Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂರ್ವ ಮುಂಗಾರು ಚುರುಕು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ತಂಪಾದ ಇಳೆ

Karnataka Rains: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಸದ್ಯ ಪೂರ್ವ ಮುಂಗಾರು ಚುರುಕು ಪಡೆದುಕೊಂಡು ಹೀಗಾಗಿ ಬೇಸಿಗೆಯಲ್ಲಿಯೂ ಉತ್ತಮ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಅದರಂತೆ ಇಂದು (ಮಾರ್ಚ್​ 24) ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಬಿರು ಬಿಸಿಲು ಇದ್ದು, ಸಂಜೆ ಹೊತ್ತಿಗೆ ಮಳೆಯಾಗಿದೆ. ಹಾಗಾದ್ರೆ, ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

ಪೂರ್ವ ಮುಂಗಾರು ಚುರುಕು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ತಂಪಾದ ಇಳೆ
Karnataka Rains
Follow us
ರಮೇಶ್ ಬಿ. ಜವಳಗೇರಾ
|

Updated on:Mar 24, 2025 | 7:22 PM

ಬೆಂಗಳೂರು, (ಮಾರ್ಚ್​ 24): ಬಿರು ಬೇಸಿಗೆ ಮಧ್ಯ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಇಂದು(ಮಾರ್ಚ್​ 24 ಮಳೆಯಾಗಿದೆ (Karnataka Rains). ಹವಾಮಾನ ಇಲಾಖೆಯ ಹೇಳಿದಂತೆ ಪೂರ್ವ ಮುಂಗಾರು ಚುರುಕು ( Pre Monsoon ) ಪಡೆದುಕೊಂಡಿದ್ದು, ಬೇಸಿಗೆಯಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಹೌದು…ವಿಜಯಪುರ, ಬಾಗಲಕೋಟೆ, ಹಾಸನ, ಕೊಡಗು ಜಿಲ್ಲೆಯಲ್ಲಿ ಮಳೆಯಾಗಿದ್ದು, ಬಿಸಿಲು, ಧಗೆಯಿಂದ ಸುಡುತ್ತಿದ್ದ ಧರೆ ತಂಪಾಗಿ ತಂಪನೆಯ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಜನರು ಫುಲ್ ಖುಷ್ ಆಗಿದ್ದರೆ,  ಇನ್ನು ಕೆಲವೆಡೆ ಮಳೆಗೆ ಬೆಳೆ ಹಾನಿ ಬಗ್ಗೆ ರೈತರು ಆತಂಕಗೊಂಡಿದ್ದಾರೆ.

ಕೊಡಗಿನಲ್ಲಿ ವರ್ಷದ ಮೊದಲ ಮಳೆ

ಕೊಡಗು ಜಿಲ್ಲೆಯ ಹಲವೆಡೆ ಇಂದು (ಮಾರ್ಚ್​ 24) ವರ್ಷದ ಮೊದಲ ಮಳೆಯಾಗಿದೆ. ಮಡಿಕೇರಿ ನಗರ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಗುಡುಗು ಸಿಡಿಲು ಆಲಿಕಲ್ಲು ಸಹಿತ ವರುಣ ಅಬ್ಬರಿಸಿದ್ದು, ಬಿಸಿಲಿನಿಂದ ಸುಡುತ್ತಿದ್ದ ಭೂಮಿ ತಂಪಾಗಿದೆ.

ಇದನ್ನೂ ಓದಿ: Karnataka Weather: ಕರ್ನಾಟಕದ ಹವಾಮಾನ ಹೇಗಿದೆ? ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಒಣಹವೆ?

ಹಾಸನ ಜಿಲ್ಲೆಯ ವಿವಿಧೆಡೆ ವರುಣಾರ್ಭಟ

ಈ ಬೇಸಿಗೆಯಲ್ಲೂ ಕಳೆದ ಮೂರು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಇಂದೂ ಸಹ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು , ಇದರಿಂದ ವಾಹನ ಸವಾರರು, ವಿದ್ಯಾರ್ಥಿಗಳ ಪರದಾಡುವಂತಾಗಿದೆ. ಮತ್ತೊಂದೆಡೆ ಉತ್ತಮ ಮಳೆಯಿಂದ ರೈತರು ಹಾಗೂ ಕಾಫಿ ಬೆಳೆಗಾರರು ಫುಲ್ ಖುಷ್ ಆಗಿದ್ದಾರೆ.

