ಚಿತ್ರದುರ್ಗ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ (PSI Recruitment Scam) ಅಕ್ರಮಕ್ಕೆ ಬ್ರೇಕ್ ಹಾಕಲು ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮರು ಪರೀಕ್ಷೆ ಮಂತ್ರದಂಡವನ್ನು ಝಳಪಿಸಿದ್ದಾರೆ. ಇನ್ನು ಈ ಸಂಬಂಧ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪರೀಕ್ಷೆ ಅಕ್ರಮ ನಡೆದಾಗ ಮರು ಪರೀಕ್ಷೆ (PSI Re Exam) ನಡೆಸುವುದು ವಾಡಿಕೆ. ಹಿಂದಿನಿಂದಲೂ ಇದೇ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮದ ವ್ಯಾಪಕತೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೇ ಮಾತ್ರವೇ ಮತ್ತೆ ಪರೀಕ್ಷೆಗೆ ಅವಕಾಶ ನೀಡಲಾಗುವುದು. ಹೊಸಬರಿಗೆ ಅವಕಾಶ ಇರುವುದಿಲ್ಲ ಎಂದಿದ್ದಾರೆ. 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ನೋಟಿಫಿಕೇಷನ್ ಮಾತ್ರ ರದ್ದು ಮಾಡಿ ಮರುಪರೀಕ್ಷೆ ನಡೆಸಲಾಗುವುದು ಎಂದು ಸ್ವತಃ ತಾವೇ ಗೃಹ ಸಚಿವರಾಗಿದ್ದಾಗ ಹೊರಡಿಸಿದ್ದ ನೇಮಕಾತಿ ನೋಟಿಫಿಕೇಷನ್ ರದ್ದು ಬಗ್ಗೆ ಸಿಎಂ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.
ಪೊಲೀಸ್ ನೇಮಕಾತಿ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪಾಲ್ ಕಳಂಕಿತರು ಅಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ತಮಗೆ ಬೇಕಾದ್ದು ಹೇಳ್ತಾರೆ ಎಂದು ಟಾಂಗ್ ನೀಡಿದರು. ಸಿದ್ಧರಾಮಯ್ಯ ಅವರಿಂದಲೇ ಭಾಷಾ ರಾಜಕಾರಣ ಶುರುವಾಗಿರುವುದು. ನಟ ಸುದೀಪ್ ಟ್ವೀಟ್ ಬಗ್ಗೆ ಮೊದಲು ಮಾತಾಡಿದ್ದೇ ಸಿದ್ಧರಾಮಯ್ಯ. ನಾವು ಭಾಷೆ ಬಗ್ಗೆ ಅಭಿಮಾನದ ಮಾತಾಡಿದರೂ ಸಹಿಸುತ್ತಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳುತ್ತದೆ:
ಸರ್ಕಾರದ ಕ್ರಮ ಪ್ರಶ್ನಿಸಿದರೂ ಯಶಸ್ಸು ಸಿಗುವ ಸಾಧ್ಯತೆ ಕಡಿಮೆಯಿದೆ. ದೆಹಲಿಯಲ್ಲಿ 2016 ರ ಹೆಡ್ ಕ್ಲರ್ಕ್ ಹುದ್ದೆಯ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ನೊಂದ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಅಂತಿಮವಾಗಿ ಪರೀಕ್ಷೆ ರದ್ದು ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಸಾರ್ವಜನಿಕ ಸೇವೆಗೆ ಆಯ್ಕೆ ಪ್ರಕ್ರಿಯೆ ವಿಶ್ವಾಸ ವೃದ್ದಿಸುವಂತಿರಬೇಕು. ಪರೀಕ್ಷೆ ರದ್ದಿನಿಂದ ಕೆಲ ಅಭ್ಯರ್ಥಿಗಳಿಗೆ ತೊಂದರೆಯಾಗಬಹುದು. ಆದರೆ ಆ ಕಾರಣಕ್ಕೆ ತಪ್ಪಾಗಿ ನಡೆದ ಪರೀಕ್ಷೆಯನ್ನು ಸಮರ್ಥಿಸಲಾಗದು ಎಂದು ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಎಂ.ಆರ್. ಶಾ ಅವರ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಕಳೇದ ವರ್ಷವಷ್ಟೇ ಅಂದರೆ 2021 ರಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಮರು ಪರೀಕ್ಷೆ ಕ್ರಮ ರದ್ದುಗೊಳಿಸುವ ಸಾಧ್ಯತೆ ಕಡಿಮೆಯಾಗಿದೆ.
PSI Recruitment Cancel: ಮರು ಪರೀಕ್ಷೆಯನ್ನ ಒಪ್ಪಿಕೊಳ್ಳಲ್ಲ ಎಂದ ಅಭ್ಯರ್ಥಿಗಳು
Published On - 3:49 pm, Fri, 29 April 22