
ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿ ಕಾವೇರಿ (Cauvery) ಕೊಳ್ಳದ ರೈತರು ಮತ್ತೊಮ್ಮೆ ಬರಗಾಲದ ಆತಂಕದಲ್ಲಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ (Bengaluru) ಜನ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಕನ್ನಡಿಗರಿಗೆ ಮಹಾದ್ರೋಹ ಎಸಗುತ್ತಿದ್ದು, ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka) ಗಂಭೀರವಾಗಿ ಆರೋಪಿಸಿದ್ದಾರೆ. ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಜೀವನಾಡಿಯಾದ ಕೆಆರ್‌ಎಸ್ (KRS) ಜಲಾಶಯದಿಂದ ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಆರ್. ಅಶೋಕ್, ‘ಕಾಂಗ್ರೆಸ್ ಪಕ್ಷದ ಇತಿಹಾಸವೇ ಇಷ್ಟು. ಅಧಿಕಾರವಿಲ್ಲದಾಗ ‘‘ನಮ್ಮ ನೀರು ನಮ್ಮ ಹಕ್ಕು’’ ಎಂದು ನಾಟಕದ ಬೊಬ್ಬೆ ಹೊಡೆಯುತ್ತಾರೆ. ಆದರೆ ಅಧಿಕಾರ ಸಿಕ್ಕ ತಕ್ಷಣ ‘‘ನಮ್ಮ ನೀರು ತಮಿಳುನಾಡಿನ ಹಕ್ಕು’’ ಎಂದು ಶರಣಾಗುತ್ತಾರೆ. ಕೇವಲ ರಾಜಕೀಯ ಮೈತ್ರಿಗಾಗಿ, ಅಧಿಕಾರದ ಆಸೆಗಾಗಿ ಅಂದು ಡಿಎಂಕೆ (DMK), ಇಂದು ಟಿವಿಕೆ (TVK) ಜೊತೆ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಮಾಡುತ್ತಿದ್ದಾರೆ. ನಾಡಿನ ಜನತೆಯ ಹಿತ ಕಾಯದೆ ದೆಹಲಿ ಹೈಕಮಾಂಡ್ ಅಣತಿಯಂತೆ ಕನ್ನಡಿಗರ ಹಿತವನ್ನು ಬಲಿ ಕೊಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿರುವ ಅಶೋಕ್, ‘ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಯಾವ ಯಾತ್ರೆ ಮಾಡುತ್ತೀರಿ? ನೀರಿಲ್ಲದೆ, ಬೆಳೆಯಿಲ್ಲದೆ ಕಾವೇರಿ ಕೊಳ್ಳದ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡುತ್ತೀರಾ? ಅಥವಾ ಬೆಂಗಳೂರಿನ ಜನ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಕ್ಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕನ್ನಡ ನಾಡಿನ ಜನತೆಗೆ ಕನಿಷ್ಠ ನೀರಿನ ಭದ್ರತೆ ಹಾಗೂ ಹಕ್ಕನ್ನು ನೀಡಲಾಗದ ಈ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.
ಪ್ರತಿಪಕ್ಷ ನಾಯಕರ ಆರೋಪಗಳಿಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ನಾವು ಇದುವರೆಗೂ ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ಬಿಡುವುದಕ್ಕೆ ನಮ್ಮಲ್ಲಿ ನೀರು ಸಹ ಇಲ್ಲ. ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ ಇದೆ ಎಂದು ಹೇಳಿದ್ದಾರೆ. ಜತೆಗೆ, ಮೋಡ ಬಿತ್ತನೆಗೆ ಭಾನುವಾರ ಪ್ರಸ್ತಾಪವನ್ನೂ ಕೊಟ್ಟಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Mon, 29 June 26