ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಹೇಗಿರಲಿದೆ ತನಿಖೆ? ಎಸ್ಐಟಿ ತನಿಖಾ ಹಂತಗಳ ಬಗ್ಗೆ ಇಲ್ಲಿದೆ ಮಾಹಿತಿ
ಪ್ರಜ್ವಲ್ ರೇವಣ್ಣ ಬಂಧನದ ಬೆನ್ನಲ್ಲೇ ಇನ್ನು ಎಸ್ಐಟಿ ತನಿಖೆ ಚುರುಕುಗೊಳ್ಳಲಿದೆ. ಮೊದಲಿಗೆ ಪ್ರಜ್ವಲ್ ರೇವಣ್ಣರನ್ನು ಎಸ್ಐಟಿ ಯಾವ ರೀತಿ ವಿಚಾರಣೆಗೆ ಒಳಪಡಿಸಲಿದೆ? ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದ ಮುಂದಿನ ತನಿಖಾ ಹಂತಗಳು ಯಾವುವು? ಮುಂದಿನ ತನಿಖೆ ಹೇಗೆ ಸಾಗಬಹುದು ಎಂಬ ವಿವರ ಇಲ್ಲಿದೆ.
ಬೆಂಗಳೂರು, ಮೇ 31: ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಕೊನೆಗೂ ಎಸ್ಐಟಿ (SIT) ವಶವಾಗಿದ್ದಾರೆ. ಇದರೊಂದಿಗೆ, ಪ್ರಕರಣದ ಎಸ್ಐಟಿ ತನಿಖೆ ಇನ್ನು ಚುರುಕುಗೊಳ್ಳಲಿದೆ. ಜರ್ಮನಿಯ ಮ್ಯೂನಿಕ್ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಜ್ವಲರ್ರನ್ನು ಮಧ್ಯರಾತ್ರಿ ವಿಮಾನ ನಿಲ್ದಾಣದಿಂದಲೇ ನೇರವಾಗಿ ಎಸ್ಐಟಿ ಕಚೇರಿಗೆ ಕರೆತರಲಾಗಿದೆ. ಇನ್ನು ಮುಂದಿನ ಪ್ರಕ್ರಿಯೆಗಳು ಏನೇನು? ತನಿಖೆ ಹೇಗೆ ಸಾಗಲಿದೆ ಎಂಬ ಹಂತ ಹಂತದ ಮಾಹಿತಿ ಇಲ್ಲಿದೆ.
- ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣಗಳ ಸಂಬಂಧ ಎಸ್ಐಟಿ ವಿಚಾರಣೆ ಶುರು ಮಾಡಲಿದೆ.
- ಬೆಳಗ್ಗೆ ಪ್ರಜ್ವಲ್ರನ್ನು ವೈದ್ಯಕೀಯ ತಪಾಸಣೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
- ಪ್ರಕರಣಗಳ ತನಿಖೆಗೆ ಪ್ರಜ್ವಲ್ರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಎಸ್ಐಟಿ ಮನವಿ ಮಾಡಲಿದೆ.
- ನ್ಯಾಯಾಲಯ ಕಸ್ಟಡಿಗೆ ನೀಡಿದರೆ ಪ್ರಜ್ವಲ್ರನ್ನ ತೀವ್ರ ವಿಚಾರಣೆಗೆ ಒಳಪಡಿಸಲಿದೆ.
- ಇಡೀ ಪ್ರಕರಣದ ಮುಖ್ಯ ಆರೋಪಿ ಪ್ರಜ್ವಲ್ ರೇವಣ್ಣ ಆಗಿದ್ದಾರೆ.
- ಈಗಾಗಲೇ ಪ್ರಜ್ವಲ್ ರೇವಣ್ಣ ಬಳಿ ಇರೋ ವಸ್ತುಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ.
- ಪ್ರಜ್ವಲ್ ಬಳಸ್ತಿದ್ದ ಮೊಬೈಲ್ ಸೇರಿ ಆತನ ಬಳಿ ಇದ್ದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
- ಪ್ರಜ್ವಲ್ ರೇವಣ್ಣ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್ಐಟಿ ಕಳುಹಿಸಲಿದೆ.
- ವಿದೇಶಕ್ಕೆ ತೆರಳಿದ್ದರ ಬಗ್ಗೆಯೂ ಎಸ್ಐಟಿ ವಿಚಾರಣೆ ನಡೆಸಲಿದೆ.
- ದೇಶ ಬಿಟ್ಟ ದಿನದಿಂದ ವಾಪಸ್ ಬರುವವರೆಗೆ ಸಹಾಯ ಮಾಡಿದವರ ಬಗ್ಗೆ ಮಾಹಿತಿ ಕಲೆಹಾಕಲಿದೆ.
- ಇಂದು ಕಸ್ಟಡಿಯಲ್ಲೇ ವಿಚಾರಣೆ ನಡೆಸಿ ಪ್ರಾಥಮಿಕ ಮಾಹಿತಿ ಕಲೆಹಾಕುವ ಸಾಧ್ಯತೆ ಇದೆ.
- ಮುಂದಿನ ದಿನಗಳಲ್ಲಿ ಪ್ರಜ್ವಲ್ ತೋಟದ ಮನೆಗಳು, ಸಂಸದರ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಹಜರು ಸಾಧ್ಯತೆ ಇದೆ.
ಇದನ್ನೂ ಓದಿ: ಮ್ಯೂನಿಕ್ನಿಂದ ಬೆಂಗಳೂರು ವರೆಗೆ ಪ್ರಜ್ವಲ್: ಈ ಅವಧಿಯಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ
ಈಗಾಗಲೇ ಪ್ರಜ್ವಲ್ ಅನುಪಸ್ಥಿತಿಯಲ್ಲಿ ಒಂದಷ್ಟು ತನಿಖೆ ನಡೆಸಿರೋ ಎಸ್ಐಟಿ ಇದೀಗ ಪ್ರಜ್ವಲ್ ಬಳಿ ಮತ್ತಷ್ಟು ಮಾಹಿತಿ ಕಲೆ ಹಾಕಲಿದೆ. ಇದೀಗ ಪ್ರಜ್ವಲ್ ಬಂಧನದಿಂದ ಎಸ್ಐಟಿ ತನಿಖೆಗೆ ಮತ್ತಷ್ಟು ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 am, Fri, 31 May 24