ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದ ಸಿದ್ದರಾಮಯ್ಯ

ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ವಿಧಾನಸೌಧದಲ್ಲಿ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ನಿರ್ಧಾರಕ್ಕೆ ಕಾನೂನಿನ ಬಲ ಇಲ್ಲ. ನಾನು ಯಾವ ಕಾರಣಕ್ಕೆ ರಾಜೀನಾಮೆಯನ್ನ ನೀಡಬೇಕು? ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 17, 2024 | 8:09 PM

ಬೆಂಗಳೂರು, ಆಗಸ್ಟ್​ 17: ಮುಡಾ ಹಗರಣದಲ್ಲಿ (muda) ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ತನಿಖೆ ನಡೆಸಲು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಈ ನಿರ್ಧಾರ ಸಿಎಂಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ. ಸದ್ಯ ಈ ವಿಚಾರವಾಗಿ ಸಿಎಂ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮಾಡಿದ್ದು, ರಾಜ್ಯಪಾಲರ ನಿರ್ಣಯವನ್ನ ಸಂಪುಟ ಸಭೆ ಖಂಡಿಸಿದೆ. ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾನು ಯಾವ ಕಾರಣಕ್ಕೆ ರಾಜೀನಾಮೆಯನ್ನ ನೀಡಬೇಕು? ಯಾವ ಆಧಾರದ ಮೇಲೆ ನೀಡಬೇಕು? ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆಯನ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಂಪುಟ ಸಭೆ ಬಳಿಕ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ನಿರ್ಧಾರಕ್ಕೆ ಕಾನೂನಿನ ಬಲ ಇಲ್ಲ. ಸಂವಿಧಾನದ ಪ್ರತಿನಿಧಿಗಳಾಗಿ ಅವರು ಕೆಲಸ ಮಾಡಬೇಕೇ ಹೊರತು ಬಿಜೆಪಿ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ನನ್ನ ಮೇಲೆ ಯಾಕೆ ರಾಜ್ಯಪಾಲರನ್ನ ಬಳಸಿಕೊಳ್ಳುತ್ತಿದ್ದಾರೆ? ರಾಜ್ಯಪಾಲರ ನಿರ್ಧಾರ ವಿರುದ್ಧ ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ 

ರಾಜ್ಯಪಾಲರು ಕಾನೂನು ಬಾಹಿರವಾಗಿ ಅನುಮತಿಸಿದ್ದಾರೆ. ಅವರು ಅನುಮತಿ ನೀಡಿದ್ದು ಕೂಡ ನಿಯಮದಲ್ಲಿ ಇಲ್ಲ. ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡುವಾಗ ಕೇಂದ್ರ ಸರ್ಕಾರದ ಎಸ್​ಓಪಿ ಪಾಲಿಸಿಲ್ಲ. ನಮ್ಮ ಸರ್ಕಾರ ಬಡವರ ಪರ ಇರುವಂತಹ ಸರ್ಕಾರ. ಬಿಜೆಪಿಯವರು ಗ್ಯಾರಂಟಿಗಳ ವಿರುದ್ಧವಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ, ಬಡವರ ಪರ ಕೆಲಸ ಮಾಡುತ್ತಿದ್ದೇವೆ. ನನ್ನ ರಾಜಕೀಯವಾಗಿ ತೇಜೋವಧೆ ಮಾಡಲು ಅವರ ಈ ಪ್ರಯತ್ನ ಯಶಸ್ವಿಯಾಗಲ್ಲ. ನನ್ನ ತೇಜೋವಧೆ ಮಾಡುವುದು ಬಿಜೆಪಿಯವರ ಭ್ರಮೆ. ನಮ್ಮ ಅಭೂತಪೂರ್ವ ಗೆಲುವು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪ್ರಾಸಿಕ್ಯೂಷನ್​ ವಿಚಾರ: ಸಿದ್ದರಾಮಯ್ಯ ವೈಯಕ್ತಿಕವಾಗಿ ಹೋರಾಡಬೇಕೇ ಹೊರತು ಸಿಎಂ ಆಗಲ್ಲ, ಲೆಹರ್‌ ಸಿಂಗ್

