ಬೆಂಗಳೂರು, ಜನವರಿ 3: ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಏಳು ಮಂದಿ ಸಚಿವರು ಮತ್ತು 35 ಮಂದಿ ಶಾಸಕರು ಗುರುವಾರ ರಾತ್ರಿ ಔತಣಕೂಟ ಮಾಡಿರುವುದನ್ನು ಉಲ್ಲೇಖಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್, ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ನಿಮ್ಮ (ಡಿಕೆ ಶಿವಕುಮಾರ್) ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂಬ ತಮ್ಮ ಮಾತನ್ನು ಕಾರ್ಯಗತ ಮಾಡುವ ಸಮಯ ಬಂದಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಅತ್ತ ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣ, ಇತ್ತ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ 35 ಶಾಸಕರ ಡಿನ್ನರ್ ಮೀಟಿಂಗ್ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ. ಸ್ವಾಮಿ ಡಿಕೆ ಶಿವಕುಮಾರ್ ಅವರೇ, ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ತಾವು ಅಬ್ಬರಿಸದ್ದನ್ನು ಕಾರ್ಯಗತ ಮಾಡುವ ಸಮಯ ಬಂದಿದೆ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.
‘ತಮ್ಮ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆಯುತ್ತದೆ. ಬಸ್ ಟಿಕೆಟ್ ದರ ಶೇ 15 ರಷ್ಟು ಹೆಚ್ಚಿಸುವಂತಹ ಪ್ರಮುಖ ನಿರ್ಧಾರ ಆಗುತ್ತದೆ. ಒಬ್ಬ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಅನುಪಸ್ಥಿತಿಯಲ್ಲಿ ಇಂತಹ ನಿರ್ಧಾರಗಳು ಆಗುತ್ತೆ ಅಂದರೆ ಏನರ್ಥ? ಕಾಂಗ್ರೆಸ್ ಪಕ್ಷದಲ್ಲಿ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ ಅಥವಾ ತಮ್ಮ ಅಬ್ಬರ ಏನಿದ್ದರೂ ಮಾಧ್ಯಮಗಳ ಮುಂದೆ ಮಾತ್ರವೇ? ಹೀಗೆ ಮುಂದುವರೆದರೆ ತಮ್ಮ ಕನಸು ಕನಸಾಗಿಯೇ ಉಳಿಯುವುದು ಮಾತ್ರ ಗ್ಯಾರೆಂಟಿ’ ಎಂದು ಅಶೋಕ್ ಕುಹಕವಾಡಿದ್ದಾರೆ.
ಗುರುವಾರ ರಾತ್ರಿ ನಡೆದ ಸಿದ್ದರಾಮಯ್ಯ ಬಣದ ಡಿನ್ನರ್ ಮೀಟಿಂಗ್ ರಾಜಕೀಯ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಎಲ್ಲದಕ್ಕೂ ಮಿಗಿಲಾಗಿ, ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಈ ಸಭೆ ಆಯೋಜಿಸಿದ್ದು ಸಾಕಷ್ಟು ಕುತೂಹಲಗಳನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
ಏತನ್ಮಧ್ಯೆ, ಊಹಾಪೋಹಗಳನ್ನು ಅಲ್ಲಗಳೆದಿರುವ ಸತೀಶ್ ಜಾರಕಿಹೊಳಿ ಹಾಗೂ ತಂಡ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭೋಜನಕೂಟ ಮಾಡಲಾಗಿದೆ ಅಷ್ಟೆ ಎಂದು ಹೇಳಿದೆ. ಆದರೆ, ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದ ಈ ಔತಣಕೂಟ ರಾಜ್ಯ ರಾಜಕೀಯ ವಲಯದ ಗಮನ ಸೆಳೆದಿರುವುದಂತೂ ನಿಜ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