ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜಿಸುವಂತಿಲ್ಲ: ಸುತ್ತೋಲೆ
ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಬೇರೆ ಕೆಲಸಗಳಿಗೆ ಪೌರಕಾರ್ಮಿಕರನ್ನು ನಿಯೋಜನೆ ಮಾಡುವ ಹಾಗಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯ ಇಲಾಖೆ ಈ ಸೂಚನೆ ನೀಡಿದೆ.
ಬೆಂಗಳೂರು, ಜನವರಿ 20: ಪೌರಕಾರ್ಮಿಕರನ್ನು (Pourakarmika) ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಬೇರೆ ಕೆಲಸಗಳಿಗೆ ನಿಯೋಜನೆ ಮಾಡುವ ಹಾಗಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯ ಇಲಾಖೆ (Directorate of municipal administration) ಈ ಸೂಚನೆ ನೀಡಿದೆ. ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜನೆಗೆ ಸೂಚಿಸಿದವರು ಮತ್ತು ಅವರಿಂದ ಸೇವೆ ಪಡೆದವರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾವುವುದು ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಎಲ್ಲಾ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳ ಬದಲಾಗಿ ಇತರೆ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಿರುವ ಕುರಿತು ನಿರ್ದೇಶನಾಲಯಕ್ಕೆ ದೂರುಗಳು ಬಂದಿವೆ. ಪೌರಕಾರ್ಮಿಕರನ್ನು ಅವರಿಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ: Mangaluru City Corporation Recruitment 2024: 134 ಪೌರಕಾರ್ಮಿಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಹಾಗಾಗಿ ಇನ್ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಇತರೆ ಯಾವುದೇ ಅನ್ಯ ಕೆಲಸಗಳಿಗೆ ನಿಯೋಜಿಸದಂತೆ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ.
ಒಂದು ವೇಳೆ ಪೌರಕಾರ್ಮಿಕರಿಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಇತರೇ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುವುದು ಕಂಡು ಬಂದಲ್ಲಿ ಅಥವಾ ನಿರ್ದೇಶನಾಲಯಕ್ಕೆ ದೂರು ಸ್ವೀಕೃತವಾದಲ್ಲಿ, ಅನ್ಯ ಕಾರ್ಯಗಳಿಗೆ ನಿಯೋಜಿಸಿದ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಯನ್ನು ಮತ್ತು ಅವರ ಸೇವೆಯನ್ನು ಪಡೆಯುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 am, Sat, 20 January 24