ವಿಜಯಪುರ ಜಿಲ್ಲೆಯಲ್ಲೂ ಆಲಿಕಲ್ಲು ಮಳೆ

ಬೆಳಗ್ಗೆಯಿಂದ ಬಿರು ಬಿಸಿಲಿನಿಂದ ಕಾದು ಕೆಂಡವಾಗಿದ್ದ ವಿಜಯಪುರ ಜಿಲ್ಲೆಯಲ್ಲೂ ಸಹ ವರುಣ ತಂಪೆರೆದಿದ್ದಾನೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರದಲ್ಲಿ ಕಳೆದ ಅರ್ಧ ಗಂಟೆಯಿಂದ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ಇದರಿಂದ ಬಿಸಿಲಿನ ಝಳದಿಂದ ಕಂಗೆಟ್ಟಿದ್ದವರಿಗೆ ಮಳೆರಾಯ ತಂಪೆರೆದಿದ್ದಾನೆ ಇನ್ನೊಂದೆಡೆ ಈ ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗೆ ಹಾನಿ ಆತಂಕ ಎದುರಾಗಿದೆ. ದ್ರಾಕ್ಷಿ, ದಾಳಿಂಬೆ, ನಿಂಬೆ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ. ಈ ಗಾಳಿ ಮಳೆ ಹೊಡೆತಕ್ಕೆ ನಾಗನೂರು ಗ್ರಾಮದಲ್ಲಿ ಅಣ್ಣಪ್ಪ ಶಿರಹಟ್ಟಿ ಎಂಬುವರ ಗೋವಿನಜೋಳ ನೆಲಕ್ಕೆ ಉರುಳಿದೆ.

ಬಾಗಲಕೋಟೆ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆ

ಇನ್ನು ಬಾಗಲಕೋಟೆ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ, ತೊದಲಬಾಗಿ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಕೂಲ್ ಕೂಲ್​ ಮಾಡಿದ್ದಾನೆ.

ಗದಗ ಜಿಲ್ಲೆಯಲ್ಲಿ ಗಾಳಿ ಸಹಿತ ಭಾರಿ ಮಳೆ

ಗದಗನಲ್ಲೂ ಸಹ ಸಂಜೆ ಗಾಳಿ ಸಹಿತ ಭಾರಿ ಮಳೆಯಾಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಗಾಳಿ ಸಹಿತ ಭಾರಿ ಮಳೆಗೆ ಶಾಲೆಯ ಶೀಟ್​ಗಳು ಕಿತ್ತುಹೋಗಿವೆ. ಸಂಜೆ 5 ಗಂಟೆ ಬಳಿಕ ಅವಘಡ ನಡೆದಿರುವುದಿರಂದ ಶಾಲಾ ಮಕ್ಕಳು ಬಚಾವ್ ಆಗಿದ್ದಾರೆ. ​ ಇನ್ನು ಗಾಳಿ ಮಳೆಗೆ 2 ವಿದ್ಯುತ್ ಕಂಬಗಳು ಬಿದ್ದಿವೆ.

ಇನ್ನು ಮಾರ್ಚ್‌ 24 ರಿಂದ 27 ವರೆಗೆ ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ (ಮಾರ್ಚ್‌ 24 ಕ್ಕೆ) ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗುಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ನಿನ್ನೆ(ಮಾರ್ಚ್ 23) ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಒಣಹವೆ ಇತ್ತು. ಪ್ರಮುಖವಾಗಿ ಮಂಡ್ಯ ಜಿಲ್ಲೆಯ ಮದ್ದೂರು, ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಮೈಸೂರು ಜಿಲ್ಲೆಯ ಸರಗೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಮಂಡ್ಯ ಜಿಲ್ಲೆಯ ನಾಗಮಂಗಲ, ಕೋಲಾರ ಜಿಲ್ಲೆಯ ರಾಯಲ್ಪಾಡು, ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಭಾರೀ ಮಳೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:34 pm, Mon, 24 March 25