ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸಿದ್ದರಾಮಯ್ಯ ವಿರುದ್ಧ ಯಾವೆಲ್ಲಾ ಸೆಕ್ಷನ್? ಇಲ್ಲಿದೆ ವಿವರ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದೇ ತಡ ಕಾಂಗ್ರೆಸ್ ಪಾಳಯದಲ್ಲಿ ಕಾನೂನು ಹೋರಾಟದ ಚಟುವಟಿಕೆ ಬಿರುಸುಗೊಂಡಿದೆ. ಸಿದ್ದರಾಮಯ್ಯ ಕೂಡ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಯಾವ್ಯಾವ ಸೆಕ್ಷನ್ಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು, ಆಗಸ್ಟ್ 17: ಮುಡಾದಲ್ಲಿ (muda) ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಮೊದಲ ಬಾರಿಗೆ ಕಾನೂನು ಸಂಕೋಲೆಯಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಕಾನೂನು ಸಮರ ಕೂಡ ಸಾರಿದ್ದಾರೆ. ಯಾವ್ಯಾವ ಸೆಕ್ಷನ್ಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7: ಅಧಿಕಾರ ದುರ್ಬಳಕೆ ಮಾಡಿಕೊಂಡು ಅನುಚಿತ ಲಾಭ ಪಡೆಯುವುದು ಕನಿಷ್ಟ 3 ವರ್ಷದಿಂದ ಗರಿಷ್ಟ 7 ವರ್ಷ ಶಿಕ್ಷೆ ಇದೆ. ಸೆಕ್ಷನ್ 9: ವಾಣಿಜ್ಯ ಸಂಸ್ಥೆಗೆ ಅನುಚಿತ ಅನುಕೂಲ ಮಾಡಿಕೊಡುವುದು ಅಪರಾಧ. ಸೆಕ್ಷನ್ 11: ಸರ್ಕಾರಿ ಸೇವಕ ತನ್ನ ಕಾರ್ಯಕ್ಕೆ ಅನುಚಿತ ಲಾಭ ಪಡೆಯುವುದು ಕನಿಷ್ಟ 6 ತಿಂಗಳಿನಿಂದ ಗರಿಷ್ಟ 5 ವರ್ಷ ಶಿಕ್ಷೆಗೆ ಅವಕಾಶವಿದೆ.
ಇದನ್ನೂ ಓದಿ: ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕೆಪಿಸಿಸಿ ಸೂಚನೆ
ಸೆಕ್ಷನ್ 12: ಭ್ರಷ್ಟಾಚಾರ ತಡೆ ಕಾಯ್ದೆಯ ಯಾವುದೇ ಅಪರಾಧಕ್ಕೆ ಪ್ರಚೋದನೆ ನೀಡುವುದು. ಕನಿಷ್ಟ 3 ವರ್ಷಗಳಿಂದ ಗರಿಷ್ಟ 7 ವರ್ಷಗಳವರೆಗೆ ಶಿಕ್ಷೆ. ಸೆಕ್ಷನ್ 15: ತಮ್ಮ ಅಧಿಕಾರವ್ಯಾಪ್ತಿಯನ್ನು ದುರ್ಬಳಕೆ ಮಾಡಿ ತಮಗಾಗಲಿ ಅಥವಾ ತಮಗೆ ಬೇಕಾದವರಿಗಾಗಲೀ ಅಕ್ರಮ ಲಾಭ ಮಾಡಿಕೊಡಲು ಯತ್ನಿಸುವುದು. ಕನಿಷ್ಟ 2 ವರ್ಷಗಳಿಂದ ಗರಿಷ್ಟ 5 ವರ್ಷಗಳವರೆಗೆ ಶಿಕ್ಷೆ ಇದೆ.