ನಾವು ಬಡವರ ಪರ ಇದ್ದೇವೆಂದು ಟಾರ್ಗೆಟ್​ ಮಾಡುತ್ತಿದ್ದಾರೆ. ರಾಜ್ಯಪಾಲರು ಈ ರೀತಿ ಮಾಡುತ್ತಾರೆಂದು ನಮಗೆ ಗೊತ್ತಿತ್ತು. ಇದರಿಂದ ನಾವು ಇನ್ನೂ ಗಟ್ಟಿಯಾಗುತ್ತಿದ್ದೇವೆ. ಇದರಿಂದ ಬಿಜೆಪಿ-ಜೆಡಿಎಸ್​​ನವರು ಬಯಲಿಗೆ ಬರುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಟಿಬಿ ಅಬ್ರಹಾಂ ದೂರು ನೀಡಿದ ಕೆಲ ಗಂಟೆಗಳಲ್ಲೇ ನನಗೆ ರಾಜ್ಯಪಾಲರ ಕಚೇರಿಯಿಂದ ಶೋಕಾಸ್ ನೋಟಿಸ್​ ನೀಡಲಾಗಿದೆ. ಲೋಕಾಯುಕ್ತದವರು ಹೆಚ್​ಡಿ ಕುಮಾರಸ್ವಾಮಿ, ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಕೋರಿದ್ದರು. ಹೆಚ್​ಡಿಕೆ ವಿರುದ್ಧ ಪ್ರಾಥಮಿಕ ತನಿಖೆಯಲ್ಲಿ ಸಾಬೀತು ಎಂದು ಮನವಿ ಮಾಡಿದ್ದರು. ಆದರೆ ಮುಡಾ ಕೇಸ್​ನಲ್ಲಿ ನನ್ನ ತನಿಖೆಯೇ ನಡೆದಿಲ್ಲ ಎಂದರು.

ಫೆಬ್ರವರಿ 26ರಂದು ಮುರುಗೇಶ್ ನಿರಾಣಿ ವಿರುದ್ಧ ಅನುಮತಿ ಕೇಳಿದ್ದರು. ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿದ್ದಾರೆ. ಇವರೆಲ್ಲ ವಿರುದ್ಧ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ ಆದರೆ, ನನ್ನ ಕೇಸ್​ನಲ್ಲಿ ಆತುರವಾಗಿ ಅನುಮತಿ ಕೊಟ್ಟಿದ್ದಾರೆ. ಮುಡಾ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ, ನನ್ನ ಸಹಿ ಇಲ್ಲ. ನನ್ನ ತನಿಖೆಯಾಗಿ, ಏನೂ ಇಲ್ಲದೇ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ರಾಜಕೀಯಕ್ಕಾಗಿ ಅನುಮತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್​​: ಸಿದ್ದರಾಮಯ್ಯ ವಿರುದ್ಧ ಯಾವೆಲ್ಲಾ ಸೆಕ್ಷನ್? ಇಲ್ಲಿದೆ ವಿವರ

ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರೆ ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ. ಇಡೀ ಸಚಿವ ಸಂಪುಟ ಒಕ್ಕೊರಲಿನಿಂದ ಇದನ್ನ ಖಂಡಿಸಿದೆ. ಪಕ್ಷವೂ ಕೂಡ ಇದನ್ನ ಖಂಡಿಸಿದೆ. ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರು ಖಂಡಿಸಿದ್ದಾರೆ. ಪಕ್ಷ ಹೈಕಮಾಂಡ್​ ಕೂಡ ನನಗೆ ಧೈರ್ಯ ತುಂಬಿದೆ. ನಿಮ್ಮ ಜೊತೆಗೆ ಇರುತ್ತೇವೆ ಎಂದು ಕರೆ ಮಾಡಿ ಹೇಳಿದ್ದಾರೆ. ಹಾಗಾಗಿ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:03 pm, Sat, 17 August 24