
ಬೆಂಗಳೂರು, (ಅಕ್ಟೋಬರ್ 12): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 12) ಪ್ರಮುಖ ರಾಜ್ಯಪಾಲರ ಹುದ್ದೆಗಳ ಮರುಹಂಚಿಕೆಯ ಭಾಗವಾಗಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಪ್ರಸ್ತುತ ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿಗೆ ವರ್ಗಾಯಿಸಲಾಗಿದ್ದು, ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ಮಾಜಿ ಸಂಸದೆ ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಸುಧಾ ಯಾದವ್ ಅವರು ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರು ಎನಿಸಿಕೊಂಡಿದ್ದಾರೆ. ಈ ಹಿಂದೆ 1999ರಿಂದ 2002ರವರೆಗೆ ವಿ.ಎಸ್ ರಮಾದೇವಿ ಅವರು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದರು.
ಸಿಕ್ಕಿಂನ ರಾಜ್ಯಪಾಲರಾದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಾಗೂ ಕೇರಳದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಾಗೇ ಡಾ. ಧಲ್ ಸಿಂಗ್ ಬಿಸೆನ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ಹಾಗೂ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಥಾವರ್ ಚೆಂದ್ ಗೆಹ್ಲೋಟ್ ಅವರು 2021ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಬಂದಿದ್ದರು. ಇದೀಗ
ಬರೋಬ್ಬರಿ 5 ವರ್ಷಗಳ ಬಳಿಕ ಕರ್ನಾಟಕ ರಾಜ್ಯಪಾಲರನ್ನು ಬದಲಾವಣೆ ಮಾಡಲಾಗಿದ್ದು, ಈ ಬಾರಿ ಕರ್ನಾಟಕಕ್ಕೆ ಮಹಿಳಾ ರಾಜ್ಯಪಾಲರನ್ನು ನೇಮಿಸಲಾಗಿದೆ. ಹರಿಯಾಣದ ರೇವಾರಿ ಜಿಲ್ಲೆಯ ಮೊಟ್ಲಾ ಕಲನ್ ಗ್ರಾಮದ ಸುಧಾ ಯಾದವ್, ಐಐಟಿ ರೂರ್ಕಿಯಲ್ಲಿ ಎಂಎಸ್ಸಿ ಪದವಿ ಮುಗಿಸಿದ್ದು, ಕೆಮಿಸ್ಟ್ರಿಯಲ್ಲಿ ಪಿಹೆಚ್ಡಿ ಪಡೆದುಕೊಂಡಿದ್ದಾರೆ. ಕಾರ್ಗಿಲ್ ಯುದ್ಧದ ಹುತಾತ್ಮ ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಪತ್ನಿ ಈ ಸುಧಾ ಯಾದವ್.
ಕರ್ನಾಟಕ ತನ್ನ ಇತಿಹಾಸದಲ್ಲಿ ಇದುವರೆಗೂ 19 ರಾಜ್ಯಪಾಲರನ್ನು ಕಂಡಿದೆ. ಅವರಲ್ಲಿ ಮೈಸೂರು ಸಾಮ್ರಾಜ್ಯದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಮೊದಲಿಗರು. ರಾಜ್ಯಗಳ ಪುನರ್ ವಿಂಗಡಣೆಯಾಗಿ ಮೈಸೂರು ರಾಜ್ಯ ಸ್ಥಾಪನೆಯಾದಾಗ 1956ರ ನವೆಂಬರ್ 1ರಂದು ಮೊದಲ ರಾಜ್ಯಪಾಲರಾದವರು ಜಯಚಾಮರಾಜ ಒಡೆಯರ್. ಅವರು 1963ರ ಮೇ 4ರವರೆಗೂ, ಅಂದರೆ 6 ವರ್ಷ 184 ದಿನಗಳ ಕಾಲ ರಾಜ್ಯಪಾಲರಾಗಿದ್ದರು. ಇವರು ಕರ್ನಾಟಕ ರಾಜ್ಯಪಾಲರಾಗಿದ್ದ ಏಕೈಕ ಕನ್ನಡಿಗರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Published On - 9:54 pm, Mon, 12 October 26