ಬಿಎನ್ಎಸ್ ಕಾಯ್ದೆ ಸೆಕ್ಷನ್ 59: ಒಂದು ಕೃತ್ಯವನ್ನು ತಡೆಯಬೇಕಾದ ಜವಾಬ್ದಾರಿಯುಳ್ಳ ಸರ್ಕಾರಿ ಸೇವಕ ಆ ಕೃತ್ಯವನ್ನು ತಡೆಯದೇ ಅದನ್ನು ಮುಚ್ಚಿಡುವುದು, ಮೂಲ ಅಪರಾಧದ ಅರ್ಧದಷ್ಟು ಶಿಕ್ಷೆ ಇದೆ. ಸೆಕ್ಷನ್ 61: ಅಕ್ರಮ ನಡೆಸಲು ಒಳಸಂಚು ರೂಪಿಸುವುದು, ಮೂಲ ಅಪರಾಧದಷ್ಟೇ ಶಿಕ್ಷೆ ಇದೆ. ಸೆಕ್ಷನ್ 62: ಜೈಲು ಶಿಕ್ಷೆಗೆ ಅವಕಾಶ ಇರುವಂತಹ ಅಪರಾಧಗಳನ್ನು ಮಾಡಲು ಪ್ರಯತ್ನಿಸುವುದು, ಮೂಲ ಅಪರಾಧದ ಅರ್ಧದಷ್ಟು ಶಿಕ್ಷೆ ವಿಧಿಸಲಾಗುತ್ತದೆ.
ಸೆಕ್ಷನ್ 201: ದಾಖಲೆ ತಯಾರಿಸುವ ಜವಾಬ್ದಾರಿಯುಳ್ಳ ಸರ್ಕಾರಿ ಸೇವಕ ಮತ್ತೊಬ್ಬನಿಗೆ ಹಾನಿಯಾಗುವಂತಹ ತಪ್ಪು ದಾಖಲೆ ಸೃಷ್ಟಿಸುವುದು. 3 ವರ್ಷಗಳವರೆಗೆ ಶಿಕ್ಷೆ ಇದೆ. ಸೆಕ್ಷನ್ 227: ಸತ್ಯ ಹೇಳುವ ಪ್ರಮಾಣ ಸ್ವೀಕರಿಸಿದ ಸರ್ಕಾರಿ ಸೇವಕ ಸುಳ್ಳು ಮಾಹಿತಿ ನೀಡುವುದು. ಸೆಕ್ಷನ್ 228: ಸುಳ್ಳು ಸಾಕ್ಷ್ಯ ಸೃಷ್ಟಿಸುವುದು. ಸೆಕ್ಷನ್ 229: ಉದ್ದೇಶಪೂರ್ವಕ ಸುಳ್ಳು ದಾಖಲೆ ಸೃಷ್ಟಿಗೆ 3 ವರ್ಷಗಳವರೆಗೆ ಶಿಕ್ಷೆ ನೀಡಲಾಗುತ್ತದೆ.
ಇದನ್ನೂ ಓದಿ: ರಾಜ್ಯಪಾಲರ ನಡೆ ಸಂವಿಧಾನಬಾಹಿರ, ರಾಜೀನಾಮೆ ನೀಡಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ಮಾತು
ಸೆಕ್ಷನ್ 239: ಒಂದು ಕೃತ್ಯ ನಡೆದಿದೆ ಎಂದು ತಿಳಿದ ನಂತರವೂ ಅದರ ಮಾಹಿತಿ ನೀಡದೇ ಮುಚ್ಚಿಡುವುದು ಅಪರಾಧ 6 ತಿಂಗಳವರೆಗೆ ಶಿಕ್ಷೆ ಇದೆ. 314: ಚರಾಸ್ತಿಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರೆ 2 ವರ್ಷಗಳವರೆಗೆ ಶಿಕ್ಷೆ. 316(5): ಸರ್ಕಾರಿ ಸೇವಕನಿಗೆ ಒಂದು ಆಸ್ತಿಯ ಜವಾಬ್ದಾರಿ ನೀಡಿದಾಗ ಅದನ್ನು ದುರುಪಯೋಗಪಡಿಸಿ ನಂಬಿಕೆ ದ್ರೋಹ ಮಾಡುವುದು 10 ವರ್ಷಗಳವರೆಗೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲುನ ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Sat, 17 August 24