ-9980914133)
ಇದನ್ನೂ ಓದಿ: ಪೊಲೀಸ್ ಶ್ವಾನಗಳಿಗೆ ಕೂಲರ್; ಬಳ್ಳಾರಿ ಶ್ವಾನ ದಳಕ್ಕೆ ವಿಶೇಷ ಉಪಚಾರ!
(police hidden investigation shows how child care centers molest children in Mangalore)